ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳಿಗೆ ತೊಂದರೆ; ಪರಿಹಾರ ನಿಧಿಗೆ ಕರ್ನಾಟಕದ ಆಗ್ರಹ

0
6

ಸನ್ಮಾರ್ಗ ವಾರ್ತೆ

ಬೆಂಗಳೂರು: ಎಥೆನಾಲ್ ಮಿಶ್ರಿತ ಪೆಟ್ರೋಲ್ ಕುರಿತ ಆತಂಕಗಳು ಹೆಚ್ಚುತ್ತಿರುವ ನಡುವೆಯೇ, ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಕಂಡುಬಂದಲ್ಲಿ, ಅದರಿಂದ ತೊಂದರೆಗೀಡಾಗುವ ವಾಹನ ಮಾಲೀಕರಿಗೆ ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸಬೇಕೆಂದು ಕರ್ನಾಟಕ ಆಗ್ರಹಿಸಿದೆ. ಪರೀಕ್ಷಾ ವಿಧಾನಗಳು ಮತ್ತು ಮಾದರಿಗಳ ವಿಶ್ವಾಸಾರ್ಹತೆಯ ಕುರಿತು ವಿವಾದ ಮುಂದುವರಿದಿದೆ.

ರಾಜ್ಯದ ವಿವಿಧ ಬಂಕ್‌ಗಳಿಂದ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳಲ್ಲಿ ಕೆಲವೆಡೆ ಶೇ. 31ರ ವರೆಗೂ ಎಥೆನಾಲ್ ಅಂಶ ಪತ್ತೆಯಾಗಿತ್ತು (ನಿಗದಿತ E20 ಮಿತಿ ಶೇ. 20). ಈ ಹಿನ್ನೆಲೆಯಲ್ಲಿ ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು; ಪ್ರತ್ಯೇಕ ಪರಿಹಾರ ನಿಧಿ, ಸ್ವತಂತ್ರ ಪ್ರಯೋಗಾಲಯ ಪರೀಕ್ಷೆ, ಪ್ರತಿಯೊಂದು ಪಂಪ್ ಮತ್ತು ಬಿಲ್‌ನಲ್ಲಿ ಎಥೆನಾಲ್ ಶೇಕಡಾವಾರು ಪ್ರಮಾಣದ ಉಲ್ಲೇಖ ಹಾಗೂ E20 ಜೊತೆಗೆ E10 ಮತ್ತು ಎಥೆನಾಲ್ ರಹಿತ ಪೆಟ್ರೋಲ್ ಲಭ್ಯತೆಯಂತಹ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಕೇರಳ ಸರ್ಕಾರವೂ ತನ್ನ ಪ್ರಾದೇಶಿಕ ಪ್ರಯೋಗಾಲಯಗಳ ಮೂಲಕ ಮಾದರಿಗಳನ್ನು ಪರೀಕ್ಷಿಸಲು ಮುಂದಾಗಿದ್ದು, ನಿಯಮ ಮೀರಿದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಈ ಮಧ್ಯೆ, ಪೆಟ್ರೋಲ್‌ನಲ್ಲಿರುವ ಎಥೆನಾಲ್ ಪ್ರಮಾಣವನ್ನು ಪರೀಕ್ಷಿಸಲು ಕೇರಳ ಸರ್ಕಾರ ರಾಜ್ಯದ ಮೂರು ಸರ್ಕಾರಿ ಪ್ರಯೋಗಾಲಯಗಳಿಗೆ ವಿಶೇಷ ಪರೀಕ್ಷಾ ಕಿಟ್‌ಗಳನ್ನು ಹಸ್ತಾಂತರಿಸಿದೆ. ಕೋಝಿಕ್ಕೋಡ್, ಕೊಚ್ಚಿ ಮತ್ತು ತಿರುವನಂತಪುರದ ರಾಸಾಯನಿಕ ಪರೀಕ್ಷಾ ಪ್ರಯೋಗಾಲಯಗಳಲ್ಲಿ (Chemical Examiners’ Laboratories) ಪರೀಕ್ಷೆ ನಡೆಸಲಾಗುತ್ತಿದೆ. ರಾಜ್ಯದ ಮನವಿಯ ಮೇರೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಈ ಕಿಟ್‌ಗಳನ್ನು ಒದಗಿಸಿದೆ. ನವೆಂಬರ್ 17ರಂದು ಬಿಡುಗಡೆಯಾದ ಮಾಹಿತಿಯ ಪ್ರಕಾರ, ಈಗಾಗಲೇ 13 ಪೆಟ್ರೋಲ್ ಮಾದರಿಗಳನ್ನು ಪ್ರಯೋಗಾಲಯಗಳಿಗೆ ನೀಡಲಾಗಿದೆ.

ಪರೀಕ್ಷಾ ಫಲಿತಾಂಶಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಎಥೆನಾಲ್ ಇರುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಅನೂಪ್ ಜೇಕಬ್ ತಿಳಿಸಿದ್ದಾರೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಕುರಿತ ಚರ್ಚೆಯಲ್ಲಿ ವಾಹನ ಮಾಲೀಕರನ್ನು ಅತಿ ಹೆಚ್ಚು ಕಾಡುತ್ತಿರುವ ವಿಷಯವೆಂದರೆ ಮೈಲೇಜ್ ಕಡಿಮೆಯಾಗುತ್ತದೆಯೇ ಎಂಬುದು.

ಹಳೆಯ ಮಾದರಿಯ ವಾಹನಗಳ ಮಾಲೀಕರು ಇಂಧನ ದಕ್ಷತೆ ಕುಸಿದಿರುವ ಬಗ್ಗೆ ಹಾಗೂ ಕೆಲವು ಎಂಜಿನ್ ಬಿಡಿಭಾಗಗಳಿಗೆ ಹಾನಿಯಾಗುತ್ತಿರುವ ಬಗ್ಗೆ ದೂರುಗಳನ್ನು ಸಲ್ಲಿಸಿದ್ದಾರೆ. ಎಥೆನಾಲ್ ಬಳಕೆಯನ್ನು ಉತ್ತೇಜಿಸುವುದಕ್ಕೆ ಕರ್ನಾಟಕದ ವಿರೋಧವಿಲ್ಲ; ಆದರೆ ನಿಗದಿತ ಮಿತಿಗಿಂತ ಹೆಚ್ಚು ಮಿಶ್ರಣ ಮಾಡಿದರೆ ಅದಕ್ಕೆ ಹೊಣೆಗಾರಿಕೆ ನಿಗದಿಪಡಿಸಬೇಕು ಎಂಬುದು ರಾಜ್ಯದ ನಿಲುವಾಗಿದೆ. ಕೇರಳದಲ್ಲಿ ನಡೆಯುತ್ತಿರುವ ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ನಂತರ E20 ಪೆಟ್ರೋಲ್ ಕುರಿತ ಗೊಂದಲಗಳಿಗೆ ಮತ್ತಷ್ಟು ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.