ಜನರಲ್ಲಿ ಪರಸ್ಪರ ಸೇವಾ ಕಾರ್ಯ ಬೆಳೆಯಲಿ: ಸಲೀಮ್ ಅರ್ಶಾದಿ

0
500

ಸನ್ಮಾರ್ಗ ವಾರ್ತೆ

ಪಾಣೆಮಂಗಳೂರು: “ಜನರು ಪರಸ್ಪರ ಸಹಕಾರ ಮನೋಭಾವ ಹೊಂದಬೇಕು. ನೆರೆಯವರ ಇತರ ಬಡ ಬಗ್ಗರ ಸಂಕಷ್ಟಗಳನ್ನು ನಮ್ಮ ಸಂಕಷ್ಟಗಳೆಂದು ಭಾವಿಸಿ ನೆರವಾಗಬೇಕು” ಎಂದು ಬದ್ರಿಯಾ ಜುಮ್ಮಾ ಮಸೀದಿ ಆಲಂಪಾಡಿ ಇದರ ಖತೀಬರಾದ ಸಲೀಮ್ ಅರ್ಶಾದಿಯವರು ಹೇಳಿದರು.

ಅವರು ಜಮಾಅತೆ ಇಸ್ಲಾಮಿ ಹಿಂದ್ ಪಾಣೆಮಂಗಳೂರು ಶಾಖೆಯ ಅಧೀನದ ಸಮಾಜ ಸೇವಾ ಘಟಕದ ವತಿಯಿಂದ ಸಜೀಪ ಮುನ್ನೂರು ಗ್ರಾಮದ ಆಲಂಪಾಡಿಯಲ್ಲಿ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಂತರ ಮಾತನಾಡಿದ ಮಂಗಳೂರು ಜ.ಇ. ಸಮಾಜ ಸೇವಾ ವಿಭಾಗದ ವ್ಯವಸ್ಥಾಪಕರಾದ ಮುಹಮ್ಮದ್ ಸಿದ್ದೀಕ್ ಜಕ್ರಿಬೆಟ್ಟು ಮಾತನಾಡುತ್ತಾ ” ದೇವನ ಪ್ರತಿಫಲದ ಪ್ರಜ್ಞೆಯನ್ನು ಬೆಳೆಸಿ ಪ್ರಚಾರ ಬಯಸದೆ ಸಮಾಜ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿರಬೇಕು. ಇದು ಇಸ್ಲಾಮೀ ಕಾರ್ಯದ ಒಂದು ಭಾಗವಾಗಿದೆ. ಇತರರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಸರಳ ಕಾರ್ಯಕ್ರಮದ ನಡೆಸಲಾಗಿದೆಯೆಂದರು.

ಹವ್ವಾ ಮಸೀದಿ ಖತೀಬರಾದ ಮೌಲಾನಾ ಯಹ್ಯಾ ತಂಙಳ್ ಮನೆಯನ್ನು ಉದ್ಘಾಟಿಸಿ ಕೊನೆಯಲ್ಲಿ ಸಮಾರೋಪ ನುಡಿಗಳನ್ನಾಡಿ ಪ್ರಾರ್ಥಿಸಿದರು.

ಆಲಂಪಾಡಿ ಬದ್ರಿಯಾ ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಪಡ್ಪು, ಖಿಲ್ರಿಯಾ ಮಸೀದಿಯ ಖತೀಬರಾದ ಸಿದ್ದೀಕ್ ಹನೀಫಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ಅಬ್ದುಲ್ಲಾ ಚೆಂಡಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶಾಹುಲ್ ಹಮೀದ್ ಪರ್ಲಿಯಾ ಕುರ್ ಆನ್ ಪಠಿಸಿದರು. ಸಮಾಜ ಸೇವಾ ಘಟಕ ಜ.ಇ.ಹಿಂದ್ ಪಾಣೆಮಂಗಳೂರು ಅಧ್ಯಕ್ಷ ಮುಸ್ತಫಾ ಎಂ ಹೆಚ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ಸಲೀಮ್ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.