ಟೊಮೆಟೊ ಬೆಳೆಗಾರರಿಗೆ ಸಲಹೆ…

0
1505

ಸನ್ಮಾರ್ಗ ವಾರ್ತೆ

ಕೋಲಾರ: ಕೋಲಾರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಇಲಾಖೆ, ಕೋಲಾರ ಅಧಿಕಾರಿಗಳ ತಂಡವು ಕೋಲಾರ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಕೆಲವು ರೈತರ ಸಮಸ್ಯಾತ್ಮಕ ಟೊಮೆಟೊ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸದರಿ ರೈತರು ಟಮೋಟೋ ಬೆಳೆಯನ್ನು ಬೆಳೆದಿದ್ದು, ಹಣ್ಣಿನ ಬಣ್ಣವು ಕೆಂಪಾಗಿರದೇ, ಗುಲಾಬಿ ಬಣ್ಣದಿಂದ ಕೂಡಿದ್ದು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಕಳೆದುಕೊಂಡಿದೆ.

ಸದರಿ ಟೊಮೆಟೊ ತಾಕುಗಳಿಗೆ ಭೇಟಿ ನೀಡಿದ ತಂಡದ ವಿಜ್ಞಾನಿಗಳು ಮತ್ತು ಅಧಿಕಾರಿಗಳ ತಂಡವು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಟೊಮೆಟೊ ಹಣ್ಣು ಗುಲಾಬಿ ಬಣ್ಣದಲ್ಲಿ ಕಾಣಲು ಲೈಕೋಪಿನ್ ಅಂಶ ಕಾರಣವಾಗಿರುತ್ತದೆ ಎಂದಿದೆ. ಹಣ್ಣಿನಲ್ಲಿ ಲೈಕೋಪಿನ್ ಅಂಶ ಅಭಿವೃದ್ಧಿ ಹೊಂದಲು ವಾತಾವರಣ ಹೆಚ್ಚಿನ ಪರಿಣಾಮ ಬೀರುತ್ತದೆ. ದಿನದ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್ ನಿಂದ 28 ಡಿಗ್ರಿ ಸೆಲ್ಸಿಯಸ್‌ನ ವರೆಗೆ ಇದ್ದಾಗ ಮಾತ್ರ ಹಣ್ಣು ಕೆಂಪಾಗಿ ಕಂಡು ಬರುತ್ತದೆ. 20 ಡಿಗ್ರಿ ಸೆ. ಕ್ಕಿಂತ ಕಡಿಮೆ ಅಥವಾ 30 ಡಿಗ್ರಿ ಸೆ. ಗಿಂತ ಜಾಸ್ತಿ ಉಷ್ಣಾಂಶ ಕಂಡು ಬಂದಾಗ, ಲೈಕೋಪಿನ್ ಉತ್ಪತ್ತಿ ಕುಂಠಿತಗೊಂಡು ಹಣ್ಣುಗಳು ಗುಲಾಬಿಯಾಗುವ ಸಾಧ್ಯತೆಗಳಿವೆ. ಪೋಷಕಾಂಶಗಳನ್ನು ಉಪಯೋಗಿಸುವಾಗ ಹೆಚ್ಚಿನ ಮುತವರ್ಜಿಯನ್ನು ವಹಿಸಬೇಕು ಎಂದು ತಂಡವು ಟೊಮೆಟೊ ಬೆಳೆಗಾರರಿಗೆ ತಿಳಿಸಿದೆ.

ಟೊಮೆಟೊ ಬೆಳೆಯನ್ನು ನಾಟಿ ಮಾಡುವಾಗ ಮಣ್ಣಿಗೆ ಡಿ.ಎ.ಪಿ. ಬದಲಾಗಿ ಎಸ್.ಎಸ್.ಪಿ. ಉಪಯೋಗಿಸುವದರಿಂದ ರಂಜಕದ ಜೊತೆಗೆ ಸಲ್ಟರ್, ಕ್ಯಾಲ್ಸಿಯಂ ಮತ್ತು ಲಘು ಪೋಷಕಾಂಶಗಳನ್ನು ಒದಗಿಸಿದಂತಾಗುತ್ತದೆ. ಡಿ.ಎ.ಪಿ. ಉಪಯೋಗಿಸುವುದರಿಂದ ತಾತ್ಕಾಲಿಕವಾಗಿ ಮಣ್ಣಿನ ರಸಸಾರದಲ್ಲಿ ಬದಲಾವಣೆ ಕಂಡು ಬರುತ್ತದೆ. ಟೊಮೆಟೊ ಬೆಳೆಯು ಹೂ ಬಿಡುವ ಹಂತದಿಂದ ಕೊನೆಯ ಕಟಾವು ಆಗುವವರೆಗೂ, ಮಣ್ಣಿನ ಫಲವತ್ತತೆ ಆಧಾರದ ಮೇಲೆ ಪ್ರತಿ 15 ದಿನಗಳಿಗೊಮ್ಮೆ ಸಿಟ್ ಆಫೊಟ್ಯಾಷ್ ಅನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ನಂತೆ ಬೆರೆಸಿ ಸಿಂಪಡಿಸಬೇಕು ಹಾಗೂ ಲಘು ಪೋಷಕಾಂಶಗಳ ಮಿಶ್ರಣವನ್ನು ಅಂದರೆ ತರಕಾರಿ ಸ್ಪೆಷಲ್ ಅನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ನಂತೆ ಬೆರೆಸಿ ಹಾಗೂ ಪ್ರತಿ 15 ಲೀಟರ್ ನೀರಿನ ಮಿಶ್ರಣಕ್ಕೆ ಒಂದು ಶ್ಯಾಂಪು ಪ್ಯಾಕೆಟ್ ಮತ್ತು ಒಂದು ನಿಂಬೆ ಹಣ್ಣಿನ ರಸವನ್ನು ಬೆರೆಸಿ ಪ್ರತಿ 15 ದಿನಗಳ ಅಂತರದಲ್ಲಿ ಸಿಂಪರಣೆ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.