ಬೀದರ್‌ನಲ್ಲಿ ಸಹಬಾಳ್ವೆ ಸಭೆ: ನಾಡಿನ ಸೌಹಾರ್ದ ಪರಂಪರೆ ಉಳಿಸಿ ಬೆಳೆಸಲು ಕರೆ

0
429

ಸನ್ಮಾರ್ಗ ವಾರ್ತೆ

ಬೀದರ್: ನಾಡಿನ ಸೌಹಾರ್ದ ಪರಂಪರೆ ಉಳಿಸಿ ಬೆಳೆಸಲು ಸಹಬಾಳ್ವೆ ಜೀವನ ನಡೆಸಲು ಮತ್ತು ಈ ನಿಟ್ಟಿನಲ್ಲಿ ಶ್ರಮಿಸುವ ಕುರಿತು ಚರ್ಚಿಸಲು ಬೀದರಿನ ಹೊಟೆಲ್ ಬೀದರ ಗೇಟ್‌ವೇನಲ್ಲಿ ಜನವರಿ 4 ರಂದು ಬೀದರ ಜಿಲ್ಲೆಯ ಜಾತ್ಯಾತೀತ ಹಾಗೂ ಪ್ರಗತಿಪರ ಸಂಘಟನೆಗಳ ಸಭೆ ಜರಗಿತು.

ಭಾರತದಲ್ಲಿ ರಾಜಕೀಯ ಹಾಗೂ ಸಾಮಾಜಿಕ ವಾತಾವರಣ ಕಲುಷಿತಗೊಳ್ಳುತ್ತಿದೆ. ದ್ವೇಷವೇ ನಮ್ಮ ಇತಿಹಾಸ ಎಂಬಂತೆ  ಬಿಂಬಿಸಲಾಗುತ್ತಿದೆ. ಧರ್ಮ ರಾಜಕಾರಣವೇ ಪ್ರಸ್ತುತ ವಿದ್ಯಮಾನ ಎಂಬುವುದಾಗಿ ಚರ್ಚೆಗಳು ನಡೆಯುವಂತೆ ಮಾಡಲಾಗುತ್ತಿದೆ ಎಂದು ಸದ್ಯದ ಸ್ಥಿತಿಗತಿಯ ಕುರಿತು ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಯಿತು. ಅಂಬೇಡ್ಕರ, ಬಸವಣ್ಣ, ನಾರಾಯಣ ಗುರು, ಕುವೆಂಪು ಅವರ ಸರ್ವ ಜನಾಂಗಗಳ ಶಾಂತಿಯ ತೋಟದ ಆಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.

ಪ್ರತಿಯೊಂದು ಧರ್ಮದ ಮೂಲ ಉದ್ದೇಶ ನಾಗರಿಕರಿಗೆ ನೆಮ್ಮದಿಯ ಬದುಕು ಮತ್ತು ಸಹಬಾಳ್ವೆ ಜೀವನ ನಡೆಸಲು ಮಾರ್ಗದರ್ಶನ ಮಾಡುವುದಾಗಿದೆ. ಪ್ರತಿಯೊಬ್ಬ ನಾಗರಿಕ ಸದ್ಭಾವನೆಯಿಂದ ಇದ್ದರೆ ದೇಶದ ಪ್ರಗತಿ ಸಾಧ್ಯ. ಕೋಮು ಸೌಹಾರ್ದದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇದಕ್ಕಾಗಿ ಯುವ ಶಕ್ತಿಯಲ್ಲಿ ಅರಿವು ಮೂಡಿಸಲು ಪ್ರಯತ್ನಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು.

ಪ್ರತಿಯೊಬ್ಬ ಪ್ರಜೆಗೂ ಭಾರತದ ಸಂವಿಧಾನದ ಪರಿಚಯ ಹಾಗೂ ಪೀಠಿಕೆಯ ಅರ್ಥ ತಿಳಿಸಿ, ಪ್ರಜಾಪ್ರಭುತ್ವವನ್ನು ಉಳಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು. ನಮ್ಮ ರಾಜಕೀಯ ವ್ಯವಸ್ಥೆ ಅಧೋಗತಿಗೆ ಇಳಿಯಲು ಹಣಕ್ಕಾಗಿ ಮತ ನೀಡುವ ಕೆಟ್ಟ ವ್ಯವಸ್ಥೆಯಾಗಿದೆ. ಆದರೆ ನಮ್ಮ ಮತಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುವುದನ್ನು ನಾವು ಅರಿತಾಗ ನಿಜವಾದ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರಲು ಸಾಧ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಲು ನಿರ್ಧರಿಸಲಾಯಿತು.

ತಾಲೂಕು ಮಟ್ಟದಲ್ಲಿ ಸಹಬಾಳ್ವೆ ಸಮಿತಿಗಳನ್ನು ರಚಿಸಿ, ಕೆಲಸ ಮಾಡಲು ನಿರ್ಣಯ ತೆಗೆದುಕೊಳ್ಳಲಾಯಿತು. ಜಾತ್ಯಾತೀತ ಹಾಗೂ ಸೌಹಾರ್ದಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸಹಬಾಳ್ವೆ ಕರ್ನಾಟಕ ಇದರ ಬೀದರ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಇದರ ಸಂಚಾಲಕರಾಗಿ ಶ್ರೀಕಾಂತ ಸ್ವಾಮಿ ಹಾಗೂ ಸದಸ್ಯರುಗಳಾಗಿ ಕಾಶಿನಾಥ ಪಾಟೀಲ, ಡಾ. ಸಿ. ಆನಂದರಾವ, ಅನಂತರೆಡ್ಡಿ ಮಿರ್ಜಾಪೂರ, ದರ್ಬಾರಾ ಸಿಂಗ್, ಮಹೇಶ ಗೋರನಾಳಕರ್, ರಫೀಕ್ ಅಹ್ಮದ್ ಗಾದಗಿ, ಇಕ್ರಾಮುದ್ದೀನ್ ಖಡೀವಾಲೆ, ಫಿರ್ದೌಸ್ ಖಾನ್ ಪಟೇಲ್, ಜಗನ್ನಾಥ ರೆಡ್ಡಿ, ಆಕಾಶ ಖಂಡಾಳೆ, ಜಗದೀಶ ಬಿರಾದಾರ, ಮಾಣಿಕ ಖಾನಾಪೂರಕರ್, ಘಾಳರೆಡ್ಡಿ, ಗೌತಮಬುದ್ಧ, ಮುಹಮ್ಮದ ನಿಝಾಮುದ್ದೀನ್, ವಿನಯ ಮಾಳಗೆ, ವಿನೋದ ರತ್ನಾಕರ್, ದೇವಿದಾಸ ಸಿಂಧೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಉಪಾಧ್ಯಕ್ಷರಾದ ಮುಹಮ್ಮದ್ ಯುಸುಫ್ ಕನ್ನಿ ಹಾಗೂ ಅಕ್ಬರ್ ಅಲಿ ಉಡುಪಿ ಹಾಗೂ ರಾಯಚೂರಿನ ಜನಶಕ್ತಿಯ ಮಾರಪ್ಪ ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.