ಇದು ಬಜೆಟ್ ಅಲ್ಲ ಬಿಜೆಪಿಯ ಚುನಾವಣಾ ಪ್ರಣಾಳಿಕೆ: ವೆಲ್ಫೇರ್ ಪಾರ್ಟಿ

0
473

ಸನ್ಮಾರ್ಗ ವಾರ್ತೆ

ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ 2023-24 ಬಜೆಟ್ ಒಂದು ರೀತಿ ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯಾಗಿ ಕಾಣುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.

ಸಂಪೂರ್ಣವಾಗಿ ಒಲೈಕೆಯ ಬಜೆಟ್ ಇದಾಗಿದೆ ಹಿಂದಿನ ಬಾರಿ ಬಜೆಟ್‌ನಲ್ಲಿ ಮಾಡಿದಂತಹ ಆಶ್ವಾಸನೆಗಳು ಈ ತನಕ ಈಡೇರಿಲ್ಲ, ಆಶ್ವಾಸನೆಗಳ ಮಹಾಪೂರವೇ ಈ ಬಜೆಟ್‌ನಲ್ಲಿ ತುಂಬಿದ್ದಾರೆ ಎಂದು ಅವರು ಹೇಳಿದರು, ಬಜೆಟ್‌ನಲ್ಲಿಯೂ ಕೋಮು ಭೇದಭಾವ ಎದ್ದು ಕಾಣುತ್ತಿದೆ.

ಈ ಬಜೆಟ್‌ನಲ್ಲಿ ಬಡವರ ಮತ್ತು ಸಾಮಾನ್ಯ ಜನರ ಬಗ್ಗೆ ಯಾವುದೇ ಯೋಜನೆಗಳು ಕಾಣುತ್ತಿಲ್ಲ. ಬಿಪಿಎಲ್ ಅಡಿಯಲ್ಲಿ ಕೇವಲ ಒಂದು ಕೆಜಿ ಅಕ್ಕಿ ಹೆಚ್ಚಿಸಿ ಬಹಳ ದೊಡ್ಡ ಉಪಕಾರ ಮಾಡಿದ ಹಾಗೆ ಬಿಂಬಿಸಿದ್ದಾರೆ.

ಏರುತ್ತಿರುವ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುವ ಯಾವುದೇ ಪ್ರಸ್ತಾವನೆ ಈ ಬಜೆಟ್‌ನಲ್ಲಿ ಕಾಣುತ್ತಿಲ್ಲ, ಕೃಷಿ ಬಜೆಟ್ ಹೆಸರಿನಲ್ಲಿ ಬೇರೆ ಬೇರೆ ಹೆಸರುಗಳು ಬಳಸಿ ವೈಭವೀರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ತನ್ನ ಪ್ರಾಣ ಕಳೆದುಕೊಂಡಿದ್ದ ಸರ್ಕಾರಿ ನೌಕರರ ಕುಟುಂಬಗಳಿಗೆ ಇನ್ನು ತನಕ ಪರಿಹಾರ ಸಿಕ್ಕಿಲ್ಲ, ಅದರ ಬಗ್ಗೆಯೂ ಈ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ. ಈಗಾಗಲೇ ಬಹಳಷ್ಟು ಯೋಜನೆಗಳಿಗೆ ಅನುದಾನ ಇಲ್ಲ ಎಂದು ಕೈ ಬಿಡಲಾಗಿದೆ ಅಂತಹದರಲ್ಲಿ ಈ ಹೊಸ ಆಶ್ವಾಸನೆಗಳು ಹೇಗೆ ಪೂರ್ಣಗೊಳ್ಳುತ್ತವೆ? ಇದು ಕೇವಲ ಜನರಿಗೆ ಸುಳ್ಳು ಆಶ್ವಾಸನೆ ನೀಡುವ ಬಜೆಟ್ ಆಗಿದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರಿಗೆ ಘೋಷಿಸಿರುವ ಅನುದಾನವು ಗುಂಪಿನಲ್ಲಿ ಗೋವಿಂದ ಮಾಡಿದಂತೆ ಕಾಣುತ್ತಿದೆ. ಒಟ್ಟಾರೆ ಚುನಾವಣೆಯನ್ನು ಮುಂದಿಟ್ಟುಕೊಂಡು ಮಂಡಿಸಿರುವ ಈ ಬಜೆಟ್‌ನಿಂದ ಹೆಚ್ಚು ನಿರೀಕ್ಷೆಗಳು ಇಲ್ಲ ಎಂದು ಅವರು ಹೇಳಿದರು.