‘ಹಜ್’ ವಿಐಪಿ ಕೋಟಾ ರದ್ದು ಪಡಿಸಲು ನಿರ್ಧರಿಸಿದ ಕೇಂದ್ರ ಸರಕಾರ: ಶೀಘ್ರ ಹೊಸ ಹಜ್ ನೀತಿ ಜಾರಿ ಸಾಧ್ಯತೆ

0
431

ಸನ್ಮಾರ್ಗ ವಾರ್ತೆ

ನವದೆಹಲಿ: ‘ಹಜ್’ ವಿಐಪಿ ಕೋಟಾವನ್ನು ಕೇಂದ್ರ ಸರಕಾರ ಬುಧವಾರ ರದ್ದು ಪಡಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
ವಿಐಪಿ ಕೋಟಾವನ್ನು ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ವಿಐಪಿ ಯಾತ್ರಾರ್ಥಿಗಳು ಈಗ ಸಾಮಾನ್ಯ ಹಜ್ ಯಾತ್ರಿಗಳಂತೆ ಪ್ರಯಾಣಿಸಬೇಕಾಗುತ್ತದೆ.

ವಿಐಪಿ ಕೋಟಾವನ್ನು ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಅಲ್ಪಸಂಖ್ಯಾತ ಸಚಿವರು ಮತ್ತು ಭಾರತದ ಹಜ್ ಸಮಿತಿಗೆ ನೀಡಲಾಗಿತ್ತು. ರಾಷ್ಟ್ರಪತಿ ಕೋಟಾದಲ್ಲಿ 100, ಉಪರಾಷ್ಟ್ರಪತಿ ಕೋಟಾದಲ್ಲಿ 75, ಪಿಎಂ ಕೋಟಾದಲ್ಲಿ 75 ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೋಟಾದಲ್ಲಿ 50 ಮತ್ತು ಭಾರತದ ಹಜ್ ಸಮಿತಿಯ 200 ಸ್ಥಾನಗಳು ಸೇರಿದಂತೆ ಒಟ್ಟು 500 ಸೀಟುಗಳನ್ನು ವಿಐಪಿ ಕೋಟಾಕ್ಕೆ ಮೀಸಲಿಡಲಾಗಿತ್ತುಮ ಇದೀಗ ಕೇಂದ್ರ ಸರಕಾರ ಈ ವಿಐಪಿ ಕೋಟಾವನ್ನು ರದ್ದುಪಡಿಸಲು ನಿರ್ಧರಿಸಿದೆ.

“ಕೇಂದ್ರ ಸರ್ಕಾರ ಮತ್ತು ಸೌದಿ ಅರೇಬಿಯಾ ಹಜ್-2023ರ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಬಾರಿ 1,75,025 ಭಾರತೀಯ ಯಾತ್ರಾರ್ಥಿಗಳಿಗೆ ಹಜ್ ನಿರ್ವಹಿಸಲು ಅವಕಾಶ ನೀಡಿದೆ” ಎಂದು ಭಾರತೀಯ ಹಜ್ ಸಮಿತಿ ಸದಸ್ಯ ಇಜಾಝ್ ಹುಸೇನ್ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಭಾರತದಿಂದ ಸುಮಾರು ಎರಡು ಲಕ್ಷ ಯಾತ್ರಾರ್ಥಿಗಳು ಪವಿತ್ರ ಯಾತ್ರೆ ಕೈಗೊಳ್ಳಲಿದ್ದಾರೆ. 2019ರಲ್ಲಿ 1.4 ಲಕ್ಷ ಯಾತ್ರಾರ್ಥಿಗಳು ಪವಿತ್ರ ತೀರ್ಥಯಾತ್ರೆ ಕೈಗೊಂಡಿದ್ದರು. ನಂತರದ ವರ್ಷದಲ್ಲಿ, ಈ ಸಂಖ್ಯೆಯನ್ನು 1.25 ಲಕ್ಷಕ್ಕೆ ಇಳಿಕೆಯಾಗಿತ್ತು. ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ, ಹಜ್ ಅನ್ನು 2020ರಲ್ಲಿ ರದ್ದುಗೊಳಿಸಲಾಗಿತ್ತು. 2022ರಲ್ಲಿ, 79,237 ಭಾರತೀಯ ಯಾತ್ರಾರ್ಥಿಗಳು ಹಜ್ ನಿರ್ವಹಿಸಿದ್ದರು.