ಸನ್ಮಾರ್ಗ ವಾರ್ತೆ
ಮಂಗಳೂರು: ಅಕ್ಟೋಬರ್ 28ರಿಂದ ಸುರತ್ಕಲ್ ಟೋಲ್ ಗೇಟ್ ಸಮೀಪ ಬೇಡಿಕೆ ಈಡೇರುವವರೆಗೆ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಅನಿರ್ದಿಷ್ಟಾವಧಿ ಹಗಲು ರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.
ಸುರತ್ಕಲ್ ಅಕ್ರಮ ಟೋಲ್ಗೇಟ್ ತೆರವಿಗೆ ಸಂಬಂಧಿಸಿ ಸರಕಾರ ಪದೇ ಪದೇ ಮಾತು ತಪ್ಪುತ್ತಿದೆ. ಈ ಹಿನ್ನೆಲೆಯಲ್ಲಿ ಟೋಲ್ ಮುಚ್ಚುವ ತೀರ್ಮಾನ ಜಾರಿಗೊಳಿಸುವುದು ಮತ್ತು ನೀಡಿದ ಭರವಸೆಯಂತೆ ಟೋಲ್ ಸಂಗ್ರಹ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಧರಣಿ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.
ಟೋಲ್ಗೇಟ್ ತೆರವಿಗೆ ತೀರ್ಮಾನ ಆಗಿದೆ ಎಂದು ಅಧಿಕೃತವಾಗಿ ಪ್ರಕಟಿಸುವ ಸರ್ಕಾರ ಹಾಗೂ ಅದರ ಅಧೀನ ಅಧಿಕಾರಿಗಳು ತೆರವಿಗೆ ಸಂಬಂಧಿಸಿ ವಾರ, ತಿಂಗಳು ಎಂದು ವರ್ಷದಿಂದ ಕಾಲ ಹರಣ ಮಾಡುತ್ತಿರುವುದು ಜನರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಜುಲೈ ತಿಂಗಳ ಆರಂಭದಿಂದ ಇಂದು-ನಾಳೆ ಎಂದು ಜನರನ್ನು ವಂಚಿಸುತ್ತಿರುವುದು ಖಂಡನೀಯ.
ಅಕ್ಟೋಬರ್ 18ರ ಟೋಲ್ಗೇಟ್ ಮುತ್ತಿಗೆ ಸಂದರ್ಭ ಜನಾಕ್ರೋಶ ಮುಗಿಲು ಮುಟ್ಟಿದಾಗ ಸ್ವತಃ ಸಂಸದರೇ 20 ದಿನಗಳ ಕಾಲಾವಧಿ ನೀಡುವಂತೆ ಕೋರಿದ್ದರು. ಆ ಅವಧಿ ನವೆಂಬರ್ ಏಳಕ್ಕೆ ಕೊನೆಗೊಳ್ಳುತ್ತದೆ. ಇದೀಗ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಟೋಲ್ಗೇಟ್ ಮುಚ್ಚುವ ಅವಧಿಯನ್ನು ನವೆಂಬರ್ ತಿಂಗಳ ಕೊನೆಯವರೆಗೆ ಮುಂದೂಡಿದ್ದಾರೆ ಮತ್ತು ಇದಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯಿಸಿಲ್ಲ. ಇದು ಸರಕಾರ ಹಾಗೂ ಸಂಸದ ಮತ್ತು ಶಾಸಕರುಗಳ ಮೇಲಿನ ಭರವಸೆಯನ್ನು ಪೂರ್ತಿ ಕಳಚಿ ಹಾಕಿದೆ.
ಆದುದರಿಂದ ಕಟೀಲ್ರವರು ಕೇಳಿದರಂತೆ ನವಂಬರ್ ಏಳರ ಒಳಗಡೆ ಸುರತ್ಕಲ್ ಟೋಲ್ ಗೇಟ್ ಸುಲಿಗೆಗೆ ಅಂತ್ಯ ಹಾಡುವಂತೆ ಒತ್ತಾಯಿಸಿ ಹಗಲು-ರಾತ್ರಿ ಧರಣಿ ಆರಂಭಿಸುತ್ತಿದ್ದೇವೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ.












