ಅಸ್ಸಾಂ ‘ಬುಲ್ಡೋಜರ್ ರಾಜ್’ ಕ್ರಮಕ್ಕೆ ಹೈಕೋರ್ಟಿನಲ್ಲಿ ಹಿನ್ನಡೆ: ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಆದೇಶ

0
264

ಪೊಲೀಸರ ಆದೇಶದ ಮೇರೆಗೆ ನಡೆಸಿದ ತೆರವು ಕಾರ್ಯಚರಣೆ “ಕಾನೂನು ಬಾಹಿರ” ಎಂದ ನ್ಯಾಯಾಲಯ

ಸನ್ಮಾರ್ಗ ವಾರ್ತೆ

ಗುವಾಹಟಿ: ಕಳೆದ  ವರ್ಷ ಮೇ ತಿಂಗಳಲ್ಲಿ ಸಫೀಕುಲ್ ಇಸ್ಲಾಂ ಎಂಬ ವ್ಯಕ್ತಿ ಅಸ್ಸಾಮಿನ ನಾಗಾಂವ್ ಜಿಲ್ಲೆಯ ಬಟಾದ್ರವ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ಅಲ್ಲಿನ ಸ್ಥಳೀಯರು ಪೊಲೀಸ್ ಠಾಣೆಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಕೆಲವೇ ಗಂಟೆಗಳ ಬಳಿಕ ಅಲ್ಲಿನ ಅಧಿಕಾರಿಗಳು ಪ್ರತಿಭಟನಾಕಾರರ ಮನೆಗಳ ಮೇಲೆ ಬುಲ್ಡೋಜರ್ ಬಳಸಿ ತೀರಿಸಿದ ಪ್ರತೀಕಾರವನ್ನು  ಗುವಾಹಟಿ ಹೈಕೋರ್ಟ್ ಪ್ರಶ್ನಿಸಿದ್ದು, ಈ ಕ್ರಮವನ್ನು “ಕಾನೂನು ಬಾಹಿರ” ಎಂದು ತೀರ್ಪು ನೀಡಿದೆ.

ಪೊಲೀಸ್ ಠಾಣೆಯನ್ನು ಸುಟ್ಟ ಕೆಲವೇ ಗಂಟೆಗಳಲ್ಲಿ ಕೆಲವು ಮನೆಗಳನ್ನು ಜಿಲ್ಲಾಡಳಿತದ ಬುಲ್ಡೋಜರ್ ಬಳಸಿ ದ್ವoಸ ಮಾಡಲಾಗಿತ್ತು. ಈ ಕ್ರಮವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ವಿಚಾರಣೆಯ ಸಂದರ್ಭದಲ್ಲಿ ಜಿಲ್ಲಾಡಳಿತ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು ಕಾನೂನುಬಾಹಿರವಾಗಿ ಕಟ್ಟಲಾದ ಮನೆಗಳನ್ನಷ್ಟೇ ನಾವು ಉರುಳಿಸಿದ್ದೇವೆ ಎಂದು ಹೇಳಿಕೊಂಡಿತ್ತು. ನಕಲಿ ದಾಖಲೆಗಳನ್ನು ತಯಾರಿಸಿ ಆ ಮನೆಗಳನ್ನು ಕಟ್ಟಲಾಗಿದೆ ಎಂದೂ ಜಿಲ್ಲಾಡಳಿತ ಹೇಳಿತ್ತು.

ಇದೇ ವೇಳೆ, ಅಡ್ವೋಕೇಟ್ ಜನರಲ್ ದೇವಜಿತ್ ಸೈಕಿಯ ಅವರು ಹೈಕೋರ್ಟ್‌‌ಗೆ ರಾಜ್ಯ ಸರಕಾರದ ಅಭಿಪ್ರಾಯವನ್ನು ತಿಳಿಸಿದ್ದು, ಮುಖ್ಯ ಕಾರ್ಯದರ್ಶಿಯ ನೇತೃತ್ವದಲ್ಲಿ ತನಿಖೆ ನಡೆಸುವ ಮೂಲಕ  ಮುಂದಿನ 15 ದಿನಗಳೊಳಗೆ ತಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ, ತನಿಖೆಯ ನೆಪದಲ್ಲಿ ಆರೋಪಿಗಳ ಮನೆಗಳನ್ನು ಬುಲ್ಡೋಜ್ ಮಾಡುವ ಪ್ರವೃತ್ತಿಯ ಬಗ್ಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತ್ತು.

ಎಸ್‌ಪಿ ಆರಂಭಿಸಿದ ಇಂತಹ ಕ್ರಮವನ್ನು ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಂಡಿತ್ತು, ಇದರ ಪರಿಣಾಮವಾಗಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪ ಹೊತ್ತಿರುವ ಐವರ ಮನೆಗಳನ್ನು ಧ್ವಂಸಗೊಳಿಸಿರುವುದು ಬೆಳಕಿಗೆ ಬಂದಿದ್ದು, ಪೊಲೀಸರ ಕ್ರಮದ ಬಗ್ಗೆ ಪೀಠವು ಆಘಾತ ವ್ಯಕ್ತಪಡಿಸಿತ್ತು.

“ಇಂತಹ ನಿಕೃಷ್ಟ ಕ್ರಮಗಳ ಬಗ್ಗೆ ನಾನು ನನ್ನ ವೃತ್ತಿ ಜೀವನದಲ್ಲಿಯೂ ಕೇಳಿಲ್ಲ. ಸರ್ಚ್ ವಾರೆಂಟ್ ಮೂಲಕ ಬುಲ್ಡೋಜರ್ ಪ್ರಹಾರ ನಡೆಸಿದ ಪೊಲೀಸ್ ಅಧಿಕಾರಿಯನ್ನು ನಾನು ಕಂಡಿಲ್ಲ” ಎಂದು ನ್ಯಾಯಮೂರ್ತಿಗಳು ಟೀಕಿಸಿದ್ದು, ಇದನ್ನು ಸಿನಿಮೀಯ ಪ್ರವೃತ್ತಿಗೆ ಹೋಲಿಸಿದ್ದಾರೆ.