ಆರೋಪಿಯು ದೋಷಮುಕ್ತನಾದರೂ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಬೇಕು: ಸುಪ್ರೀಂ ಕೋರ್ಟ್

0
10

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪ್ರಕರಣವೊಂದರಲ್ಲಿ ಆರೋಪಿಗಳು ದೋಷಮುಕ್ತರಾದರೂ ಹತ್ಯೆಗೀಡಾದವರ ಕುಟುಂಬಗಳಿಗೆ ಆರ್ಥಿಕ ನೆರವು ಅಥವಾ ಪರಿಹಾರ ನೀಡಲು ಸಾಧ್ಯವೇ ಎಂದು ಪರಿಶೀಲಿಸುವಂತೆ ಭಿವಾನಿಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. 2011ರ ಏಪ್ರಿಲ್ 17 ರಂದು ಹರಿಯಾಣದ ಭಿವಾನಿ ಜಿಲ್ಲೆಯ ರಾನಿಲಾ ಗ್ರಾಮದಲ್ಲಿ ಶಕುಂತಲಾ ಮತ್ತು ಸುಮನ್ ಎಂಬ ಇಬ್ಬರು ವಿಧವೆ ಮಹಿಳೆಯರು ಹತ್ಯೆಗೀಡಾಗಿದ್ದರು. ವೈಯಕ್ತಿಕ ಸಂಬಂಧಗಳ ಕುರಿತಾದ ಅನುಮಾನದ ಹಿನ್ನೆಲೆಯಲ್ಲಿ ಸಂಬಂಧಿಕರಾದ ನರೇಶ್ ಮತ್ತು ಸುಭಾಷ್ ಎಂಬುವವರು ಸೇರಿ ಇಬ್ಬರನ್ನೂ ಕೋಲಿನಿಂದ ಹೊಡೆದು ಕ್ರೂರವಾಗಿ ಕೊಲೆ ಮಾಡಿದ್ದರು. ಮಹಿಳೆಯರನ್ನು ಅವರ ಮನೆಗಳಿಂದ ಹೊರಗೆಳೆದು ಸಾರ್ವಜನಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

ಆದರೆ, ನ್ಯಾಯಾಲಯದಲ್ಲಿ ಅಪರಾಧವನ್ನು ಸಾಬೀತುಪಡಿಸಲು ಅಗತ್ಯವಿರುವ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಯಿತು. ಈ ಕಾರಣದಿಂದ ಸುಪ್ರೀಂ ಕೋರ್ಟ್ ಆರೋಪಿಗಳನ್ನು ದೋಷಮುಕ್ತಗೊಳಿಸಿತು. ಅದೇ ಸಮಯದಲ್ಲಿ, ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗದಿದ್ದರೂ ಸಹ, ಹತ್ಯೆಗೀಡಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಒದಗಿಸಲು ಅಥವಾ ಪುನರ್ವಸತಿ ಕಲ್ಪಿಸಲು ಕಾನೂನುಬದ್ಧ ವ್ಯವಸ್ಥೆಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಕೇವಲ ತಾಂತ್ರಿಕ ಕಾರಣಗಳಿಂದ ಅಥವಾ ಸಾಕ್ಷ್ಯದ ಕೊರತೆಯಿಂದ ಆರೋಪಿಗೆ ಶಿಕ್ಷೆಯಾಗಿಲ್ಲ ಎಂಬ ಮಾತ್ರಕ್ಕೆ, ಅನ್ಯಾಯಕ್ಕೊಳಗಾದ ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ಸಿಗಬೇಕಾದ ಪರಿಹಾರ ಅಥವಾ ನೆರವು ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.