ಸತ್ಯದ ಧ್ವನಿಗೆ ಭಯವೇಕೆ? ಪತ್ರಕರ್ತರ ಸುರಕ್ಷತೆ ಪ್ರಜಾಪ್ರಭುತ್ವದ ಹೊಣೆಗಾರಿಕೆ

0
11

✍️ ಡಾ. ಸಿದ್ಧಲಿಂಗಸ್ವಾಮಿ ಕೆ. ಪಿ.
ಸಂಶೋಧಕರು, CSSI,ಮಂಗಳೂರು ವಿಶ್ವವಿದ್ಯಾನಿಲಯ

ನವೆಂಬರ್‌ 2 ದಿನಾಂಕವು ಪತ್ರಕರ್ತರ ವಿರುದ್ಧದ ಅಪರಾಧಗಳಿಗೆ ಶಿಕ್ಷೆಯಾಗದಿರುವುದನ್ನು ಕೊನೆಗೊಳಿಸುವ ಅಂತಾರಾಷ್ಟ್ರೀಯ ದಿನ. ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಪ್ರಶ್ನಿಸುವುದು, ಅಧಿಕಾರದ ದುರುಪಯೋಗವನ್ನು ಬಯಲಿಗೆಳೆಯುವುದು ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುವುದು ಪತ್ರಿಕೋದ್ಯಮದ ಮೂಲ ಆಶಯ. ಆದರೆ ಇಂತಹ ಜವಾಬ್ದಾರಿಯುತ ಕಾರ್ಯದಲ್ಲಿ ತೊಡಗಿರುವ ಪತ್ರಕರ್ತರೇ ಬೆದರಿಕೆ, ಹಲ್ಲೆ, ಕಿರುಕುಳ ಮತ್ತು ಜೀವಭಯವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕಕಾರಿ. ಸತ್ಯವನ್ನು ಹೊರತರುವ ಪ್ರಯತ್ನವೇ ಅಪಾಯಕ್ಕೆ ಕಾರಣವಾದರೆ, ಅದು ಕೇವಲ ಪತ್ರಕರ್ತರ ವೃತ್ತಿಪರ ಸಮಸ್ಯೆಯಲ್ಲ; ಪ್ರಜಾಪ್ರಭುತ್ವದ ಸ್ವಾತಂತ್ರ‍್ಯ, ಪಾರದರ್ಶಕತೆ ಮತ್ತು ನ್ಯಾಯದ ಮೌಲ್ಯಗಳಿಗೂ ಎದುರಾಗುವ ಗಂಭೀರ ಸವಾಲು. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಗುರುತಿಸಲ್ಪಡುವ ಮಾಧ್ಯಮಗಳು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವ, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಬೆಳಕಿಗೆ ತರುವ ಮತ್ತು ಜನರ ಹಕ್ಕುಗಳ ಪರವಾಗಿ ಧ್ವನಿಯೆತ್ತುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತವೆ. ಶಿಕ್ಷಣ, ಆರೋಗ್ಯ, ಪರಿಸರ, ಭ್ರಷ್ಟಾಚಾರ, ಸಾಮಾಜಿಕ ಅಸಮಾನತೆ ಮತ್ತು ಮೂಲಸೌಕರ್ಯಗಳ ಸಮಸ್ಯೆಗಳನ್ನು ಜನರ ಮುಂದಿಡುವ ಮೂಲಕ ಆಡಳಿತದಲ್ಲಿ ಉತ್ತರದಾಯಿತ್ವವನ್ನು ಬೆಳೆಸುತ್ತವೆ. ಹೀಗಾಗಿ ಪತ್ರಕರ್ತರು ಕೇವಲ ಸುದ್ದಿಯನ್ನು ತಲುಪಿಸುವವರಲ್ಲ; ಸಮಾಜದ ವಿವೇಕವನ್ನು ಜಾಗೃತಗೊಳಿಸುವವರೂ ಹೌದು.

ಆದರೆ ಸತ್ಯಶೋಧನೆಯ ಹಾದಿಯಲ್ಲಿ ಪತ್ರಕರ್ತರು ಹಲವು ಅಪಾಯಗಳನ್ನು ಎದುರಿಸುತ್ತಿದ್ದಾರೆ. ಭ್ರಷ್ಟಾಚಾರ, ಅಕ್ರಮ ವ್ಯವಹಾರ, ಸಂಘಟಿತ ಅಪರಾಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ವರದಿ ಮಾಡುವಾಗ ದೈಹಿಕ ಹಲ್ಲೆ, ಜೀವ ಬೆದರಿಕೆ, ಸುಳ್ಳು ಪ್ರಕರಣಗಳ ಭೀತಿ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗುತ್ತಾರೆ. ಗ್ರಾಮೀಣ ಹಾಗೂ ಸ್ಥಳೀಯ ಪತ್ರಕರ್ತರಿಗೆ ಅಗತ್ಯ ಕಾನೂನು ನೆರವು ಮತ್ತು ಸಾಂಸ್ಥಿಕ ಬೆಂಬಲ ದೊರೆಯದಿರುವುದು ಮತ್ತಷ್ಟು ಸವಾಲಾಗಿದೆ. ಮಹಿಳಾ ಪತ್ರಕರ್ತರು ವೃತ್ತಿಪರ ಒತ್ತಡಗಳ ಜೊತೆಗೆ ಲಿಂಗಾಧಾರಿತ ನಿಂದನೆ ಮತ್ತು ಆನ್ಲೈನ್ ಕಿರುಕುಳವನ್ನೂ ಎದುರಿಸುತ್ತಿದ್ದಾರೆ. ಇಂತಹ ಬೆಳವಣಿಗೆಗಳು ಅವರ ಸುರಕ್ಷತೆಯನ್ನಷ್ಟೇ ಅಲ್ಲ, ಸ್ವತಂತ್ರವಾಗಿ ವರದಿ ಮಾಡುವ ಸಾಮರ್ಥ್ಯವನ್ನೂ ಕುಂಠಿತಗೊಳಿಸುತ್ತವೆ. ಪತ್ರಕರ್ತರ ವಿರುದ್ಧದ ಅಪರಾಧಗಳಲ್ಲಿ ಅತ್ಯಂತ ಗಂಭೀರವಾದದ್ದು ಅಪರಾಧಿಗಳಿಗೆ ಶಿಕ್ಷೆಯಾಗದಿರುವ ಪ್ರವೃತ್ತಿ. ದಾಳಿಗಳ ಕುರಿತು ತ್ವರಿತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯದಿದ್ದರೆ, ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸದಿದ್ದರೆ ಮತ್ತು ನ್ಯಾಯಾಂಗ ಪ್ರಕ್ರಿಯೆ ವಿಳಂಬವಾದರೆ ನ್ಯಾಯದ ಮೇಲಿನ ಜನರ ವಿಶ್ವಾಸ ಕುಸಿಯುತ್ತದೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ಪ್ರಭಾವ ಅಥವಾ ಸ್ಥಾನಮಾನವನ್ನು ಪರಿಗಣಿಸದೆ ಕಾನೂನಿನ ಮುಂದೆ ಹೊಣೆಗಾರರನ್ನಾಗಿಸಬೇಕು. ಪತ್ರಕರ್ತರ ಮೇಲಿನ ದಾಳಿಯನ್ನು ಕೇವಲ ವೈಯಕ್ತಿಕ ಹಲ್ಲೆಯಾಗಿ ನೋಡದೆ, ಅದರ ಹಿಂದೆ ಪತ್ರಿಕೋದ್ಯಮದ ಸ್ವಾತಂತ್ರ‍್ಯವನ್ನು ಕುಂಠಿತಗೊಳಿಸುವ ಉದ್ದೇಶವಿದೆಯೇ ಎಂಬುದನ್ನೂ ತನಿಖೆ ಮಾಡುವುದು ಅಗತ್ಯ.

ಭಾರತದ ಸಂವಿಧಾನದ ಅನುಚ್ಛೇದ 19(1)(ಚಿ) ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಖಾತರಿಪಡಿಸುತ್ತದೆ. ಪತ್ರಿಕಾ ಸ್ವಾತಂತ್ರ‍್ಯವು ಇದೇ ಹಕ್ಕಿನ ಅವಿಭಾಜ್ಯ ಅಂಗವಾಗಿದೆ. ಅನುಚ್ಛೇದ 19(2) ನಿರ್ದಿಷ್ಟ ಕಾರಣಗಳಿಗಾಗಿ ಸಮಂಜಸ ನಿರ್ಬಂಧಗಳನ್ನು ವಿಧಿಸಲು ಅವಕಾಶ ನೀಡುತ್ತದೆ. ಸ್ವಾತಂತ್ರ‍್ಯದ ಜೊತೆಗೆ ಹೊಣೆಗಾರಿಕೆಯೂ ಅಗತ್ಯ. ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು, ವದಂತಿಗಳನ್ನು ಸುದ್ದಿಯಾಗಿ ಬಿಂಬಿಸದಿರುವುದು ಮತ್ತು ಎಲ್ಲ ಸಂಬಂಧಿತ ಆಯಾಮಗಳಿಗೆ ಅವಕಾಶ ನೀಡುವುದು ಪತ್ರಕರ್ತರ ವೃತ್ತಿಪರ ಕರ್ತವ್ಯ. ಆದರೆ ವಿಮರ್ಶಾತ್ಮಕ ವರದಿಗಾರಿಕೆಯನ್ನು ಬೆದರಿಕೆ ಅಥವಾ ದಾಳಿಗಳ ಮೂಲಕ ತಡೆಯುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಪತ್ರಕರ್ತರ ರಕ್ಷಣೆಯಲ್ಲಿ ಸರ್ಕಾರ, ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗದ ಪಾತ್ರ ನಿರ್ಣಾಯಕವಾಗಿದೆ. ಬೆದರಿಕೆ ಎದುರಿಸುವವರಿಗೆ ಸೂಕ್ತ ಭದ್ರತೆ, ದಾಳಿಗಳ ಕುರಿತು ತ್ವರಿತ ತನಿಖೆ ಮತ್ತು ತಪ್ಪಿತಸ್ಥರಿಗೆ ಕಾನೂನುಬದ್ಧ ಶಿಕ್ಷೆ ಖಾತರಿಯಾಗಬೇಕು. ಮಾಧ್ಯಮ ಸಂಸ್ಥೆಗಳು ವರದಿಗಾರರಿಗೆ ಸುರಕ್ಷತಾ ತರಬೇತಿ, ವಿಮೆ, ಆರೋಗ್ಯ ಸೌಲಭ್ಯ ಮತ್ತು ಕಾನೂನು ನೆರವು ಒದಗಿಸಬೇಕು. ಕಡಿಮೆ ವೇತನ ಮತ್ತು ಉದ್ಯೋಗದ ಅನಿಶ್ಚಿತತೆಯಂತಹ ಆರ್ಥಿಕ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವುದು ಸ್ವತಂತ್ರ ಪತ್ರಿಕೋದ್ಯಮಕ್ಕೆ ಪೂರಕವಾಗುತ್ತದೆ.

ಡಿಜಿಟಲ್ ಯುಗದಲ್ಲಿ ಪತ್ರಕರ್ತರ ಸವಾಲುಗಳು ಮತ್ತಷ್ಟು ಸಂಕೀರ್ಣವಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲಿಂಗ್, ಸಂಘಟಿತ ನಿಂದನೆ, ವೈಯಕ್ತಿಕ ಮಾಹಿತಿ ಸೋರಿಕೆ, ಸೈಬರ್ ದಾಳಿ ಮತ್ತು ಕೃತಕ ಬುದ್ಧಿಮತ್ತೆಯ ದುರ್ಬಳಕೆಯಿಂದ ಸೃಷ್ಟಿಯಾಗುವ ಡೀಪ್‌ಫೇಕ್‌ಗಳು ಪತ್ರಕರ್ತರ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಗೆ ಧಕ್ಕೆ ತರುತ್ತಿವೆ. ಹೀಗಾಗಿ ಡಿಜಿಟಲ್ ಸುರಕ್ಷತೆ, ಸೈಬರ್ ಅಪರಾಧಗಳ ವಿರುದ್ಧ ತ್ವರಿತ ಕ್ರಮ ಮತ್ತು ಮಾಧ್ಯಮ ಸಾಕ್ಷರತೆಗೆ ಆದ್ಯತೆ ನೀಡಬೇಕು. ತಂತ್ರಜ್ಞಾನವು ಸತ್ಯವನ್ನು ಜನರಿಗೆ ತಲುಪಿಸುವ ಸಾಧನವಾಗಬೇಕೇ ಹೊರತು, ಸತ್ಯವನ್ನು ಹೇಳುವವರನ್ನು ಮೌನಗೊಳಿಸುವ ಆಯುಧವಾಗಬಾರದು. ಪತ್ರಕರ್ತರ ಸುರಕ್ಷತೆ ಸರ್ಕಾರ ಮತ್ತು ಮಾಧ್ಯಮ ಸಂಸ್ಥೆಗಳ ಹೊಣೆಗಾರಿಕೆಗೆ ಮಾತ್ರ ಸೀಮಿತವಲ್ಲ. ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಹಂಚದಿರುವುದು, ಭಿನ್ನಾಭಿಪ್ರಾಯವನ್ನು ಸಹಿಷ್ಣುತೆಯಿಂದ ಸ್ವೀಕರಿಸುವುದು ಮತ್ತು ಪತ್ರಕರ್ತರ ಮೇಲಿನ ಹಿಂಸೆಯನ್ನು ಖಂಡಿಸುವುದು ನಾಗರಿಕರ ಜವಾಬ್ದಾರಿಯಾಗಿದೆ. ವರದಿಗಳನ್ನು ಪ್ರಶ್ನಿಸುವ ಮತ್ತು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಬೆದರಿಕೆ ಮತ್ತು ಹಿಂಸೆಗೆ ಯಾರಿಗೂ ಅವಕಾಶವಿಲ್ಲ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2013ರಲ್ಲಿ ಅಂಗೀಕರಿಸಿದ ನಿರ್ಣಯದ ಮೂಲಕ ನವೆಂಬರ್ 2 ಅನ್ನು ಪತ್ರಕರ್ತರ ವಿರುದ್ಧದ ಅಪರಾಧಗಳಿಗೆ ಶಿಕ್ಷೆಯಾಗದಿರುವುದನ್ನು ಕೊನೆಗೊಳಿಸುವ ಅಂತಾರಾಷ್ಟ್ರೀಯ ದಿನವೆಂದು ಘೋಷಿಸಿತು. 2013ರ ನವೆಂಬರ್ 2ರಂದು ಮಾಲಿಯಲ್ಲಿ ಹತ್ಯೆಗೀಡಾದ ಇಬ್ಬರು ಫ್ರೆಂಚ್ ಪತ್ರಕರ್ತರ ಸ್ಮರಣಾರ್ಥ ಈ ದಿನವನ್ನು ಆಯ್ಕೆ ಮಾಡಲಾಯಿತು. ಯುನೆಸ್ಕೊದ 2026ರ ಮಾಹಿತಿಯ ಪ್ರಕಾರ, 1993ರಿಂದ 1,700ಕ್ಕೂ ಹೆಚ್ಚು ಪತ್ರಕರ್ತರು ಹತ್ಯೆಗೀಡಾಗಿದ್ದಾರೆ. 2006ರಿಂದ ದಾಖಲಾದ ಪತ್ರಕರ್ತರ ಹತ್ಯೆ ಪ್ರಕರಣಗಳಲ್ಲಿ ಶೇಕಡಾ 86ರಷ್ಟು ಪ್ರಕರಣಗಳು ಬಗೆಹರಿಯದೆ ಉಳಿದಿರುವುದು ಜಾಗತಿಕ ನ್ಯಾಯ ವ್ಯವಸ್ಥೆಯ ಮುಂದಿರುವ ಗಂಭೀರ ಸವಾಲನ್ನು ಸೂಚಿಸುತ್ತದೆ. ಈ ದಿನದ ಆಚರಣೆ ಕೇವಲ ಹತ್ಯೆಗೀಡಾದ ಪತ್ರಕರ್ತರನ್ನು ಸ್ಮರಿಸುವುದಕ್ಕೆ ಸೀಮಿತವಾಗಬಾರದು. ಅವರ ಕುಟುಂಬಗಳಿಗೆ ನ್ಯಾಯ ಒದಗಿಸುವುದು, ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡುವುದು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷಿತ ವಾತಾವರಣ ನಿರ್ಮಿಸುವ ಸಂಕಲ್ಪವಾಗಬೇಕು. ಪತ್ರಕರ್ತರು ತಪ್ಪು ಮಾಡಲಾರದವರಲ್ಲ; ಅವರ ವರದಿಗಳನ್ನು ಪ್ರಶ್ನಿಸಬಹುದು, ವಿಮರ್ಶಿಸಬಹುದು. ಆದರೆ ಸತ್ಯವನ್ನು ಪ್ರಶ್ನಿಸುವ ಹಕ್ಕು ಮತ್ತು ಸತ್ಯವನ್ನು ಹೊರತರುವವರನ್ನು ಬೆದರಿಸುವ ಪ್ರವೃತ್ತಿ ಒಂದೇ ಅಲ್ಲ. ಪತ್ರಕರ್ತರ ಧ್ವನಿಗೆ ರಕ್ಷಣೆ ನೀಡುವುದು ಎಂದರೆ ಪ್ರತಿಯೊಬ್ಬ ನಾಗರಿಕನ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಗೌರವಿಸುವುದು. ಸತ್ಯವನ್ನು ಹೇಳುವವರಿಗೆ ಭಯವಿಲ್ಲದ, ಅನ್ಯಾಯವನ್ನು ಪ್ರಶ್ನಿಸುವವರಿಗೆ ಕಿರುಕುಳವಿಲ್ಲದ ಸಮಾಜವೇ ನಿಜವಾದ ಪ್ರಜಾಪ್ರಭುತ್ವದ ಪ್ರತಿಬಿಂಬ. ಪತ್ರಕರ್ತರ ಧ್ವನಿಯನ್ನು ರಕ್ಷಿಸೋಣ; ಸತ್ಯದ ಬೆಳಕನ್ನು ಉಳಿಸೋಣ; ನ್ಯಾಯದ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸೋಣ.