ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಕೊಡುಗೆ ಅಪಾರ: ಸಂಸದ ಎಸ್.ಮುನಿಸ್ವಾಮಿ

0
218

ಸನ್ಮಾರ್ಗ ವಾರ್ತೆ

ಕೋಲಾರ: ನಮ್ಮ ದೇಶದಲ್ಲಿ ಶಿಕ್ಷಣದ ವ್ಯವಸ್ಥೆಯು ಇತರ ದೇಶಗಳಿಗಿಂತ ಅತ್ಯುತ್ತಮವಾಗಿದೆ. ಉತ್ತಮ ಶಿಕ್ಷಣದಿಂದ ವಿದ್ಯಾರ್ಥಿಗಳು ಸಾಧನೆ ಮಾಡಿ ದೇಶದ ಉನ್ನತ ಸ್ಥಾನಗಳನ್ನು ಅಲಂಕರಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಈ ಕಾರಣದಿಂದ ದೇಶದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು.

ಇಂದು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಭಾರತರತ್ನ ಡಾ|ಎಸ್ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಪ್ರಯುಕ್ತ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಹಾಗೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಬೋಧಿಸಬೇಕು. ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿಸಿ ಸನ್ಮಾರ್ಗದಲ್ಲಿ ನಡೆಸುವಂತಹ ಗುಣ ಶಿಕ್ಷಕರಲ್ಲಿ ಇರುತ್ತದೆ. ಶಿಕ್ಷಕರಾದವರು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಅದಕ್ಕಾಗಿ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಇದರಿಂದ ಶಾಲಾ ಮಕ್ಕಳಲ್ಲಿರುವ ಕೌಶಲ್ಯ ಪ್ರತಿಭೆ, ಹೆಚ್ಚಲಿದೆ. ಅನಾದಿ ಕಾಲದಿಂದಲು ಶಿಕ್ಷಕರಿಗೆ ಗುರುವಿನ ಸ್ಥಾನ ನೀಡಿ ಗೌರವಿಸಿದ ಪರಂಪರೆ ನಮ್ಮ ದೇಶದ್ದಾಗಿದೆ. ಶಿಕ್ಷಕರೆಲ್ಲರೂ ಮಕ್ಕಳನ್ನು ದೇಶದ ಶಕ್ತಿಯನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಹೊಂದಬೇಕು ಎಂದು ಹೇಳಿದರು. ಶಿಕ್ಷಕರು ಒಳ್ಳೆಯ ಸೇವೆಯನ್ನು ನೀಡಿದರೆ ನಿಮ್ಮನ್ನು ಮುಂದಿನ ದಿನಗಳಲ್ಲಿ ನೆನಪಿಸಿಕೊಳ್ಳುವರು, ದೇಶದ ಸ್ವಾತಂತ್ರ ಪೂರ್ವದಲ್ಲಿ ಶಿಕ್ಷಣದಿಂದ ವಂಚಿತರಾದ ಸಮುದಾಯದಲ್ಲಿ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿಯಾಗಿದ್ದ ಸಾವಿತ್ರಿಬಾಯಿ ಪುಲೆ ಅವರನ್ನು ಈ ದಿನ ಸ್ಮರಿಸುವುದು ಅವರಿಗೆ ನೀಡುವ ಗೌರವವಾಗಿದೆ.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗುರುಭವನವನ್ನು ಸಿ.ಎಸ್.ಆರ್ ಅನುದಾನ ಮತ್ತು ಜಿಲ್ಲಾ ಪಂಚಾಯಿತಿ ಮತ್ತು ಟಿ.ಎಸ್.ಪಿ ಅನುದಾನದಲ್ಲಿ ನಿರ್ಮಿಸಲಾಗುತ್ತದೆ ಹಾಗೂ ಸಂಸದರ ಅನುದಾನದಿಂದ 50 ಲಕ್ಷ ರೂ.ಗಳನ್ನು ಗುರು ಭವನ ನಿರ್ಮಾಣಕ್ಕೆ ನೀಡಿದ್ದೇನೆ, ಸರ್ಕಾರ ವಿದ್ಯಾರ್ಥಿಗಳ ಸುಲಭ ಕಲಿಕೆಗೆ ಉಚಿತ ಸಮವಸ್ತ್ರ, ಉಚಿತ ಶಿಕ್ಷಣ, ಬಿಸಿ ಊಟದಂತಹ ಆನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಅವರು ಮಾತನಾಡಿ ಈ ದಿನ ನಾವೆಲ್ಲರೂ ನೆನಪಿಸಿಕೊಳ್ಳ ಬೇಕಿರುವುದು ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಇವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿ ನಂತರ ದೇಶದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾಗಿ ಉತ್ತಮ ಸೇವೆ ಸಲ್ಲಿಸಿದ ಮಹಾನ್ ತತ್ವಜ್ಞಾನಿ. ಇವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದಂತಹ ಸೇವೆಯನ್ನು ಗುರುತಿಸಿ ಅಂದಿನಿಂದ ಸರ್ಕಾರ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಾ ಬಂದಿದೆ. ಪ್ರತಿಯೊಂದು ಮಗುವಿಗೂ ತಾಯಿ ಮೊದಲ ಗುರುವಾಗಿದ್ದು, ಶಿಕ್ಷಕ ಆ ಮಗುವಿನ ವ್ಯಕ್ತಿತ್ವ ನಿರ್ಮಿಸಿ ಜೀವನದ ಉದ್ದಕ್ಕೂ ವ್ಯಕ್ತಿಯ ಜೊತೆಗಿರುತ್ತಾನೆ. ಸಮಾಜದಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆ ಏನಾಗಿದೆ ಎಂದರೆ ಸರ್ಕಾರಿ ಶಾಲೆಗಳಿಗೆ ಯಾರು ಸಹ ಅವರ ಮಕ್ಕಳನ್ನು ಸೇರಿಸುತ್ತಿಲ್ಲ ಎಲ್ಲರೂ ಇಂಗ್ಲೀಷ್ ವ್ಯಾಮೋಹಕ್ಕೆ ಒಳಪಟ್ಟು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಕರು ಯಾವುದೇ ಬೇಧ ಭಾವ ತೋರದೆ ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ತಿಳಿಸಿದರು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ಮುಖ್ಯ ಶಿಕ್ಷಕರ ಪ್ರಾಮಾಣಿಕ ಸೇವೆಯಿಂದ ಸದೃಢ ದೇಶ ಕಟ್ಟಲು ಸಾಧ್ಯ ಗೌರವಯುತ ಹಾಗೂ ಶ್ರೇಷ್ಠ ಸ್ಥಾನಮಾನ ಹೋದಿರುವ ಶಿಕ್ಷಕರು ತಮ್ಮ ಆರ್ಪಣಾ ಮನೋಭಾವದ ಸೇವೆಯ ಮೂಲಕ ವೃತ್ತಿಯ ಘನತೆಯನ್ನು ಹೆಚ್ಚಿಸಬೇಕು. ಹಾಗೂ ವಿದ್ಯಾರ್ಥಿಗಳನ್ನು ದೇಶದ ಅತ್ಯುತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಅವರು ಮಾತನಾಡಿ ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗೆ ಶಿಸ್ತು, ಒಳ್ಳೆಯ ವಿಚಾರ, ಹೊಸ ಹೊಸ ವಿಷಯಗಳನ್ನು ಬೋಧಿಸಿದರೆ ಸಮಾಜದಲ್ಲಿ ಒಂದು ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ, ಗುರುಗಳು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉತ್ತಮ ಮಾರ್ಗದರ್ಶಕರಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 18 ಸರ್ಕಾರಿ ಶಾಲಾ ಶಿಕ್ಷಕರನ್ನು ಹಾಗೂ 29 ಖಾಸಗಿ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೃಷ್ಣಮೂರ್ತಿ, ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ, ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.