ಧರ್ಮ ಸಂಸದ್: ನಿರೀಕ್ಷೆಗಳ ವಿಷಾದ..

0
1814

 

83ನೇ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು 15ನೇ ಧರ್ಮಸಂಸದ್‍ಗಳು ಬಹುತೇಕ ಜೊತೆಜೊತೆಯಾಗಿಯೇ ಆರಂಭಗೊಂಡು ಜೊತೆಜೊತೆಯಾಗಿಯೇ ಮುಕ್ತಾಯವನ್ನೂ ಕಂಡಿವೆ. ಈ ಆರಂಭ ಮತ್ತು ಅಂತ್ಯವನ್ನು ಬಿಟ್ಟರೆ ಉಳಿದಂತೆ ಇವೆರಡರ ನಡುವೆ ಹೋಲಿಕೆ, ಶೂನ್ಯ ಅನ್ನುವಷ್ಟು ಕಡಿಮೆ. ಕಾರ್ಯಕ್ರಮದ ಪ್ರಾಯೋಜಕರಿಂದ ಹಿಡಿದು, ನಿರ್ಣಯಗಳ ವರೆಗೆ; ಅತೀಗಳಿಂದ ಹಿಡಿದು ಭಾಷಣಗಳ ವರೆಗೆ ಎಲ್ಲದರಲ್ಲೂ ತದ್ವಿರುದ್ಧ ಅನ್ನಬಹುದಾದವುಗಳೇ ಹೆಚ್ಚಿವೆ. ಇದಕ್ಕಿರುವ ಪ್ರಮುಖ ಕಾರಣ ಏನೆಂದರೆ, ಒಂದನ್ನು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದರೆ ಇನ್ನೊಂದನ್ನು ಸರ್ವ ಕನ್ನಡಿಗರ ಪರವಾಗಿ ಆಯೋಜಿಸಲಾಗಿದೆ ಎಂಬುದು. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮಾತು ಗಳಿಗೆ ಸಮ್ಮೇಳನದಲ್ಲೇ ಪ್ರತಿರೋಧ ಎದುರಾಯಿತು. ಪ್ರತಿಭಟನೆಯೂ ನಡೆಯಿತು. ಭಗ್‍ವಾನ್‍ರ ಮಾತುಗಳನ್ನು ಸಭಿಕರು ಪ್ರಶ್ನಿಸಿದರು. ಈ ಪ್ರಕ್ರಿಯೆ ಸಮ್ಮೇಳನದ ಆರಂಭದಿಂದ ಕೊನೆಯ ವರೆಗೂ ಮುಂದುವರಿಯಿತು. ಧರ್ಮ ಸಂಸದ್ ಇದಕ್ಕೆ ವಿರುದ್ಧವಾಗಿ ನಡೆಯಿತು. ಅಲ್ಲಿ ಪ್ರತಿ ಮಾತುಗಳ ನಡುವೆಯೂ ಮಿತಿಗಳಿದ್ದುವು. ಮೀಸಲಾತಿಯ ವಿರುದ್ಧ ಕಾಶಿ ಬನಾರಸ್‍ನ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನರೇಂದ್ರನ್ ಸರಸ್ವತಿಯವರು ಮಾತಿಗಿಳಿದಾಗ ಸಂಘಟಕರು ಅವರನ್ನು ತಡೆದು ಮಾತಿನ ಪಥ ಬದಲಿಸಿದರು. 

ಪೇಜಾವರ ಮಠದ ವಿಶ್ವೇಶ್ವರ ತೀರ್ಥರು ಒಮ್ಮೆ ಸಂವಿಧಾನವನ್ನೇ ಬದಲಿಸ ಬೇಕು ಎಂಬರ್ಥದಲ್ಲಿ ಕರೆ ಕೊಟ್ಟಾಗಲೂ ಮತ್ತು ಆ ಬಳಿಕ ಸಂವಿಧಾನ ತಿದ್ದುಪಡಿಯ ಉದ್ದೇಶ ವನ್ನಷ್ಟೇ ತನ್ನ ಮಾತುಗಳು ಹೊಂದಿದ್ದುವು ಎಂದು ಸ್ಪಷ್ಟೀಕರಣ ಕೊಟ್ಟಾಗಲೂ ಧರ್ಮ ಸಂಸದ್‍ನಲ್ಲಿ ಯಾವ ಪ್ರತಿಕ್ರಿಯೆಯೂ ಗೋಚರಿಸಲಿಲ್ಲ. ಇನ್ನು, ಎರಡೂ ಕಡೆ ಮಂಡಿಸಲಾದ ನಿರ್ಣಯಗಳಲ್ಲೂ ಈ ವ್ಯತ್ಯಾಸಗಳು ಎದ್ದು ಕಾಣುವಂತಿತ್ತು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾದ ನಿರ್ಣಯ ಗಳು ಸಂಪೂರ್ಣವಾಗಿ ಕನ್ನಡ ನಾಡು, ನುಡಿಯ ಸಬಲೀಕರಣ ಮತ್ತು ರಕ್ಷಣೆಯನ್ನೇ ಕೇಂದ್ರೀಕರಿಸಿ ದ್ದರೆ ಧರ್ಮ ಸಂಸದ್‍ನ ನಿರ್ಣಯಗಳು ಧರ್ಮದೊಳಗಿನ ಸವಾಲುಗಳನ್ನು ಇಷ್ಟು ಸ್ಪಷ್ಟವಾಗಿ ಪ್ರತಿನಿಧಿಸುವಲ್ಲಿ ವಿಫಲವಾದುವು. ಮುಖ್ಯವಾಗಿ, ಅಸ್ಪ್ರಶ್ಯ ಆಚರಣೆಯನ್ನು ನಿವಾರಿಸುವುದಕ್ಕಾಗಿ ದಲಿತ ಮತ್ತು ಬ್ರಾಹ್ಮಣರ ನಡುವೆ ವಿವಾಹ ಸಂಬಂಧವನ್ನು ಏರ್ಪಡಿಸಬೇಕು ಎಂಬ ಸಾರ್ವಜನಿಕ ಆಗ್ರಹಕ್ಕೆ ನಿರ್ಣಯದಲ್ಲಿ ಯಾವ ಸ್ಥಾನವೂ ಸಿಕ್ಕಿಲ್ಲ. ಪಂಕ್ತಿ ಭೋಜನದ ಬಗ್ಗೆ ಧರ್ಮ ಸಂಸದ್‍ನಲ್ಲಿ ಅಸಂತೃಪ್ತಿ ವ್ಯಕ್ತವಾದರೂ ನಿರ್ಣಯದಲ್ಲಿ ಅದಕ್ಕೆ ಪಾಲು ಸಿಗಲಿಲ್ಲ. ಅದೇ ವೇಳೆ, ಹಿಂದೂ ಸಮುದಾಯದಲ್ಲಿ ಆಚರಣೆಯಲ್ಲಿರುವ ವಿವಿಧ ರೀತಿಯ ಮೌಢ್ಯಗಳ ಬಗ್ಗೆ ನಿರ್ಣಯದಲ್ಲಿ ಯಾವ ಬೆಳಕನ್ನೂ ಚೆಲ್ಲಲಾಗಿಲ್ಲ. ಮೌಢ್ಯ ಮತ್ತು ಅಮೌಢ್ಯ ಇವುಗಳ ನಡುವೆ ಸಾಕಷ್ಟು ಸಿಕ್ಕುಗಳಿವೆ. ಹಾಗಂತ, ಹಿಂದೂ ಸಮುದಾಯ ಮಾತ್ರ ಈ ಮೌಢ್ಯತೆಯಿಂದ ಸಂತ್ರಸ್ತವಾಗಿರುವುದಲ್ಲ. ಆದರೆ, 80%ದಷ್ಟಿರುವ ಬೃಹತ್ ಜನಸಂಪತ್ತನ್ನು ಇಡಿಯಾಗಿ ‘ಹಿಂದೂ ಸಮುದಾಯ’ ಎಂದು ಕರೆಯುವ ವಿಶ್ವ ಹಿಂದೂ ಪರಿಷತ್‍ನ ಮಟ್ಟಿಗೆ ಮೌಢ್ಯತೆ ಬಹುಮುಖ್ಯ ಇಶ್ಯೂ ಆಗಬೇಕಿತ್ತು. ಅಷ್ಟರ ಮಟ್ಟಿಗೆ ಸಾಮಾಜಿಕವಾಗಿ ಮೂಢ ನಂಬಿಕೆಗಳು ಮತ್ತು ಅದರ ಫಲಿತಾಂಶವಾದ ಶೋಷಣೆಗಳು ಸಮಾಜದಲ್ಲಿ ಅಸ್ತಿತ್ವದಲ್ಲಿವೆ. ಈ ದೇಶದ ಬೃಹತ್ ಹಿಂದೂ ಜನಸಮುದಾಯವನ್ನು ಪರಿಗಣಿಸಿ ಹೇಳುವುದಾದರೆ, ಗೋವು, ಲವ್ ಜಿಹಾದ್, ಶಾದಿಭಾಗ್ಯಗಳಂತವು ಧರ್ಮ ಸಂಸದ್‍ನ ಬಹು ಉಲ್ಲೇಖಿತ ಮತ್ತು ಬಹು ಚರ್ಚಿತ ವಿಷಯಗಳಾಗುವ ಬದಲು ದಲಿತ ಮತ್ತು ಬ್ರಾಹ್ಮಣರ ನಡುವೆ ವಿವಾಹ ಸಂಬಂಧ, ಸಹಪಂಕ್ತಿ ಭೋಜನ, ಮೌಢ್ಯ ನಿವಾರಣೆ, ಸರ್ವ ಭಾರತೀಯರ ಮಾನ-ಪ್ರಾಣ-ಸೊತ್ತುಗಳ ರಕ್ಷಣೆ, ಧರ್ಮದ ನೆಪದಲ್ಲಾಗುವ ಅನ್ಯಾಯ-ದೌರ್ಜನ್ಯಗಳ ಖಂಡನೆ.. ಇತ್ಯಾದಿಗಳು ಧರ್ಮ ಸಂಸದ್‍ನಲ್ಲಿ ಒತ್ತುಕೊಟ್ಟು ಚರ್ಚೆಗೊಳಗಾಗಬೇಕಿತ್ತು ಮತ್ತು ಸಮ್ಮೇಳನದ ನಿರ್ಣಯದಲ್ಲೂ ಅವಕ್ಕೆ ಸ್ಥಾನ ಸಿಗಬೇಕಿತ್ತು. ಗೋ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಪ್ರಕ್ರಿಯೆಗೆ ತಡೆಬಿದ್ದರೆ ಗೋಹತ್ಯೆ ನಿಷೇಧದ ಬೇಡಿಕೆಯಲ್ಲಿ ಬಹುದೊಡ್ಡ ಮೈಲುಗಲ್ಲನ್ನು ಸಾಧಿಸಿದಂತೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ವಿದ್ದೂ ಕಳೆದ ಮೂರೂವರೆ ವರ್ಷಗಳಲ್ಲಿ ಇದು ನೆರವೇರದೇ ಇರುವುದಕ್ಕೆ ಸಮ್ಮೇಳನದಲ್ಲಿ ಸೌಮ್ಯ ಅತೃಪ್ತಿಯೊಂದು ಕಾಣಿಸಿಕೊಂಡದ್ದನ್ನು ಬಿಟ್ಟರೆ ನಿರ್ಣಯದಲ್ಲಿ ಈ ಅಂಶ ಪ್ರಸ್ತಾಪವೇ ಆಗಿಲ್ಲ. ಇವೆಲ್ಲ ದರ ಜೊತೆಗೇ ಈ ದೇಶದಲ್ಲಿ ಒಂದಷ್ಟು ಮುಸ್ಲಿಮರು ಮತ್ತು ಮತ್ತೊಂದಿಷ್ಟು ಕ್ರೈಸ್ತರೂ ಇದ್ದರೆ. 80%ದಷ್ಟಿರುವ ಬೃಹತ್ ಸಮುದಾಯವು ಈ ಸಣ್ಣ ಗುಂಪಿಗೆ ಕೊಡುವ ಭರವಸೆಗಳೇನು, ಅವರ ಕಲ್ಯಾಣ-ರಕ್ಷಣೆಗಾಗಿ ಹಾಕಿಕೊಂಡಿರುವ ಯೋಜನೆಗಳೇನು, ಅವರ ಬಗೆಗಿನ ದೃಷ್ಟಿಕೋನಗಳೇನು ಎಂಬುದರ ಬಗ್ಗೆ ನಿರ್ಣಯದಲ್ಲಿ ಏನೇನೂ ಹೇಳಲಾಗಿಲ್ಲ. ಯಾವುದೇ ಸಮಾಜದ ಸಣ್ಣ ಗುಂಪು ಬೃಹತ್ ಗುಂಪಿನಿಂದ ರಕ್ಷಣೆಯ ಭರವಸೆಯನ್ನು ನಿರೀಕ್ಷಿಸುತ್ತದೆ. ಸೌಹಾರ್ದವನ್ನು ಬಯಸುತ್ತದೆ. ಆದರೆ, ಧರ್ಮ ಸಂಸದ್‍ನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಈ ಎರಡು ಪುಟ್ಟ ಗುಂಪನ್ನು ಆರೋಪಿ
ಸ್ಥಾನದಲ್ಲಿ ಇರಿಸುವ ರೀತಿಯಲ್ಲಿ ಇತ್ತೇ ಹೊರತು ಅವರಲ್ಲಿ ಭರವಸೆ ತುಂಬುವ ಯಾವುದೂ ಇರಲಿಲ್ಲ.
ನಿಜವಾಗಿ, ಯಾವುದೇ ಧರ್ಮವೊಂದರ ನೇತೃತ್ವ ಸ್ಥಾನದಲ್ಲಿರುವವರು ತಮ್ಮ ಧರ್ಮದೊಳಗಿನ ಬೆಳವಣಿಗೆಗಳ ಬಗ್ಗೆ, ಸರಿ-ತಪ್ಪುಗಳ ಬಗ್ಗೆ ಮತ್ತು ಭವಿಷ್ಯದ ಯೋಜನೆಗಳನ್ನು ಸಿದ್ಧಪಡಿಸುವ ಬಗ್ಗೆ ಚಿಂತನ-ಮಂಥನ ನಡೆಸುವುದು ಯಾವ ಕಾರಣಕ್ಕೂ ಆಕ್ಷೇಪಾರ್ಹವೋ ಖಂಡನಾರ್ಹವೋ ಅಲ್ಲ. ಇವತ್ತು ಪ್ರತಿದಿನ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಆಧುನಿಕ ಪೀಳಿಗೆಯಂತೂ ಈ ಆವಿಷ್ಕಾರಗಳ ನಡುವೆ ಕೂತು ಧರ್ಮ-ಆಚಾರ-ಲೌಕಿಕ-ಅಲೌಕಿಕತೆಗಳನ್ನು ಮುಖಾಮುಖಿಗೊಳಿಸಿ ಪ್ರಶ್ನಿಸುತ್ತಿವೆ. ಧರ್ಮವೇ ಎಲ್ಲ ಹಿಂಸೆ-ಮೌಢ್ಯ-ಶೋಷಣೆಗಳಿಗೆ ಕಾರಣ ಎಂದು ತೀರ್ಪು ಕೊಡುವ ಸ್ಥಿತಿಯಲ್ಲಿ ಅವು ಬಂದು ಕೂತಿವೆ. ಹೀಗಿರುವಾಗ, ಹಿಂದೂ ಧರ್ಮದ ಸ್ವಾಮೀಜಿಗಳು ಒಂದೆಡೆ ಕೂತು ಅವಲೋಕನ ನಡೆಸುವುದು ಅತ್ಯಂತ ಒಳ್ಳೆಯ ಬೆಳವಣಿಗೆ. ಅದೇವೇಳೆ, ಹಿಂದೂ ಧರ್ಮದ ಹೊರಗಡೆ ಪುಟ್ಟ ಗೂಡು ಕಟ್ಟಿಕೊಂಡಿರುವ ಮುಸ್ಲಿಮ್-ಕ್ರೈಸ್ತ ಧರ್ಮದ ಅನುಯಾಯಿಗಳಿಗಂತೂ ಈ ಬೆಳವಣಿಗೆಯ ಬಗ್ಗೆ ವಿಶೇಷ ಆಸಕ್ತಿ ಇರುವುದು ಸಹಜವೇ ಆಗಿತ್ತು. ಆದರೆ ಈ ಆಸಕ್ತಿಗೆ ಬಲ ತುಂಬಬಹುದಾದ ಯಾವುದೂ ಧರ್ಮ ಸಂಸದ್‍ನಿಂದ ಕೇಳಿಬರಲಿಲ್ಲ ಎಂಬುದು ಅತ್ಯಂತ ವಿಷಾದನೀಯ. ಅದರ ಬದಲು ಅವರನ್ನೇ ಆರೋಪಿ ಸ್ಥಾನದಲ್ಲಿ ಕೂರಿಸಿ ಬೆದರಿಸುವ ಧಾಟಿಯ ಮಾತುಗಳೇ ಧರ್ಮ ಸಂಸದ್‍ನಿಂದ ಕೇಳಿಬಂದುವು. ನಿಜವಾಗಿ, ಭಯದ ನೆರಳಲ್ಲಿ ಕಟ್ಟಿ ಹಾಕುವುದ ಕ್ಕಿಂತ ವಿಶ್ವಾಸಪೂರ್ಣ ಮತ್ತು ಅಪ್ಪುಗೆ ಭಾವದ ನುಡಿಗಳು ಇಂದಿನ ಅಗತ್ಯವಾಗಿತ್ತು. ಈ ಅಗತ್ಯವನ್ನು ಪೂರೈಸುವುದಕ್ಕೆ ಧರ್ಮ ಸಂಸದ್‍ನಿಂದ ಖಂಡಿತ ಸಾಧ್ಯವಿತ್ತು. ಹಾಗಾಗದಿರುವುದರಲ್ಲಿ ನೋವಿದೆ.