ಚೀನಾದಲ್ಲಿ ಉಯಿಘುರ್​ ಮುಸ್ಲಿಮರ ಮೇಲೆ ಭೀಕರ ದೌರ್ಜನ್ಯ: ವರದಿ ಬಿಡುಗಡೆಗೊಳಿಸಿ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ

0
443

ಸನ್ಮಾರ್ಗ ವಾರ್ತೆ

ಚೀನಾದ ಷಿನ್‌ಜಿಯಾಂಗ್‌ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಮಿಚೆಲ್ ಬ್ಯಾಚೆಲೆಟ್ ಅವರು ತಮ್ಮ ನಾಲ್ಕು ವರ್ಷಗಳ ಅಧಿಕಾರಾವಧಿ ಮುಗಿಯುವ 13 ನಿಮಿಷಗಳ ಮೊದಲು (ಬುಧವಾರ ರಾತ್ರಿ 11.47ಕ್ಕೆ) ಚೀನಾಗೆ ಸಂಬಂಧಿಸಿದ ವರದಿಯನ್ನು ಜಿನಿವಾದಲ್ಲಿ ಬಿಡುಗಡೆ ಮಾಡಿದ್ದಾರೆ.

ಈ ವರದಿಯನ್ನು ಕಳೆದ ಒಂದು ವರ್ಷದಿಂದ ತಯಾರಿಸಲಾಗಿದೆ. ಚಿಲಿ ದೇಶದ ಮಾಜಿ ಅಧ್ಯಕ್ಷರೂ ಆಗಿರುವ ಮಿಚೆಲ್‌, ಬೀಜಿಂಗ್‌ನ ತೀವ್ರ ಒತ್ತಡದ ನಡುವೆಯೂ ವರದಿಯನ್ನು ಪ್ರಕಟಿಸಿದ್ದಾರೆ. ‘ನಾನು ನನ್ನ ಅಧಿಕಾರಾವಧಿ ಮುಗಿಯುವ ಮುನ್ನ ವರದಿ ಬಿಡುಗಡೆ ಮಾಡುವುದಾಗಿ ಹೇಳಿದ್ದೆ. ಅದನ್ನು ಮಾಡಿದ್ದೇನೆ’ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

‘ಚೀನಾದ ಉನ್ನತ ಮತ್ತು ಪ್ರಾದೇಶಿಕ ಆಡಳಿತಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದೆ’ ಎಂದೂ ಅವರು ಹೇಳಿದ್ದಾರೆ..

ಷಿನ್‌ಜಿಯಾಂಗ್‌ ಪ್ರದೇಶದಲ್ಲಿ ಉಯಿಘುರ್‌ ಹಾಗೂ ಇತರ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 10 ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂಬ ಆರೋಪಗಳು ಕಳೆದ ಒಂದು ವರ್ಷದಿಂದಲೂ ಚೀನಾ ವಿರುದ್ಧ ಕೇಳಿಬಂದಿವೆ. ಆದರೆ, ಚೀನಾ ತನ್ನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದೆ.

ಉಗ್ರವಾದವನ್ನು ಹತ್ತಿಕ್ಕಲು ಷಿನ್‌ಜಿಯಾಂಗ್‌ನಲ್ಲಿ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವುದಾಗಿ ಪ್ರತಿಪಾದಿಸಿದ ಕ್ಸಿ ಜಿನ್ ಪಿಂಗ್ ಉಯಿಘುರ್‌ ಸ್ವಾಯತ್ತ ಪ್ರದೇಶದಲ್ಲಿನ (ಎಕ್ಸ್‌ಯುಎಆರ್‌) ಪರಿಸ್ಥಿತಿ ಅವಲೋಕನದ ಸಲುವಾಗಿ ಸಂಪೂರ್ಣ ವರದಿ ಸಂಗ್ರಹಿಸಲು ಮಿಚೆಲ್‌ ನಿರ್ಧರಿಸಿದ್ದರು. ಅದರಂತೆ ತಯಾರಿಸಲಾಗಿರುವ ವರದಿಯಲ್ಲಿ, ಸರ್ಕಾರವು ಭಯೋತ್ಪಾದನೆ ನಿಗ್ರಹ ಮತ್ತು ಉಗ್ರವಾದದ ವಿರುದ್ಧದ ಕಾರ್ಯಾಚರಣೆಗಳನ್ನು ಅನುಷ್ಠಾನಗೊಳಿಸುವ ವೇಳೆ ಎಕ್ಸ್‌ಯುಎಆರ್‌ನಲ್ಲಿ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಚೀನಾ ಹೇಳಿಕೊಳ್ಳುತ್ತಿರುವ ವೃತ್ತಿಪರ ತರಬೇತಿ ಕೇಂದ್ರಗಳಲ್ಲಿ ಇರುವವರ ಚಿಕಿತ್ಸೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ. ಬಲವಂತವಾಗಿ ವೈದ್ಯಕೀಯ ಚಿಕಿತ್ಸೆಗಳು, ಚಿತ್ರ ಹಿಂಸೆ ನೀಡಲಾಗುತ್ತಿದೆ. ಲೈಂಗಿಕ ಕಿರುಕುಳ ಹಾಗೂ ಲಿಂಗಾಧಾರಿತ ದೌರ್ಜ್ಯವೂ ನಡೆಯುತ್ತಿದೆ ಎಂಬ ಆರೋಪಗಳು ವಿಶ್ವಾಸಾರ್ಹವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸರ್ಕಾರವು ಭಯೋತ್ಪಾದನೆ ನಿಗ್ರಹ ನೆಪದಲ್ಲಿ ಹಲವಾರು “ಉಯಿಘುರ್” ಮುಸ್ಲಿಮರನ್ನು ಚೀನಿ ಸರ್ಕಾರ ಹತ್ಯೆ ಮಾಡಿದೆ. ಇದರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ.

“ಉಯಿಘುರ್ ಮತ್ತು ಇತರ ಮುಸ್ಲಿಂ ಗುಂಪುಗಳು ಚೀನಾದಲ್ಲಿ ತಾರತಾಮ್ಯ ಎದುರಿಸುತ್ತಿದ್ದಾರೆ. ಕಾರಣವಿಲ್ಲದೇ ಬಂಧನ, ಸಾಮೂಹಿಕ ಹಿಂಸಾಚಾರ ಹಾಗೂ ಮುಂತಾದ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಷಿನ್‌ಜಿಯಾಂಗ್‌ನಲ್ಲಿ ವಿವರಿಸಿದ ಪರಿಸ್ಥಿತಿಯು ಕಠೋರವಾಗಿದೆ. ಹೀಗಾಗಿ ಚೀನಾದ ಮೇಲೆ ಗಮನಹರಿಸುವಂತೆ ಯುಎನ್‌ ವರದಿಯು ವಿಶ್ವವನ್ನು ಒತ್ತಾಯಿಸಿದೆ.

ಬಲವಂತದ ವೈದ್ಯಕೀಯ ಚಿಕಿತ್ಸೆ, ಕುಟುಂಬ ಯೋಜನೆ ಮತ್ತು ಜನನ ನಿಯಂತ್ರಣ ನೀತಿಗಳನ್ನು ಚೀನಾ ಜಾರಿ ಮಾಡುತ್ತಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರ್ಬಂಧಿಸಲು ಅಸ್ಪಷ್ಟ ರಾಷ್ಟ್ರೀಯ ಭದ್ರತಾ ಕಾನೂನುಗಳನ್ನು ಬಳಸುತ್ತಿದೆ. ತನಿಖಾಧಿಕಾರಿಗಳು ಚೀನಾ ವಿರೋಧದ ನಡುವೆಯೂ ಅಲ್ಲಿನ ಅಪರಾಧಗಳ ಕುರಿತು ವಿಶ್ವಾಸಾರ್ಹ ಪುರಾವೆಗಳನ್ನು ಬಹಿರಂಗಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುದೀರ್ಘವಾದ ವರದಿಯನ್ನು ಪ್ರಕಟಿಸಿರುವ ಮಿಚೆಲ್ ಬ್ಯಾಚೆಲೆಟ್, ತರಬೇತಿ ಕೇಂದ್ರಗಳು, ಜೈಲುಗಳಲ್ಲಿ ಬಂಧಿತರಾಗಿರುವ ಎಲ್ಲರನ್ನು ಬಿಡುಗಡೆ ಮಾಡಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಚೀನಾ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

ವಿರೋಧ ವ್ಯಕ್ತಪಡಿಸಿದ ಚೀನಾ

ಈ ವರದಿಯನ್ನು ಮೊದಲೇ ನೋಡಿರುವ ಚೀನಾ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದೆ. ವರದಿಯ ಬಿಡುಗಡೆಗೂ ಮುನ್ನ ಮಾತನಾಡಿದ ವಿಶ್ವಸಂಸ್ಥೆಯ ಚೀನಾದ ರಾಯಭಾರಿ ಜಾಂಗ್ ಜುನ್, ಚೀನಾದ ವಿರುದ್ಧ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.

“ನಮ್ಮ ದೇಶದಲ್ಲಿ ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿಲ್ಲ. ಈ ವರದಿಯನ್ನು ನಾವು ಒಪ್ಪುವುದಿಲ್ಲ” ಎಂದು ನ್ಯೂಯಾರ್ಕ್‌ನಲ್ಲಿರುವ ಚೀನಾದ ರಾಯಭಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ನಾವು ಕಟ್ಟುನಿಟ್ಟಾದ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿ ಮಾಡಿದ್ದೇವೆ. ಚೀನಾದ ಅಭಿವೃದ್ಧಿಯನ್ನು ತಡೆಯವುದು ಇದರ ಉದ್ದೇಶವಾಗಿದೆ. ಈ ಸುಳ್ಳ ವರದಿಗಳು ಚೀನಾದ ಸ್ಥಿರತೆಯನ್ನು ಹಾಳುಮಾಡಲು ಸಾಧ್ಯವಾಗುವುದಿಲ್ಲ’ ಎಂದು ಚೀನಾ ರಾಯಭಾರಿ ಜಾಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.