ನಾನು ಸಾಯಲಿ ಎಂದು ಕಾಂಗ್ರೆಸ್‌ನವರು ಬಯಸುತ್ತಿದ್ದಾರೆ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ

0
506

ಸನ್ಮಾರ್ಗ.ಕಾಮ್

ಬೆಳಗಾವಿ: ಕಾಂಗ್ರೆಸ್ ಪಕ್ಷದ ನಾಯಕರು ಎಷ್ಟು ಹತಾಶರಾಗಿದ್ದಾರೆ ಅಂದರೆ, ಮೋದಿ ಬದುಕಿರುವವರೆಗೆ ಏನೂ ಮಾಡಲು ಆಗಲ್ಲವೆಂದು ಗೊತ್ತಾಗಿದೆ. ಮೋದಿ ಸಾಯಲಿ, ಮೋದಿ ಸಾಯಲಿ ಎಂದು ಬಯಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ಸೋಮವಾರ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ಗಾಂಧಿ ಪರಿವಾರ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

“ನನಗೆ ಗುಂಡಿ ತೋಡುವುದರಲ್ಲಿಯೇ ಕೆಲವರು ನಿರತರಾಗಿದ್ದಾರೆ., ನಿಮ್ಮ ಶವ ಹೂಳಲು ಗುಂಡಿ ತೆಗೆಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ದೇಶದ ಜನ ಕಮಲ ಅರಳುತ್ತಿದೆ ಎಂದು ಹೇಳುತ್ತಿದ್ದಾರೆ. ಸತ್ಯದ ಹಾದಿಯಲ್ಲಿ ಕೆಲಸ ಮಾಡಿದಾಗ ಯಾವುದೇ ತೊಂದರೆಯಾಗಲ್ಲ. ನೀವು ನೀಡಿದ ಪ್ರೀತಿ ವಿಶ್ವಾಸವನ್ನು ಅಭಿವೃದ್ಧಿ ಮಾಡಿ ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ” ಎಂದು ಮೋದಿ ಹೇಳಿದರು.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ. ಆದರೆ, ಕರ್ನಾಟಕದವರನ್ನು ಅಪಮಾನಿಸುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿಬಿಟ್ಟಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕಾರವನ್ನು ಬೇಕಾದಂತೆ ನಡೆಸುವ ರಿಮೋಟ್ ಪರಿವಾರದ ಕೈಯಲ್ಲಿದೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದರು.

ದೇಶದ ಹಲವು ರಾಜ್ಯಗಳಲ್ಲಿ ಪರಿವಾರವಾದ (ವಂಶಾಡಳಿತ) ಇದೆ. ಕರ್ನಾಟಕದಲ್ಲಿಯೂ ಇದೆ. ಅದನ್ನು ನಿರ್ಮೂಲನೆ ಮಾಡಬೇಕಿದೆ ಎಂದು ಮೋದಿ ಹೇಳಿದರು.