ಸನ್ಮಾರ್ಗ ವಾರ್ತೆ
ಬೆಂಗಳೂರು: ಕುರ್ಆನ್ ಮತ್ತು ಮದ್ರಸಾಗಳಲ್ಲಿನ ಪಾಠಗಳು ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವುದಿಲ್ಲ ಎಂದು ರಾಜ್ಯ ಬಿಜೆಪಿ ಸರಕಾರವೇ ಇದೀಗ ಅಧಿಕೃತವಾಗಿ ಉತ್ತರಿಸಿದೆ. ವಿಧಾನ ಪರಿಷತ್ನ ಅಧಿವೇಶನದಲ್ಲಿ ಈ ಕುರಿತು ಸದಸ್ಯ ಎನ್.ರವಿಕುಮಾರ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಮುಜುರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಲಿಖಿತ ಉತ್ತರ ನೀಡಿದ್ದಾರೆ.
ರಾಜ್ಯದ ಮದ್ರಸಾಗಳ ಶಿಕ್ಷಣದ ಚಟುವಟಿಕೆಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಮದ್ರಸಾಗಳ ಶಿಕ್ಷಣ ವ್ಯವಸ್ಥೆಗಾಗಿ ವಿಶೇಷ ಮಂಡಳಿ ರಚನೆಗೆ ರಾಜ್ಯ ಸರಕಾರವು ಸಮಿತಿ ನಿರ್ಧರಿಸಿರುವ ಬೆನ್ನಲ್ಲೇ ಕುರ್ಆನ್ ಮತ್ತು ಮದ್ರಸಾಗಳ ಬಗ್ಗೆ ಸರಕಾರವು ನೀಡಿರುವ ಉತ್ತರವು ಹೆಚ್ಚು ಮಹತ್ವ ಪಡೆದುಕೊಂಡಿದೆ.
ಸಂಪೂರ್ಣ ಮದ್ರಸಾಗಳ ಮಾಹಿತಿ ಪಡೆಯಲು ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ರಾಜ್ಯದ ಮದ್ರಸಾಗಳ ಕುರಿತು ೧೫ ದಿನಗಳಲ್ಲಿ ವರದಿ ನೀಡುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚನೆ ನೀಡಿದ್ದರು.
ಅಧಿಕಾರಿಗಳ ವರದಿ ಬಳಿಕ ಮುಂದಿನ ತೀರ್ಮಾನ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿತ್ತು. ಮದ್ರಸಾ ಶಿಕ್ಷಣದ ಬಗ್ಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸಂಘಪರಿವಾರದ ಕೆಲವರು ಸಿಡಿದೆದ್ದಿದ್ದರು. ಮದ್ರಸಾದಲ್ಲಿ ಭಯೋತ್ಪಾದನೆಯ ಪಾಠ ಹೇಳಲಾಗುತ್ತಿದೆ. ಇಸ್ಲಾಂ ಮೂಲಭೂತವಾದ ಕಲಿಸಿ ಕೊಡಲಾಗುತ್ತದೆ. ಅಂಕುಶ ಹಾಕಿ ಇಲ್ಲವೇ ಬ್ಯಾನ್ ಮಾಡಿ ಎನ್ನುವ ಕೂಗು ದೊಡ್ಡದಾಗಿ ಕೇಳಿಬಂದಿತ್ತು.












