ಬಲಪಂಥೀಯರಿಂದ ಹಲ್ಲೆ ಪ್ರಕರಣ: ತಮ್ಮ ರಕ್ಷಣೆಗೆ ಧಾವಿಸಿ ಬಂದ ಸ್ಥಳೀಯರಿಗೆ ಕೃತಜ್ಞತೆ ಸಲ್ಲಿಸಿದ ಕಾಶ್ಮೀರಿ ವ್ಯಾಪಾರಿಗಳು

0
1773

ಉತ್ತರ ಪ್ರದೇಶ, ಮಾ.7: ಉತ್ತರ ಪ್ರದೇಶದ ಲಕ್ನೊದಲ್ಲಿ ಬಲಪಂಥೀಯ ದುಷ್ಕರ್ಮಿಗಳಿಂದ ಹಲ್ಲೆಗೊಳಾಗಿದ್ದ ಕಾಶ್ಮೀರದ ಇಬ್ಬರು ಡ್ರೈಫ್ರೂಟ್ ವ್ಯಾಪಾರಿಗಳು ತಮ್ಮ ರಕ್ಷಣೆಗೆ ಧಾವಿಸಿದ ಸ್ಥಳೀಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಿನ್ನೆ ಸಂಜೆ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಕಾಶ್ಮೀರದ ಇಬ್ಬರು ಒಣ ಹಣ್ಣಿನ ವ್ಯಾಪಾರಿಗಳಿಗೆ ಬಲಪಂಥೀಯ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಇದೇ ವೇಳೆ ಅಲ್ಲಿಬನೆರೆದ ಕೆಲವರು ವ್ಯಾಪಾರಿಗಳ ರಕ್ಷಣೆಗೆ ಧಾವಿಸಿ ಬಂದಿದ್ದರು. ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆದ ಬಳಿಕ ಪೊಲೀಸರು ನಾಲ್ವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ಲಕ್ನೊದ ದಲಿಗಂಜ್‍ನ ಜನ ನಿಬಿಡ ರಸ್ತೆಯಲ್ಲಿ ಮುಹಮ್ಮದ್ ಅಫ್ಝಲ್ ನೈಕ್ ಮತ್ತು ಅಬ್ದುಸ್ಸಲಾಂಗೆ ಹಲ್ಲೆ ನಡೆಸುವಾಗ ಕೆಲವರು ಓಡಿ ಬಂದು ದುಷ್ಕರ್ಮಿಗಳ ಕೈಯಿಂದ ಬಚಾವ್ ಮಾಡಿದ್ದರು.

“ನೀವೆಲ್ಲ ಭಯೋತ್ಪಾದಕರು ನೀವು ಇಲ್ಲಿ ವ್ಯಾಪಾರ ಮಾಡುತ್ತಿದ್ದೀರಾ ಎಂದು ಕಲ್ಲೆಸೆದರು. ನಂತರ ಹಲ್ಲೆಗೆ ತೊಡಗಿದರು. ಆಧಾರ್ ಕಾರ್ಡ್ ಕೇಳಿದಾಗ ನಾವು ಆಧಾರ್ ಕಾರ್ಡು ತೋರಿಸಿದೆವು” ಎಂದು ಮುಹಮ್ಮದ್ ಅಫ್ಝಲ್ ನೈಕ್ ತಾವು ಎದುರಿಸಿದ ಆತಂಕಕಾರಿ ಕ್ಷಣಗಳನ್ನು ಪೊಲೀಸರು ಮತ್ತು ಮಾಧ್ಯಮಗಳಿಗೆ ವಿವರಿಸಿದರು. ತಮ್ಮನ್ನು ರಕ್ಷಣೆಗೆ ಧಾವಿಸಿದ ಸ್ಥಳೀಯರ ಕುರಿತು ” ಅವರೆಲ್ಲರೂ ಒಳ್ಳೆಯವರು. ಅವರು ನಮ್ಮ ರಕ್ಷಣೆಗೆ ಬಂದಿದ್ದಾರೆ. ಪೊಲೀಸರು ಬರುವ ಮೊದಲು ಅವರು ಬಂದರು.” ಅಫ್ಝಲ್ ನೈಕ್ ಹೇಳಿದರು.

“ಇದೊಂದು ಅನಿರೀಕ್ಷಿತವಾದ ಘಟನೆಯಾಗಿದ್ದು ಇಂತಹ ಘಟನೆಗಳನ್ನು ಕಾನೂನು ಬಲದಲ್ಲಿ ತಡೆಗಟ್ಟಲಿದ್ದೇವೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಅಮಾಯಕ ನಾಗರಿಕರ ಮೇಲೆ ಈ ರೀತಿ ಹಲ್ಲೆ ಮಾಡಲು ಬಿಡುವುದಿಲ್ಲ. ಅಮಾಯಕ ಕಾಶ್ಮೀರಿಗಳಿಗೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ್ ಕುಮಾರ್ ಹೇಳಿದರು. ಕಾಶ್ಮೀರಿಗಳ ವಿರುದ್ಧ ಹಲ್ಲೆಯನ್ನು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಉಮರ್ ಅಬ್ದುಲ್ಲ, ಮೆಹಬೂಬ ಮುಫ್ತಿ ಕಾಂಗ್ರೆಸ್, ಆಮ್ ಆದ್ಮಿಪಾರ್ಟಿ ಹಾಗೂ ಅಸದುದ್ದೀನ್ ಉವೈಸಿ ಖಂಡಿಸಿದ್ದಾರೆ.