ಸನ್ಮಾರ್ಗ ವಾರ್ತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಕ್ರೀದ್ ಹಬ್ಬದ ಪ್ರಯುಕ್ತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಆಗಮಿಸಿದ್ದ ಸಹಸ್ರಾರು ಮುಸ್ಲಿಮ್ ಭಾಂದವರಿಗೆ ಹಬ್ಬದ ಶುಭಾಶಯವನ್ನು ಕೋರಿದರು. ವಸತಿ ಸಚಿವರಾದ ಝಮೀರ್ ಅಹಮದ್ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಈ ದಿನ ನೀವೆಲ್ಲಾ ಒಟ್ಟು ಸೇರಿದ್ದೀರಿ. ಇದು ಭಾಷಣ ಮಾಡುವ ಸಭೆಯಲ್ಲ. ನಿಮ್ಮ ಜತೆ ಭಾಗಿಯಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ.
ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಸಂಕೇತವಾಗಿದೆ. ಬಕ್ರೀದ್ ಹಬ್ಬ ನಾಡಿನಲ್ಲಿ ಸ್ನೇಹ, ಸೌಹಾರ್ದತೆ ನೆಲೆಸಲು ಪ್ರೇರಣೆಯಾಗಬೇಕು. ನಾವೆಲ್ಲರೂ ಮನುಷ್ಯರು, ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಬೇಕು ಎಂದರು.
ಸೌಹಾರ್ದಕ್ಕೆ ಅಡ್ಡಿಪಡಿಸುವ ಕೆಲ ಶಕ್ತಿಗಳಿವೆ ಅದಕ್ಕೆಲ್ಲ ಸೊಪ್ಪು ಹಾಕಬಾರದು. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಜೀವಿಸಿದೃ ರಾಜ್ಯ ಅಭಿವೃದ್ಧಿಯಾಗುತ್ತ ಸಾಗುತ್ತದೆ ಎಂದವರು ಹೇಳಿದರು.












