ಸನ್ಮಾರ್ಗ ವಾರ್ತೆ
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಪಡೆದು ಕಾಮಗಾರಿ ಕೆಲಸ ನೀಡುತ್ತಾರೆ ಎಂದು ಈ ಹಿಂದೆ ಗುತ್ತಿಗೆದಾರರ ಸಂಘ ಆರೋಪ ಮಾಡಿತ್ತು. ಇದೀಗ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಲಂಚ ಪಡೆದಿರುವ ಬಗ್ಗೆ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಆರೋಪ ಮಾಡಿದ್ದಾರೆ. ತಿಪ್ಪಾರೆಡ್ಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದನ್ನು ಮಂಜುನಾಥ್ ಬಿಡುಗಡೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, “ನಮ್ಮ ಜಿಲ್ಲೆಯಲ್ಲಿ ಯಾವತ್ತೂ ಲಂಚ, ಕಮಿಷನ್ ಪ್ರಸ್ತಾಪ ಇರಲಿಲ್ಲ. ಆದರೆ ಇದೀಗ ಕಾಮಗಾರಿಗೆ ಅಥವಾ ಸರ್ಕಾರದ ಯಾವುದೇ ಕೆಲಸಕ್ಕೆ 10%, 4%, 2% ಲಂಚ ಪಡೆಯಲಾಗುತ್ತಿದೆ ಎಂದು ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಆಡಿಯೊ ಬಿಡುಗಡೆ ಬಳಿಕ ಮಾತನಾಡಿದ ಅವರು, “3 ವರ್ಷದಲ್ಲಿ ತಿಪ್ಪಾರೆಡ್ಡಿ ನನ್ನ ಬಳಿ 90 ಲಕ್ಷ ರೂ. ಹಣ ನಗದು ರೂಪದಲ್ಲಿ ಲಂಚ ಪಡೆದಿದ್ದಾರೆ. 1 ಕೋಟಿಗೆ 10 ಲಕ್ಷ ರೂ. ಲಂಚ ಪಡೆದಿದ್ದಾರೆ. 2019 ರಿಂದ ಇಲ್ಲಿಯವರೆಗೂ ಜಿಡಬ್ಲ್ಯೂಡಿ ಕಟ್ಟಡ ಕಾಮಗಾರಿಗೆ 12ಲಕ್ಷ ರೂ., ಹಾಸ್ಪಿಟಲ್ ರಿಪೇರಿಗೆ 12.5ಲಕ್ಷ ರೂ. ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಒಟ್ಟು 22 ಲಕ್ಷ ರೂ. ಹಣ ಲಂಚವಾಗಿ ಪಡೆದಿದ್ದಾರೆ. ಲೇಔಟ್ನ ಅಪ್ರೂವಲ್ಗೆ 18 ಲಕ್ಷ ರೂ., ಮೆಡಿಕಲ್ ಗ್ಯಾಸ್ ಸಂಬಂಧ 4 ಲಕ್ಷ ರೂ., ಲೇಔಟ್ ವಿಚಾರವಾಗಿ 4ಲಕ್ಷ ರೂ., ಡಿ.22 ರಂದು ಆಸ್ಪತ್ರೆ ಕಾಮಗಾರಿ ಸಂಬಂಧ 20 ಲಕ್ಷ ರೂ. ಕ್ಲಬ್ಗೆ ಕರೆಸಿಕೊಂಡು 13ಲಕ್ಷ ಪಡೆದಿದ್ದಾರೆ. ಹೊಸ ಕಾಮಗಾರಿ ಕೆಲಸ ನೀಡಿ ಎಂದು ಅವರ ಮನೆಗೆ ಹೋದಾಗ 30 ಲಕ್ಷ ಹಣ ಅಡ್ವಾನ್ಸ್ ಆಗಿ ಕೇಳಿದ್ದರು” ಎಂದು ಆರೋಪ ಮಾಡಿದರು.
“ಈ ಬಾರಿ ಗುತ್ತಿಗೆದಾರರ ಬಳಿ ಹಣ ಪಡೆದು ಚುನಾವಣೆ ಮಾಡುತ್ತೇನೆ ಎಂದು ತಿಪ್ಪಾರೆಡ್ಡಿ ಹೇಳಿದ್ದಾರೆ. ಇದೀಗ ಒಂದು ಆಡಿಯೋ ಬಿಡುಗಡೆ ಮಾಡಿದ್ದೇನೆ. ಇನ್ನೂ 14-15 ಆಡಿಯೋ ಇವೆ. ಈ ಸಂಬಂಧ ನಾನು ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ. ಕೇವಲ ಇವರೊಬ್ಬರೇ ಅಲ್ಲದೇ ಇನ್ನೂ 12 ಶಾಸಕರು ಹಾಗೂ ನಾಲ್ವರು ಸಚಿವರ ದಾಖಲೆಗಳು ನನ್ನ ಬಳಿ ಇವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತೇನೆ” ಎಂದು ಮಂಜುನಾಥ್ ಹೇಳಿದ್ದಾರೆ.












