ಪೋಕ್ಸೋ ಪ್ರಕರಣದ ಅಧ್ಯಯನ: ನಾಲ್ವರಲ್ಲಿ ಮೂವರು ಆರೋಪಿಗಳು ಖುಲಾಸೆ!

0
327

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದ ಬಹುತೇಕ ಪೋಕ್ಸೋ ಪ್ರಕರಣಗಳಲ್ಲಿ ನಾಲ್ವರಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಸ್ವತಂತ್ರ ಸಂಶೋಧಕರಾದ ‘ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ’ ನಡೆಸಿದ ‘ಎ ಡಿಕೇಡ್ ಆಫ್ ಪೋಕ್ಸೋ’ ಎಂಬ ಅಧ್ಯಯನ ವರದಿಯಲ್ಲಿ ಇದು ಬಹಿರಂಗವಾಗಿದೆ.

ನಾಲ್ಕು ಲಕ್ಷ ಪೋಕ್ಸೋ ಪ್ರಕರಣಗಳಿಂದ ಮಾಹಿತಿ ಸಂಗ್ರಹಿಸಿ 2.31 ಲಕ್ಷ ಪ್ರಕರಣಗಳನ್ನು ಮೌಲ್ಯಮಾಪನ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಏಳು ಜನರಲ್ಲಿ ಆರು ಜನರನ್ನು ಖುಲಾಸೆಗೊಳಿಸಲಾಗಿದೆ ಮತ್ತು ಪಶ್ಚಿಮ ಬಂಗಾಳದಲ್ಲಿ ಆರು ಜನರಲ್ಲಿ ಐವರನ್ನು ಖುಲಾಸೆಗೊಳಿಸಲಾಗಿದೆ. ಅತಿ ಕಡಿಮೆ ಖುಲಾಸೆಯಾದ ರಾಜ್ಯ ಕೇರಳ. ಕೇರಳದಲ್ಲಿ ಪೋಕ್ಸೋ ಪ್ರಕರಣದಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿರುವುದರಿಂದ ಇಬ್ಬರಲ್ಲಿ ಒಬ್ಬ ಆರೋಪಿಯೂ ಇದುವರೆಗೆ ಖುಲಾಸೆಯಾಗಿಲ್ಲ.

ಹೆಚ್ಚಿನ ಪೋಕ್ಸೋ ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳನ್ನು ಸರಿಯಾಗಿ ತೆಗೆದುಕೊಳ್ಳದ ಕಾರಣದಿಂದಾಗಿ ಮತ್ತು ಸಮಯೋಚಿತ ಮತ್ತು ಸಮರ್ಥ ರೀತಿಯಲ್ಲಿ ವಿಚಾರಣೆ ನಡೆಸದ ಕಾರಣದಿಂದಾಗಿ ಬಹುತೇಕ ಸಂಖ್ಯೆಯ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಅಧ್ಯಯನ ವರದಿಯು ತಿಳಿಸಿದೆ.

56 ರಷ್ಟು POCSO ಪ್ರಕರಣಗಳು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿವೆ. ಶಾಸನಬದ್ಧ ಸಮಯಾವಧಿಯ ಒಳಗಡೆ ವಿಚಾರಣೆ ಪೂರ್ಣಗೊಳಿಸದೇ ಇರುವುದು ಇದಕ್ಕೆ ಕಾರಣ ಎಂದು ಅಧ್ಯಯನವು ಬೆಟ್ಟು ಮಾಡಿದೆ. ಪೋಕ್ಸೋ ಪ್ರಕರಣಗಳ ವಿಚಾರಣೆಯು ಸರಾಸರಿ ಒಂದು ವರ್ಷ ಐದು ತಿಂಗಳುಗಳ ಕಾಲಾವಕಾಶ ತೆಗೆದುಕೊಳ್ಳುತ್ತಿರುವುದು ಇನ್ನೊಂದು ಕಾರಣವಾಗಿದೆ.