ಸಿಎಂ ಏಕನಾಥ್ ಶಿಂಧೆ ಕುರ್ಚಿ ಮಗನ ತೆಕ್ಕೆಗೆ: ‘ಸೂಪರ್ ಸಿಎಂ’ ಎಂದು ಟೀಕಿಸಿದ ಎನ್‍ಸಿಪಿ

0
161

ಸನ್ಮಾರ್ಗ ವಾರ್ತೆ

ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾವಣೆಯ ನಂತರ ಆಡಳಿತ ಮತ್ತು ಪ್ರತಿಪಕ್ಷಗಳ ಆರೋಪ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಸರ್ಕಾರ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಎನ್‌ಸಿಪಿ ವಕ್ತಾರ ರವಿಕಾಂತ್ ವರ್ಪೆ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ಚಿತ್ರ ಇದೀಗ ಶಿಂಧೆ ಮತ್ತು ಸರ್ಕಾರಕ್ಕೆ ತಲೆನೋವಾಗಿದೆ. ರವಿಕಾಂತ್ ಅವರು ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಅವರ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

“ಸೂಪರ್ ಸಿಎಂ ಆದ ಶ್ರೀಕಾಂತ್ ಶಿಂಧೆ ಅವರಿಗೆ ಶುಭಾಶಯಗಳು. ಮುಖ್ಯಮಂತ್ರಿ ಗೈರುಹಾಜರಿಯಲ್ಲಿ ಮಗನಿಗೆ ಈಗ ಮುಖ್ಯಮಂತ್ರಿ ಸ್ಥಾನ. ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ. ಇದು ಯಾವ ರೀತಿಯ ರಾಜಧರ್ಮ?” ಎಂದು ರವಿಕಾಂತ್ ವರ್ಪೆ ಚಿತ್ರವನ್ನು ಹಂಚಿಕೊಂಡು ಬರೆದಿದ್ದಾರೆ.

ಬಹಳ ಜವಾಬ್ದಾರಿಯುತ ವ್ಯಕ್ತಿ ನನಗೆ ಈ ಫೋಟೋವನ್ನು ಕಳುಹಿಸಿದ್ದಾರೆ. ಇದು ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಕಚೇರಿ. ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ಭೇಟಿ ಮಾಡುವ ಸ್ಥಳ ಇದಾಗಿದೆ ಎಂದು ಎನ್‌ಸಿಪಿ ವಕ್ತಾರರು ತಿಳಿಸಿದ್ದಾರೆ. ಏಕನಾಥ್ ಶಿಂಧೆ‌ಯವರು ಗಣಪತಿ ಮಂಡಲ, ನವರಾತ್ರಿ ಉತ್ಸವದಲ್ಲಿ ನಿರತರಾಗಿರುವ ಕಾರಣಕ್ಕೆ ‘ಸೂಪರ್ ಸಿಎಂ’ ಆಗಿರುವ ಮಗನಿಗೆ ನಾಡಿನ ಜನತೆಯ ಜವಾಬ್ದಾರಿ ನೀಡಿದಂತಿದೆ ಎಂದು ರವಿಕಾಂತ ವರ್ಪೆ ಟೀಕಿಸಿದ್ದಾರೆ.