ನಮ್ಮ ರಾಷ್ಟ್ರ ಬಲಿಷ್ಠವಾಗಲು ನಾವೆಲ್ಲ ಸೌಹಾರ್ದದಿಂದ ಬಾಳಬೇಕು- ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಕರೆ
ಸನ್ಮಾರ್ಗ ವಾರ್ತೆ
ಬೀದರ್: ಬೀದರನ ಮೊಗಲ್ ಗಾರ್ಡನ್ ಫಂಕ್ಷನ್ ಹಾಲ್ನಲ್ಲಿ ಇದಾರಾ ಅದಬ್ ಎ ಇಸ್ಲಾಮೀ ಬೀದರ ವತಿಯಿಂದ ಕೋಮು ಸೌಹಾರ್ದ ಕುರಿತು ಹಮ್ಮಿಕೊಂಡ ರಾಷ್ಟ್ರ ಮಟ್ಟದ ಬಹುಭಾಷಾ -ಕವಿಗೋಷ್ಠಿಯ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಜಿಲ್ಲಾಧಿಕಾರಿಗಳಾದ ಗೋವಿಂದ ರೆಡ್ಡಿ ಉದ್ಘಾಟಿಸಿದರು.
ಕೋಮು ಸೌಹಾರ್ದ ನಮ್ಮ ರಾಷ್ಟ್ರದ ವೈಶಿಷ್ಟ್ಯವಾಗಿದೆ, ನಮ್ಮ ರಾಷ್ಟ್ರ ಬಲಿಷ್ಠವಾಗಲು ನಾವೆಲ್ಲ ಸೌಹಾರ್ದದಿಂದ ಬಾಳಬೇಕೆಂದು ಅವರು ಜನರಿಗೆ ಕರೆ ನೀಡಿದರು. ಇದಾರಾ ಅದಬ್ ಏ ಇಸ್ಲಾಮೀ ಹಾಗೂ ಶಾಹೀನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಅಬ್ದುಲ್ ಖದೀರ್ ಈ ದಿಸೆಯಲ್ಲಿ ಪ್ರಯತ್ನ ಮಾಡುತ್ತಿರುವುದು ಪ್ರಶಂಸನೀಯವೆಂದು ಹೇಳಿದರು. ಇಂತಹ ಕಾರ್ಯಕ್ರಮಗಳಿಂದ ಸಾಹಿತ್ಯ, ಕಲೆ, ಸಂಸ್ಕೃತಿಯ ಬೆಳವಣಿಗೆ ಆಗುತ್ತದೆ. ಇಂತಹ ಒಂದು ಕವಿಗೋಷ್ಠಿಯನ್ನು ಬರುವ ಜನವರಿಯಲ್ಲಿ ಬೀದರ ಉತ್ಸವದಲ್ಲಿ ಏರ್ಪಡಿಸಲಾಗುವುದು ಎಂದು ಮಾನ್ಯ ಜಿಲ್ಲಾಧಿಕಾರಿಗಳು ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಡಾ.ಅಬ್ದುಲ್ ಖದೀರ್ ಮಾತನಾಡುತ್ತಾ, ನಾವೆಲ್ಲಾ ಕೋಮು ಸೌಹಾರ್ದದಿಂದ ಬಾಳಿದರೆ ಭಾರತ ವಿಶ್ವಗುರು ಆಗುವುದು ಎಂದು ಹೇಳಿ ಎಲ್ಲರೂ ಕೂಡಿ ಬಾಳಲು ಕರೆ ನೀಡಿದರು. ಇಂತಹ ಸಂದರ್ಭದಲ್ಲಿ ಎಲ್ಲಾ ಜನರ ಸಹಕಾರ ನಮಗಿದೆ. ಬೀದರ ಜನತೆಯ ಕೂಡಿ ಬಾಳುವ ಸ್ವಭಾವ ಕೊಂಡಾಡಿದರು.
ತಮ್ಮ ಶಾಯರಿಯಿಂದ ಜನರ ಮನಗೆದ್ದ ಉತ್ತರ ಪ್ರದೇಶದ ಅಂತರರಾಷ್ಟ್ರೀಯ ಪ್ರಖ್ಯಾತಿಯ ಕವಿ ಡಾ.ನವಾಜ್ ದೇವಬಂದಿಯವರ ಕವಿತೆಗಳನ್ನು ಕೇಳಲು ಜನರು ಇಷ್ಟಪಡುತ್ತಿದ್ದರು. ಅದೇ ರೀತಿ ಉತ್ತರ ಪ್ರದೇಶದ ವಸೀಮ್ ರಾಜುಪುರಿ ಹಾಗೂ ಮಹಾರಾಷ್ಟ್ರ ಅಮರಾವತಿಯ ನಯೀಮ್ ಫರಾಜ್ ತಮ್ಮ ಕವನಗಳ ಮೂಲಕ ಜನರಿಗೆ ಮನರಂಜನೆ ನೀಡಿದರು.
ಕವಿಗೋಷ್ಠಿಯಲ್ಲಿ ಹಿಂದಿಯಲ್ಲಿ ಅಜೀಮ್ ಬಾದಶಾ, ಕನ್ನಡದಲ್ಲಿ ಡಾ. ಎಂ.ಜಿ. ದೇಶಪಾಂಡೆ, ಡಾ. ರಾಮಚಂದ್ರ ಗಣಾಪೂರ, ಶ್ರೀ ಹಣಮಂತಪ್ಪ ವಲ್ಲೇಪೂರೆ, ಶಂಭುಲಿಂಗ ವಾಲದೊಡ್ಡಿ, ಪ್ರಭು ಪಾಟೀಲ ಹಾಗೂ ಉರ್ದುವಿನಲ್ಲಿ ಸೈಯದ್ ಖಾಸಿಮ್ ಸಾಜಿದ್ ಇಂಜಿನೀಯರ್, ಖಾಜಿ ಇದ್ರೀಸ್ ಅಲಿ ಸಹರ್, ಸೈಫುದ್ದೀನ್ ಗೌರಿ ಸೈಫ್, ಶಕೀಲ್ ಜಹಿರಾಬಾದಿ, ಮುನವ್ವರ ಅಲಿ ಶಾಹೀದ್, ಕಮಾಲುದ್ದೀನ್ ಷಮೀಮ್, ಹಾಮೆದ್ ಸಲೀಮ್, ಸೈಯ್ಯದ ಜಮೀಲ್ ಅಹ್ಮದ್ ಹಾಷ್ಮೀ ತಮ್ಮ ಕವನಗಳನ್ನು ಪ್ರಸ್ತುತಪಡಿಸಿದರು.
ವೇದಿಕೆಯ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ ಚನಶೆಟ್ಟಿ, ಜಮಾಅತೆ ಇಸ್ಲಾಮೀ ಹಿಂದ್ನ ಸ್ಥಾನೀಯ ಅಧ್ಯಕ್ಷರಾದ ಸೈಯದ್ ಅಬ್ದುಲ್ ಸತ್ತಾರ್, ಮುಖಂಡರಾದ ಮನ್ನಾನ್ ಸೇಠ್ ಮುಂತಾದವರು ಇದ್ದರು.
ಕವಿಗೋಷ್ಠಿ ಮಹಮ್ಮದ್ ತಾಹಾ ಕಲಿಮುಲ್ಲಾ ಅವರು ಪವಿತ್ರ ಕುರ್ಆನ್ ಪಠಣದ ಮೂಲಕ ಪ್ರಾರಂಭಿಸಿದರು. ಅಸ್ಲಮ್ ಖಾದ್ರಿ ಅತಿಥಿಗಳ ಹಾಗೂ ಎಲ್ಲರ ಸ್ವಾಗತ ಕೋರಿದರು ಹಾಗೂ ಪ್ರಸ್ತಾವಿಕ ಮಾತುಗಳನ್ನಾಡಿದರು ಮತ್ತು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಕವಿಗೋಷ್ಠಿಯಲ್ಲಿ ವಿವಿಧ ಭಾಷೆ ಮಾತನಾಡುವ ನೂರಾರು ಜನರು ಕವಿಗಳಿಗೆ ಪ್ರೋತ್ಸಾಹವನ್ನು ನೀಡಿ ಕವಿಗೋಷ್ಠಿಯನ್ನು ಯಶಸ್ವಿಗೊಳಿಸಿದರು.


ವರದಿ: ಮುಹಮ್ಮದ್ ನಿಝಾಮುದ್ದೀನ್












