ಗಾಝ: ಪ್ರತಿಭಟನಾಕಾರರ ಮೇಲೆ ಇಸ್ರೇಲ್ ಸೇನೆಯಿಂದ ಗುಂಡಿನ ದಾಳಿ; ಇಬ್ಬರ ಸಾವು, ಹಲವರಿಗೆ ಗಾಯ

0
1639

ಗಾಝ ಸಿಟಿ: ಗಾಝಪಟ್ಟಿಯಲ್ಲಿ ಇಸ್ರೇಲಿನ ಮಾರಣ ಹೋಮ ಮುಂದುವರಿಯುತ್ತಿದ್ದು ಇಸ್ರೇಲ್-ಗಾಝ ಗಡಿಯಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಇಬ್ಬರನ್ನು ಇಸ್ರೇಲ್ ಸೇನೆ ಹತ್ಯೆಗೈದಿದೆ. ಅಪಾರ ಜನರು ಗಾಯಗೊಂಡಿದ್ದಾರೆ. ಕಳೆದ ಮಾರ್ಚ್‍ನಿಂದ ಎಲ್ಲ ಶುಕ್ರವಾರಗಳಲ್ಲಿ ಇಸ್ರೇಲ್ ವಿರುದ್ಧ ಫೆಲಸ್ತೀನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇಸ್ರೇಲ್ ಸೈನ್ಯ 200ಕ್ಕೂ ಹೆಚ್ಚು ಮಂದಿಯನ್ನು ಹೈತ್ಯೆಗೈದಿದೆ.

1948 ರಲ್ಲಿ ಇಸ್ರೇಲ್ ರೂಪುಗೊಂಡ ಬಳಿಕ ಫೆಲಸ್ತೀನಿನಿಂದ ವಶಪಡಿಸಿಕೊಂಡ ಜಾಗವನ್ನು ಬಿಟ್ಟುಕೊಡಬೇಕೆಂದು ಆಗ್ರಹಿಸಿ ಫೆಲಸ್ತೀನಿಯರು ಪ್ರತೀ ಶುಕ್ರವಾರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆಗೆ ಇಸ್ರೇಲ್ ಸೇನೆ ಗುಂಡು ಹಾರಿಸಿತು.  28 ವರ್ಷ ಮತ್ತು 18 ವರ್ಷದ ಇಬ್ಬರು ಯುವಕರು ಇಸ್ರೇಲಿನ ಗುಂಡಿನ ದಾಳಿಗೆ ಬಲಿಯಾಗಿದ್ದು 55 ಮಂದಿ ಗಾಯಗೊಂಡಿದ್ದಾರೆ. ಆದರೆ ಪ್ರತಿಭಟನಾಕಾರರು 9,500 ಮಂದಿ ಇದ್ದರು. ಅವರು ಕಲ್ಲೆಸೆದರು ಮತ್ತು ಟಯರ್ ಉರಿಸಿದರು. ಆದ್ದರಿಂದ ಗುಂಡು ಹಾರಿಸಲಾಗಿದೆ ಎಂದು ಇಸ್ರೇಲಿನ ಸೇನೆ ಹೇಳಿದೆ.

ಇಸ್ರೇಲ್ ಆಕ್ರಮಿಸಿಕೊಂಡಿರುವ ತಮ್ಮ ಜಮೀನನ್ನು ಮರಳಿಸುವಂತೆ ಆಗ್ರಹಿಸಿ ಫೆಲಸ್ತೀನಿಯರು ಎಲ್ಲ ಶುಕ್ರವಾರ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಈವರೆಗೆ ಇಸ್ರೇಲ್ ಸೇನೆಯ ಗುಂಡಿಗೆ 200 ಮಂದಿ ಪ್ರತಿಭಟನಾಕಾರರು ಹತರಾಗಿದ್ದಾರೆ. ಮತ್ತು ಇದೇ ಅವಧಿಯಲ್ಲಿ ಗಾಝದಲ್ಲಿ ನಡೆದ ಇತರ ದಾಳಿಗಳಲ್ಲಿ ಅರುವತ್ತು ಮಂದಿ ಫೆಲಸ್ತೀನಿಯರು ಮೃತಪಟ್ಟಿದ್ದಾರೆ.