ಹಿಂಸೆಯ ರಾಜಕಾರಣ ಬದಲಾಗಬೇಕು: ಸುಧೀಂದ್ರ ಕುಲಕರ್ಣಿ

0
589

ಸನ್ಮಾರ್ಗ ವಾರ್ತೆ

ಮಂಗಳೂರು: ಗಾಂಧೀಜಿಯವರು ಹಿಂದೂ ಮುಸ್ಲಿಂ ಎರಡೂ ಧರ್ಮದವರ ಹಿಂಸೆಗಳನ್ನು ವಿರೋಧಿಸಿದ್ದರು. ಪರಸ್ಪರ ನಡುವೆ ಕಿಚ್ಚು ಹಚ್ಚಿ ಲಾಭಗಳಿಸುವ ರಾಜಕಾರಣ ಬದಲಿಸಬೇಕು. ದಕ್ಷಿಣ ಕನ್ನಡ ಜಿಲ್ಲೆ ಕೋಮು ಸಂಘರ್ಷ ಮುಕ್ತವಾದ ಜಿಲ್ಲೆಯಾಗಿ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಲಿ” ಎಂದು ಖ್ಯಾತ ಅಂಕಣಕಾರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿಯವರು ಹೇಳಿದರು.

ಕದ್ರಿಯ ಲಯನ್ಸ್ ಭವನದಲ್ಲಿ ರವಿವಾರ ಗಾಂಧಿ ವಿಚಾರ ವೇದಿಕೆಯ ಆಶ್ರಯದಲ್ಲಿ ಎಂ.ಜಿ ಹೆಗಡೆಯವರ “ಮಿನುಗು ನೋಟ”(ಗಾಂಧೀಜಿಯವರ ಕುರಿತು ಪ್ರಶ್ನೆಗಳಿಗೆ ಉತ್ತರ) ಕೃತಿ ಅನಾವರಣಗೊಳಿಸಿ ಮಾತನಾಡುತ್ತಾ, ಮಹಾತ್ಮ ಗಾಂಧಿ ದೇಶ ವಿಭಜನೆಗೆ ಕಾರಣರಾಗಿದ್ದರು ಹಾಗೂ ಅವರೊಬ್ಬ ಹಿಂದೂ ವಿರೋಧಿ ಎಂಬ ಭಾವನೆಯನ್ನು ವ್ಯಕ್ತಪಡಿಸುವವರೇ ದ್ವಿರಾಷ್ಟ್ರ ಪರವಾಗಿದ್ದ ಸಾವರ್ಕರನ್ನು ದೇಶ ಭಕ್ತ ಎಂದು ಹೊಗಳುತ್ತಾರೆ. ಮಹಾತ್ಮ ಗಾಂಧಿ ದೇಶ ವಿಭಜನೆಗೆ ಕಾರಣರಲ್ಲ. ಬ್ರಿಟಿಷ್ ಮತ್ತು ಮುಸ್ಲಿಮ್ ಲೀಗ್ ಕಾರಣಕರ್ತರು ಎಂದರು.

ದೇಶ ವಿಭಜನೆಯ ಕಾರಣ ಪಾಕ್, ಬಾಂಗ್ಲಾ ಮಾತ್ರವಲ್ಲ ಭಾರತೀಯ ಮುಸ್ಲಿಮರಿಗೂ ಹಿತಕರವಾಗಿಲ್ಲ. ಆರೆಸ್ಸೆಸ್‌ನ ಸರ ಸಂಘಸಂಚಾಲಕ ಮೋಹನ್ ಭಾಗವತ್ ಮಹಾತ್ಮ ಗಾಂಧಿ ಅವರನ್ನು ಹೊಗಳುತ್ತಾರೆ. ಆದರೆ ಅವರ ಸ್ವಯಂ ಸೇವಕರು ಗಾಂಧೀಜಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಮೋಹನ್ ಭಾಗವತ್ ಪ್ರಾಮಾಣಿಕರೇ ಆಗಿದ್ದರೆ ಗಾಂಧೀಜಿ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ನಿಲ್ಲಿಸಲು ಕಾರ್ಯಕರ್ತರಿಗೆ ಹೇಳಲಿ ಎಂದರು.

ದೇಶದಲ್ಲಿ ಗಾಂಧಿ ಬಗ್ಗೆ ಅಪಪ್ರಚಾರ ನಡೆದಂತೆ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಬಗ್ಗೆಯೂ ಅಪಪ್ರಚಾರ ನಡೆಯುತ್ತಿದೆ. ಮಹಾತ್ಮ ಗಾಂಧಿ ಬಗ್ಗೆ ಅಪಪ್ರಚಾರ ಮಾಡುವವರು ನೆಹರೂ ಅವರನ್ನು ಖಳನಾಯಕನಾಗಿ ತೋರಿಸಿದ್ದಾರೆ. ನೆಹರೂರವರ ಸೇವೆ, ತ್ಯಾಗ ಸಂಘರ್ಷವನ್ನು ಈ ದೇಶ ಯಾವತ್ತೂ ಮರೆಯಬಾರದು. ಜಗತ್ತನ್ನು ಮುನ್ನಡೆಸಲು ಶಕ್ತಿ ಸಾಮರ್ಥ್ಯಬೇಕು. ಮಹಾತ್ಮ ಗಾಂಧಿ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಭಾರತವನ್ನು ಬದಲಾಯಿಸಲು ಮತ್ತು ಜಗತ್ತಿಗೆ ಹೊಸ ದಿಕ್ಕನ್ನು ತೋರಿಸಲು ಸಾಧ್ಯ ಎಂದರು.

ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀಧರ್ ಜಿ.ಭಿಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಬಿ.ಎಂ.ರೋಹಿಣಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯ ಚಂದ್ರ ಸಂದರ್ಭೋಚಿತವಾಗಿ ಮಾತನಾಡಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ‘ಮಿನುಗು ನೋಟ’ ಕೃತಿಕಾರ ಎಂ.ಜಿ.ಹೆಗಡೆ ಪ್ರಾಸ್ತವಿಕ ನುಡಿಗಳನ್ನಾಡಿದರು. ಗಾಂಧಿ ವಿಚಾರ ವೇದಿಕೆಯ ಆಡಳಿತಾಧಿಕಾರಿ ಭಾಗ್ಯೇಶ್ ರೈ ಸ್ವಾಗತಿಸಿದರು. ವೇದಿಕೆಯ ಗೌರವಾಧ್ಯಕ್ಷೆ ಬಿ.ಎಂ.ರೋಹಿಣಿ ಧನ್ಯವಾದವಿತ್ತರು. ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.