ಹೊಸದಿಲ್ಲಿ, ಮಾ. 22: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ವಿರುದ್ಧ ಮಾಡಿದ ಆರೋಪ ಮಹಾ ಸುಳ್ಳು ಎಂದು ಕೇಂದ್ರ ಸಚಿವ ರವಿಶಂಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಇಷ್ಟೆಲ್ಲ ಪುರಾವೆಯಿದ್ದರೆ ಎಸಿಬಿಗೆ ಯಾಕೆ ಕಾಂಗ್ರೆಸ್ ದೂರು ನೀಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಒಂದು ಚಿಕ್ಕ ತುಂಡು ಕಾಗದವನ್ನು ಹಿಡಿದುಕೊಂಡು ಇವರು ತೋರಿಸಿದ್ದೆಲ್ಲ ಸುಳ್ಳು ಎಂದು ರವಿಶಂಕರ್ ಹೇಳಿದರು.
ಇದೇವೇಳೆ ಬಿಜೆಪಿಯ ಗೋ ಮಧುಸೂದನ್ರು ಯಡಿಯೂರಪ್ಪ ವಿರುದ್ಧ ಆರೋಪ ಕಾಂಗ್ರೆಸ್ನ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ, ಇದು ಕಾಂಗ್ರೆಸ್ನ ಚುನಾವಣ ತಂತ್ರ ಎಂದು ಹೇಳಿದ್ದಾರೆ. ಇದು ಅಪ್ರಸ್ತುತ, ಸುಳ್ಳಿನ ಕಂತೆ, ರಾಜಕೀಯ ಲಾಭ ಪಡೆಯುವ ವಿಚಾರ ಇದು. ಕಾನೂನು ತಜ್ಞರ ಸಲಹೆ ಪಡೆದು ಮಾನನಷ್ಟ ಕೇಸು ಹಾಕುತ್ತೇನೆ ಎಂದು ಯಡಿಯೂರಪ್ಪ ಕೂಡ ಹೇಳಿಕೆ ನೀಡಿದ್ದಾರೆ.
ಇದೇವೇಳೆ ಯಡಿಯೂರಪ್ಪ ಕಪ್ಪ ವಿಚಾರದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಯಡಿಯೂರಪ್ಪ 2009ರಲ್ಲಿ ನಮ್ಮ ರಾಜ್ಯ ಸಂಪತ್ತನ್ನು ಲೂಟಿ ಮಾಡಿ ಸಾವಿರಾರು ಕೋಟಿ ರೂಪಾಯಿ ಬಿಜೆಪಿಗೆ ಕೊಟ್ಟಿದ್ದಾರೆ ಎನ್ನುವ ಲೇಖನ ಬಂದಿದ್ದು ಇದರಿಂದ ಬಿಜೆಪಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು ಎಂದು ಗೊತ್ತಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.












