ಸನ್ಮಾರ್ಗ ವಾರ್ತೆ
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಾಹಿತ್ಯ ಪ್ರೇರಣಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ದಯಾನಂದ ರಾಮಚಂದ್ರ ನಾಯ್ಕ್ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮನವಿ ಸಲ್ಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಸನತ್ ಕುಮಾರ ಜೈನ್ ಅವರು ಜು.21ರಂದು ಮನವಿ ಸಲ್ಲಿಸಿದರು.
ನಮ್ಮ ನಾಡು, ಸಂಸ್ಕೃತಿಯ ಉಳಿಸುವ ಮತ್ತು ಬೆಳೆಸುವಲ್ಲಿ ಕನ್ನಡ ಭಾಷೆಯೇ ಆಧಾರ. ಈ ನಿಟ್ಟಿನಲ್ಲಿ ಭಾಷೆಯ ಸಬಲೀಕರಣಕ್ಕೆ, ದ ಕ ಜಿಲ್ಲೆಯಾದ್ಯಂತ ಪ್ರತೀ ಶಾಲೆಗಳಲ್ಲಿ, ವರ್ಷದಲ್ಲಿ ಕನಿಷ್ಠ ಒಂದಾದರೂ ಕನ್ನಡ ಪರ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಈ ಸಂದರ್ಭದಲ್ಲಿ ಕೋರಲಾಗಿದೆ.
ಸಾಹಿತಿಗಳ ಪರಿಚಯ, ಸಾಹಿತ್ಯಿಕ ಉಪನ್ಯಾಸ, ವಾಚನಾಲಯ ಬಳಕೆ, ಕತೆ ಕವನ ಬರವಣಿಗೆ ಕಮ್ಮಟ, ಕನ್ನಡ ಗೀತೆಗಳ ಗಾಯನ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಚರ್ಚಿಸಲಾಯಿತು. ಈ ಬಗ್ಗೆ ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲೆಗಳಿಗೆ ಸೂಕ್ತ ನಿರ್ದೇಶನ ನೀಡುವ ಬಗ್ಗೆ ಉಪನಿರ್ದೇಶಕರು ಭರವಸೆ ನೀಡಿದರು.












