ಸನ್ಮಾರ್ಗ ವಾರ್ತೆ
ಕೊಚ್ಚಿ: ಕಲ್ಪೇನಿಯದ ಮೂರು ಶಿಕ್ಷಣ ಸಂಸ್ಥೆಗಳ ಹೆಸರನ್ನು ಲಕ್ಷದ್ವೀಪ ಆಡಳಿತ ಬದಲಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕೆ.ಕೆ. ಮುಹಮ್ಮದ್ ಕೋಯಾ ಸರಕಾರಿ ಸೀನಿಯರ್ ಸೆಕೆಂಡರಿ ಸ್ಕೂಲ್, ಬಿಯುಮ್ಮ ಮೆಮೊರಿಯಲ್ ಜೂನಿಯರ್ ಬೇಸಿಕ್ ಸ್ಕೂಲ್, ಪಿಎಂ ಸಈದ್ ಕ್ಯಾಲಿಕಟ್ ಯುನಿವರ್ಸಿಟಿ ಸೆಂಟರ್ನ ಹೆಸರುಗಳನ್ನು ಬದಲಿಸಿದ್ದನ್ನು ಪ್ರಶ್ನಿಸಿ ಜನತಾದಳ ಯುನೈಟೆಡ್(ಜೆಡಿಯು) ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದಿಕ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಬಿಯುಮ್ಮ ಸ್ಕೂಲ್ ಅನ್ನು ಸುಭಾಶ್ ಚಂದ್ರಬೋಸ್ ಹಾಗೂ ಕೆ.ಕೆ.ಮುಹಮ್ಮದ್ ಕೋಯಾ ಸ್ಕೂಲ್ನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ರವರ ಹೆಸರಿಗೆ ಬದಲಾಯಿಸಲು ಫೆಬ್ರುವರಿ 1ರಂದು ಆದೇಶ ಹೊರಡಿಸಲಾಗಿತ್ತು.
ಡಾ.ಕೆ.ಕೆ.ಮುಹಮ್ಮದ್ ಕೋಯಾರವರು ಲಕ್ಷದ್ವೀಪ ಜಿಲ್ಲಾ ಪಂಚಾಯತ್ನ ಮೊದಲ ಮುಖ್ಯ ಕೌನ್ಸಿಲರ್ ಆಗಿದ್ದರು. ಬಿಯುಮ್ಮ ಮೊದಲ ಮಹಿಳಾ ಮೆಟ್ರಿಕ್ಯುಲೇಷನ್ ವಿಜೇತೆ ಮತ್ತು ದ್ವೀಪದ ಮೊದಲ ಟಿಟಿಸಿ ಶಿಕ್ಷಕಿ ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇರಿಸಲು ಯಾವುದೇ ಅಭ್ಯಂತರವಿಲ್ಲವಾದರೂ, ಲಕ್ಷದ್ವೀಪದ ಇತಿಹಾಸದಲ್ಲಿ ಸ್ಥಾನ ಪಡೆದ ಶಾಲೆಗಳನ್ನು ಆಯ್ಕೆ ಮಾಡುವಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿವೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ಕುರಿತು ಆಡಳಿತಾಧಿಕಾರಿಗೆ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.












