ಸನ್ಮಾರ್ಗ ವಾರ್ತೆ
ತಿರುವನಂತಪುರಂ: ಜನನ ಪ್ರಮಾಣಪತ್ರ ಮತ್ತಿತರ ದಾಖಲೆಗಳಲ್ಲಿ ತಾಯಿಯ ಹೆಸರನ್ನಷ್ಟೇ ಸೇರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಾಯಿಯ ಹೆಸರನ್ನಷ್ಟೇ ಸೇರಿಸುವುದು ವ್ಯಕ್ತಿಯ ಹಕ್ಕು ಎಂದು ತೀರ್ಪಿನಲ್ಲಿ ನ್ಯಾಯಾಧೀಶರು ಹೇಳಿದ್ದಾರೆ.
ಎಲ್ಲ ನಾಗರಿಕರನ್ನು ರಕ್ಷಿಸುವ ಕರ್ತವ್ಯ ಪ್ರಭುತ್ವದ್ದಾಗಿದೆ. ವಿವಾಹೇತರವಾಗಿ ಮತ್ತು ಅತ್ಯಾಚಾರದಿಂದಾಗಿ ಗರ್ಭ ಧರಿಸಿದವರ ಖಾಸಗಿತನ, ಘನತೆ ಹಾಗೂ ಸ್ವಾತಂತ್ರ್ಯದ ಹಕ್ಕನ್ನು ಸಂವಿಧಾನದಲ್ಲಿ ರಕ್ಷಿಸಲಾಗಿದೆ ಎಂದು ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಾಭಾರತದಲ್ಲಿ ಕರ್ಣನ ಅವಸ್ಥೆಯ ಬಗ್ಗೆ ದಿವಂಗತ ಕಲಾಮಂಡಲಂ ಹೈದರಾಲಿ ಮತ್ತು ಕಲಾಮಂಡಲಂ ಗೋಪಿಯಂತಹ ದಂತಕಥೆಗಳು ಹಾಡಿದ ಕಥಕ್ಕಳಿ “ಪದಂ” ಅನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಕುಂಞಿಕೃಷ್ಣನ್ ರವರು “ತಂದೆ-ತಾಯಿಯರ ಇರುವಿಕೆ ತಿಳಿಯದೆ ತನಗಾಗುವ ಅವಮಾನದಿಂದ ತನ್ನ ಬದುಕನ್ನು ಶಪಿಸುವ “ಕರ್ಣ”ನಂಥ ಪಾತ್ರಗಳಿಲ್ಲದ ಸಮಾಜ ನಮಗೆ ಬೇಕು. ನಮ್ಮ ಸಂವಿಧಾನ ಮತ್ತು ಸಾಂವಿಧಾನಿಕ ನ್ಯಾಯಾಲಯಗಳು ಅವರೆಲ್ಲರನ್ನೂ ಮತ್ತು ನವಯುಗದ ಕರ್ಣರನ್ನೂ ರಕ್ಷಿಸುತ್ತದೆ ಮತ್ತು ಇತರ ನಾಗರಿಕರಂತೆ ಘನತೆ ಮತ್ತು ಹೆಮ್ಮೆಯಿಂದ ಬದುಕುವ ಹಕ್ಕನ್ನು ನೀಡುತ್ತದೆ” ಎಂದರು.
ಜನನ ಪ್ರಮಾಣಪತ್ರ, ಗುರುತಿನ ಪ್ರಮಾಣಪತ್ರಗಳು ಮತ್ತಿತರ ದಾಖಲೆಗಳಲ್ಲಿ ತನ್ನ ತಾಯಿಯ ಹೆಸರನ್ನಷ್ಟೇ ಸೇರಿಸುವುದು ವ್ಯಕ್ತಿಯ ಹಕ್ಕು ಎಂಬುದು ಸ್ಪಷ್ಟ. ಈ ದೇಶದಲ್ಲಿ ಅತ್ಯಾಚಾರಕ್ಕೊಳಗಾದವರ ಮತ್ತು ಅವಿವಾಹಿತ ತಾಯಂದಿರ ಮಕ್ಕಳಿದ್ದಾರೆ. ಅವರ ಖಾಸಗಿತನ, ಘನತೆ ಹಾಗೂ ಸ್ವಾತಂತ್ರ್ಯದ ಹಕ್ಕನ್ನು ಯಾವುದೇ ಅಧಿಕಾರಿ ಮೊಟಕುಗೊಳಿಸಲು ಸಾಧ್ಯವಿಲ್ಲ. ಅಂಥವರ ಗುರುತು ಮತ್ತು ಗೌಪ್ಯತೆ ಬಹಿರಂಗಪಡಿಸದೆ, ಪ್ರಭುತ್ವ ಇತರೆ ನಾಗರಿಕರಿಗೆ ಸಮನಾಗಿ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ಅವರು ಊಹೆಗೂ ಮೀರಿದ ಮಾನಸಿಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ.
ಅವಿವಾಹಿತ ತಾಯಿಯ ಮಗು ಕೂಡ ದೇಶದ ಪ್ರಜೆಯಾಗಿದ್ದು, ನಮ್ಮ ಸಂವಿಧಾನದಲ್ಲಿ ಅವನು/ ಅವಳಿಗೆ ಒದಗಿಸಲಾದ ಯಾವುದೇ ಮೂಲಭೂತ ಹಕ್ಕುಗಳನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆತ/ ಆಕೆ ಅವಿವಾಹಿತ ತಾಯಿಗೆ ಮಾತ್ರವಷ್ಟೇ ಮಕ್ಕಳಲ್ಲ, ಅವರು ಭಾರತದ ಮಕ್ಕಳೂ ಹೌದು.












