ಕೇರಳ ಬಿಷಪ್ ಲೈಂಗಿಕ ಕಿರುಕುಳ ಪ್ರಕರಣ: ಮತ್ತೆ ಬೀದಿಗಿಳಿಯುವ ಎಚ್ಚರಿಕೆ ನೀಡಿದ ಕ್ರೈಸ್ತ ಸನ್ಯಾಸಿನಿಯರು

0
1755

ಕೋಟ್ಟಯಂ,ಮಾ.18: ಕ್ರೈಸ್ತ ಸನ್ಯಾಸಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕೋರ್ಟಿನಿಂದ ಜಾಮೀನು ಪಡೆದು ಬಿಡುಗಡೆಗೊಂಡಿರುವ ಮಾಜಿ ಜಲಂಧರ್ ಬಿಷಪ್ ಫ್ರಾಂಕೊ ಮುಳಗಲ್ ವಿರುದ್ಧ ಆರೋಪ ಪಟ್ಟಿಸಲ್ಲಿಸಲು ತಡವಾದರೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆಂದು ಕ್ರೈಸ್ತ ಸನ್ಯಾಸಿನಿಯರು ಹೇಳಿದ್ದಾರೆ. ಶೀಘ್ರವೇ ಕೋರ್ಟಿಗೆ ಆರೋಪ ಪಟ್ಟಿ ಸಲ್ಲಿಸಬೇಕೆಂದು ಕೋಟ್ಟಯಂ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ ಬಳಿಕ ಕುರುವಿಲಂಗಾಡಿ ಆಶ್ರಮದ ಐವರು ಕ್ರೈಸ್ತ ಸನ್ಯಾಸಿನಿಯರು ತಮ್ಮ ಮುಂದಿನ ಹೋರಾಟವನ್ನು ಬಹಿರಂಗಪಡಿಸಿ ಮುನ್ನೆಚ್ಚರಿಕೆ ನೀಡಿದ್ದಾರೆ.

ಆರೋಪ ಪಟ್ಟಿ ಸಲ್ಲಿಸಲು ಪೊಲೀಸರು ಮತ್ತು ಸರಕಾರ ಸುಮ್ಮನೆ ತಡ ಮಾಡುತ್ತಿದ್ದಾರೆ. ಮೂರು ದಿವಸದೊಳಗೆ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ತನಿಖೆಯ ಉಸ್ತುವಾರಿಯಿರುವ ಎಸ್ಪಿ ಭರವಸೆ ನೀಡಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿಯರು ತಿಳಿಸಿದರು. ಆರೋಪ ಪಟ್ಟಿ ಸಲ್ಲಿಕೆ ತಡವಾದರೆ ಸಾಕ್ಷಿಗಳ ಮೇಲೆ ಒತ್ತಡ ಹೆಚ್ಚುತ್ತದೆ ಎಂದು ಸಿಸ್ಟರ್ ಅನುಪಮಾ ಹೇಳಿದರು. ‘ಇದರ ಹೆಸರಲ್ಲಿ ಬಹಳಷ್ಟು ಕಷ್ಟ ಅನುಭವಿಸಬೇಕಾಗುತ್ತಿದೆ. ಒಂಟಿಯಾದ ಸ್ಥಿತಿ ನಮ್ಮದಾಗಿದೆ. ದೇಶದ ಬೇರೆ ಬೇರೆ ಕಡೆಗೆ ವರ್ಗಾವಣೆ ನಡೆಸಲು ಪ್ರಯತ್ನ ನಡೆಯುತ್ತಿದೆ. ಪ್ರಧಾನ ಸಾಕ್ಷಿಗಳಾದ ನಮಗೆ ದುಃಖ ಮತ್ತು ಹೆದರಿಕೆಯಾಗುತ್ತಿದೆ. ನಮ್ಮ ಅವಸ್ಥೆಯನ್ನು ನೀವು ಅರ್ಥಮಾಡಿಕೊಳ್ಳಬೇಕು. ಎಷ್ಟು ದಿವಸ ಇದನ್ನೆಲ್ಲ ತಾಳಿಕೊಳ್ಳಲು ನಮಗೆ ಸಾಧ್ಯ ಎಂದು ಗೊತ್ತಿಲ್ಲ” ಎಂದು ಎಸ್ಪಿಗೆ ನೀಡಿದ ದೂರಿನಲ್ಲಿ ಸಿಸ್ಟರ್.ಅನುಪಮಾ, ಸಿ.ಜೊಸಫಿನ್. ಸಿ. ಆಲ್ಫಿ, ಸಿ. ಅನ್ಸಿಟ, ಸಿ. ನೀನಾರೋಸ್ ಹೇಳಿದ್ದಾರೆ.

ಫ್ರಾಂಕೊ ವಿರುದ್ಧ ಸಾಕ್ಷಿ ಹೇಳಿದ ಬಳಿಕ ಆಶ್ರಮದಲ್ಲಿ ಕೈದಿಗಳಂತೆ ಬದುಕುತ್ತಿದ್ದೇವೆ. ಮತ್ತು ಮಾನಸಿಕ ಅಸ್ವಸ್ಥರೆಂದು ಬಿಂಬಿಸುವ ಪ್ರಯತ್ನವು ನಡೆಯುತ್ತಿದೆ ಎಂದು ಕ್ರೈಸ್ತ ಸನ್ಯಾಸಿನಿಯರು ಹೇಳಿದ್ದಾರೆ. ಇದೇ ವೇಳೆ “ಆರೋಪ ಪಟ್ಟಿಸಲ್ಲಿಸುವ ವಿಚಾರ ಪರಿಗಣನೆಯಲ್ಲಿದೆ. ರಾಜ್ಯದ ಡಿಜಿಪಿ ಪರಿಶೀಲಿಸಿದ ಬಳಿಕ ಅವರ ತೀರ್ಮಾನದಂತೆ ಕೋರ್ಟಿಗೆ ಆರೋಪ ಪಟ್ಟಿ ಸಲ್ಲಿಸಲಾಗುವುದು” ಎಂದು ಎಸ್ಪಿ ತಿಳಿಸಿದ್ದಾರೆ.