ಸನ್ಮಾರ್ಗ ವಾರ್ತೆ
ಪ್ರತ್ಯಕ್ಷ ವರದಿ
ಶಾಹಿದ್ ಶಾಹೀನ್
ಹದಿನೈದರ ಪ್ರಾಯದ ಬಾಲಕ ಅಲ್ಬಾಝ್ ಖಾನ್ ಹತ್ತನೇ ತರಗತಿಯಲ್ಲಿ ತೇರ್ಗಡೆಯಾದ ಸಂತೋಷದಲ್ಲಿ ಆ ಕುಟುಂಬವಿತ್ತು. ಓರ್ವ ತಮ್ಮ, ಇಬ್ಬರು ಸಹೋದರಿಯರು ಮತ್ತು ಅಮ್ಮ ಆ ಕುಟುಂಬದ ಸದಸ್ಯರು. ಎರಡು ವರ್ಷಗಳ ಹಿಂದೆ ತಂದೆ ತೀರಿಕೊಂಡ ಬಳಿಕ ಅಮ್ಮ ಮತ್ತು ಅಲ್ಬಾಝ್ ಮಾಡುತ್ತಿದ್ದ ಕೆಲಸದಿಂದ ದೊರೆಯುವ ಹಣದಿಂದ ಆ ಕುಟುಂಬ ಸಾಗುತ್ತಿತ್ತು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ ಇದ್ದುದರಲ್ಲಿ ತೃಪ್ತಿ ಪಟ್ಟುಕೊಂಡು ಆ ಕುಟುಂಬ ಬದುಕುತ್ತಿತ್ತು.
ಇಂಥ ಸಂದರ್ಭದಲ್ಲಿ ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಜನಾಂಗದ ನಡುವೆ ಸಂಘರ್ಷ ಆರಂಭಗೊಂಡಿತು. ಅದರೊಂದಿಗೆ ಎಲ್ಲವೂ ನಿಂತು ಹೋಯಿತು. ಅಲ್ಬಾಝ್ ಕಲಿಯುತ್ತಿದ್ದ ಐ.ಎನ್.ಎ. ಶಾಲೆಯು ಇನ್ನೂ ತೆರೆದಿಲ್ಲ. ಅಲ್ಲಿ ಬಿಎಸ್ಎಫ್ ಶಿಬಿರ ಹೂಡಿದೆ. ಶಾಲೆ ಬಂದ್ ಆಗಿದೆ. ಸಂಘರ್ಷದಿಂದ ತಾಯಿಯೂ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಕುಟುಂಬ ಪೋಷಿಸಲು ಅಲ್ಬಾಝ್ ಗೆ ದಿನಾಲೂ ಕೆಲಸ ಮಾಡುವುದರ ಹೊರತು ಬೇರೆ ಆಯ್ಕೆಯಿರಲಿಲ್ಲ. ಹೀಗೆ ಅವನು ಇಂಫಾಲದಲ್ಲಿ ಓರ್ವ ಪರಿಚಯಸ್ಥನ ಜೊತೆ ಪೈಂಟಿಂಗ್ ಕೆಲಸಕ್ಕೆ ಹೋಗಲಾರಂಭಿಸಿದ, ಶಾಲೆ ಯಾವಾಗ ತೆರೆದೀತೋ ಎಂಬ ನಿರೀಕ್ಷೆಯೊಂದಿಗೆ.
ಸಾಮಾನ್ಯವಾಗಿ ಮರಳುವುದಕ್ಕಿಂತ ತುಂಬಾ ತಡವಾಗಿ ಜೂನ್ 21ರಂದು ಮರಳಿದ ಸಾರಿಗೆ ಸಂಪರ್ಕ ನಿಂತು ಹೋಗಿ ಅಂದಿಗೆ ಒಂದೂವರೆ ತಿಂಗಳಾಗಿತ್ತು. ಇಂಫಾಲದಿಂದ ಬರುವ ಇನ್ನೋರ್ವನ ಜೊತೆ ಆತ ಬಂದಿದ್ದ. ಅವನು ಅಂಗಡಿಯ ಬಳಿ ಇಳಿದ. ಮನೆ ತಲುಪಬೇಕಾದರೆ ಅಲ್ಲಿಂದ ಸ್ವಲ್ಪ ದೂರ ನಡೆಯಬೇಕು. ತಾನು ದಿನಾಲೂ ನಡೆಯುವ ದಾರಿಯಲ್ಲಿ ಹಾಡನ್ನು ಗುನುಗುನಿಸುತ್ತಾ ನಡೆದ. ಸುಮಾರು ಒಂದು ಕಿಲೋ ಮೀಟರ್ ನಡೆದಾಗ ಅವನ ಹಿಂದೆ ಒಂದು ಸ್ಕಾರ್ಪಿಯೋ ಕಾರು ಬಂತು. ಅವನನ್ನು ದಾಟಿ ಸ್ವಲ್ಪ ಮುಂದೆ ಹೋಗಿ ಕಾರು ನಿಂತಿತು. ಯಾರೋ ಪರಿಚಯಸ್ಥರಾಗಿರಬಹುದು ಎಂದು ಆತ ಮೊದಲು ಭಾವಿಸಿದ. ನಂತರ ಕಾರಿನಿಂದ ಹೊಗೆ ಹೊರಗೆ ಬರುವುದು ಅವನಿಗೆ ಕಂಡಿತು. ಅಪಾಯವನ್ನು ಗ್ರಹಿಸಿಕೊಳ್ಳುವಷ್ಟರಲ್ಲೇ ಕಾರಿನಿಂದ ಹೊರಕ್ಕೆಸೆದ ಒಂದು ವಸ್ತು ಅವನ ಮುಂದೆ ಬಿತ್ತು. ಯಾರೆಂದು ಕೇಳಿಕೊಂಡು ಅಲ್ಬಾಝ್ ಕಾರಿನ ಬಳಿಗೆ ಬರುವಾಗಲೇ ಕಾರು ವೇಗವಾಗಿ ಕಣ್ಮರೆಯಾಯಿತು. ಕಾರಿನಿಂದ ಎಸೆದ ವಸ್ತುವನ್ನು ಅಲ್ಬಾಝ್ ತಿರುಗಿ ನೋಡುವುದು ಮತ್ತು ಕಿವಿಗಡಚುವ ದೊಡ್ಡ ಶಬ್ದ ಕೇಳಿದ್ದೂ ಒಟ್ಟಿಗೆ ಆಗಿತ್ತು.
ನಂತರ ಅಲ್ಬಾಝ್ ಕಣ್ಣು ತೆರೆದಾಗ ಅವನು ಇಂಫಾಲದ ರಾಜ್ ಮೆಡಿಸಿಟಿ ಆಸ್ಪತ್ರೆಯ ಐಸಿಯುನಲ್ಲಿದ್ದ. ಎಡಕಣ್ಣಿನ ದೃಷ್ಟಿ ಕಳೆದುಕೊಂಡು ಇನ್ನೂ ತೆಗೆಯಲು ಸಾಧ್ಯವಾಗದ ಬಾಂಬ್ನ ತುಂಡುಗಳನ್ನು ಶರೀರದಲ್ಲಿಟ್ಟುಕೊಂಡು ಆತ ಅಸಹಾಯಕನಾಗಿ ಮಲಗಿದ್ದ ಸಂಬಂಧಿಕರ ಮತ್ತು ಊರವರ ಸಹಾಯದಿಂದ ಅಲ್ಬಾಝ್ ನ ಇದುವರೆಗಿನ ಚಿಕಿತ್ಸೆಯೂ ನಡೆದಿದೆ. ಸುಮಾರು 10 ಲಕ್ಷ ರೂಪಾಯಿ ಚಿಕಿತ್ಸೆಗಾಗಿ ಖರ್ಚಾಗಿದೆ. ಮಣಿಪುರದ ಆಸ್ಪತ್ರೆಯಲ್ಲಿ ಉಳಿಯುವುದರಿಂದ ಹೆಚ್ಚು ಪ್ರಯೋಜನವಿಲ್ಲವೆಂದು ತಿಳಿದು ಒಂದು ತಿಂಗಳ ಬಳಿಕ ಸಂಬಂಧಿಕರ ಮನೆಗೆ ಶಿಫ್ಟ್ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮತ್ತು ದೇಹದಲ್ಲಿರುವ ಬಾಂಬ್ನ ಅವಶೇಷಗಳನ್ನು ತೆಗೆಯಲು ದೆಹಲಿಗೆ ತೆರಳಬೇಕಾಗಿದೆ. ಆದರೆ ಅದಕ್ಕೆ ಬೇಕಾದ ಹಣವನ್ನು ಹೇಗೆ ಕ್ರೋಢೀಕರಿಸುವುದೆಂಬ ಚಿಂತೆಯಲ್ಲಿ ಆ ಕುಟುಂಬವಿದೆ.
ಅಲ್ಬಾಝ್ ನ ಈ ಸ್ಥಿತಿಗೆ ಕಾರಣವಾದ ಸ್ಫೋಟದ ಕುರಿತು ಎನ್ಐಎ ಅನ್ವೇಷಣೆ ನಡೆಸುತ್ತಿದ್ದರೂ ಯಾರೆಂದು ಈ ವರೆಗೆ ತಿಳಿದು ಬಂದಿಲ್ಲ. ಹಾಗಂತ, ಅದು ಯಾರಾದರೂ ಅಲ್ಬಾಝ್ ಗೆ ಆದ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಅಲ್ಬಾಝ್ ಮತ್ತು ಅವನ ಕುಟುಂಬದ ದೈನಂದಿನ ಜೀವನವನ್ನು ಅಥವಾ ಎಂದಾದರೂ ತಮ್ಮ ಬದುಕು ಉತ್ತಮ ಸ್ಥಿತಿಗೆ ತಲುಪುತ್ತದೆಂಬ ಅವರ ನಿರೀಕ್ಷೆಯನ್ನು, ಬಾಡಿಗೆ ನೀಡದೆ ಸ್ವಂತವಾದ ಒಂದು ಮನೆಯಲ್ಲಿ ಜೀವಿಸಬೇಕೆಂಬ ಅವರ ಕನಸನ್ನು ಆ ಸ್ಫೋಟವು ನುಚ್ಚುನೂರುಗೊಳಿಸಿದೆ. ಇದು ಅಲ್ಬಾಝ್ ಮತ್ತು ಅವನ ಕುಟುಂಬದ ಮಾತ್ರ ಕಥೆಯಲ್ಲ. 90 ಶೇಕಡಾ ಮುಸ್ಲಿಮರು ವಾಸಿಸುವ ಮಣಿಪುರದ ಬಿಷುಪುರ್ ಜಿಲ್ಲೆಯ ಕ್ಯಾಕ್ತ ಪಂಚಾಯತ್ನ ಎಲ್ಲರ ಸ್ಥಿತಿಯಾಗಿದೆ.
ಪಂಗಲ್ ಮುಸ್ಲಿಮರು ಮಣಿಪುರದ ಮುಸ್ಲಿಮರನ್ನು ‘ಪಂಗಲ್’ ಎಂದು ಕರೆಯಲಾಗುತ್ತದೆ. ಬಾಂಗ್ಲಾದೇಶದಿಂದ ಬಂದ ಮುಸ್ಲಿಮರು ಮೈತೇಯಿ ಮಹಿಳೆಯರನ್ನು ವಿವಾಹವಾದ ಬಳಿಕ ಬೆಳೆದು ಬಂದ ತಲೆಮಾರು. ಆದ್ದರಿಂದ ಇವರನ್ನು ಮೈಥಿ ಪಂಗಲ್ ಎಂದೂ ಹೇಳಲಾಗುತ್ತದೆ. ಇವರು ಜನ ಸಂಖ್ಯೆಯ 8% ಇದ್ದಾರೆ. ಸುಮಾರು ಮೂರು ಲಕ್ಷ ಜನರಿದ್ದಾರೆಂಬುದು ಅನಧಿಕೃತ ಲೆಕ್ಕಾಚಾರ. 1993ರಲ್ಲಿ ನಡೆದ ಮೈಥೇಯಿ ಪಂಗಲ್ ಸಂಘರ್ಷದ ಬಳಿಕ ರಾಜ್ಯದ ಮುಸ್ಲಿಮರು ಒಟ್ಟಾಗಿ ವಾಸಿಸುತ್ತಿದ್ದಾರೆ. ಈ ರೀತಿ ಮುಸ್ಲಿಮರು ಒಂದು ಕಡೆ ವಾಸಿಸುವ ಒಂದು ಸಣ್ಣ ಪಂಚಾ ಯತ್ನ ಕ್ಯಾಕ್ತ ಎಂಬಲ್ಲಿ ಅಲ್ಬಾಝ್ ನ ಕುಟುಂಬವು ವಾಸಿಸುತ್ತಿದೆ. ಕ್ಯಾಕ್ತದಲ್ಲಿರುವ ಒಟ್ಟು 9 ವಾರ್ಡ್ ಗಳಲ್ಲಿ 8 ಮುಸ್ಲಿಮ್ ವಾರ್ಡ್ ಗಳಾಗಿವೆ. ಮೈಥೇಯಿ ಬಹುಸಂಖ್ಯೆಯಲ್ಲಿರುವ ಜಿಲ್ಲೆಯಾದ ಬಿಷುಪುರದ ಇನ್ನೊಂದು ಭಾಗದಲ್ಲಿರುವ ಮತ್ತು ಕುಕಿ ಬಹುಸಂಖ್ಯಾತ ಜಿಲ್ಲೆಯಾದ ಚುರಾಚಂದ್ನೊಂದಿಗೆ ಕ್ಯಾಕ್ತವು ಗಡಿಯನ್ನು ಹಂಚಿಕೊಂಡಿದೆ. ಕುಕಿ ಮತ್ತು ಮೈಥೇಯಿ ನಡುವೆ ಸಂಘರ್ಷ ಆರಂಭಗೊಂಡು ಬಾಂಬೆಸೆತ, ಗುಂಡು ಹಾರಿಸುವುದು ಆರಂಭವಾದಾಗ ಈ ಮುಸ್ಲಿಮರು ಮಧ್ಯದಲ್ಲಿ ಇಕ್ಕಟ್ಟಿಗೆ ಸಿಲುಕುತ್ತಾರೆ. ಅವರ ಶಾಲೆಗಳು, ಮನೆಗಳು ಹೆಚ್ಚೇಕೆ ಮಸೀದಿಗಳನ್ನು ಕೂಡಾ ಬಂಕರ್ಗಳನ್ನಾಗಿ ಮಾಡಿ ಮೈತೇಯಿಗಳು ಕುಕಿಗಳ ಮೇಲೆ ಆಕ್ರಮಣ ನಡೆಸಿದರು. ಕುಕಿಗಳ ಪ್ರತಿದಾಳಿಯಲ್ಲಿ ಮುಸ್ಲಿಮರಿಗೆ ನಾಶ- ನಷ್ಟಗಳುಂಟಾದವು.
ಘರ್ಷಣೆ ಆರಂಭವಾದಂದಿನಿಂದ ಪಂಗಲ್ ಮುಸ್ಲಿಮರು ಯಾವುದೇ ಪೂರ್ವಾಗ್ರಹ, ಲಾಭದ ಉದ್ದೇಶವಿಲ್ಲದೆ ಎರಡು ವಿಭಾಗಗಳಿಗೆ ಸಮಾನವಾಗಿ ಸಹಾಯ ಮಾಡಿದ್ದಾರೆ. ಇಫಾಲದಿಂದ ಚುರಾಚಂದ್ಪುರಿಗೆ ಹೋಗುವ ಏಕೈಕ ದಾರಿ ಕ್ಯಾಕ್ತದ ದಾರಿಯಾಗಿದೆ. ಚುರಾಚಂದ್ ಬೆಟ್ಟದಿಂದ ಇಳಿದು ಬಂದ ಮೈತೇಯಿಗಳಿಗಾಗಿ ಪಂಗಲ್ ಮುಸ್ಲಿಮರು ಪರಿಹಾರ ಶಿಬಿರವನ್ನು ಸ್ಥಾಪಿಸಿದರು. ಅವರಿಗೆ ಊಟ, ಬಟ್ಟೆ ನೀಡಿ ಸಾಂತ್ವನಿಸಿದರು. ಚುರಾಚಂದ್ ಪುರದಲ್ಲಿ ಹೋಟೆಲ್ ನಡೆಸುತ್ತಿದ್ದ ಪಂಗಲ್ರೊಬ್ಬರು ತನ್ನ ಸ್ವಂತ ಕಾರಿನಲ್ಲಿ ಅಸಂಖ್ಯಾತ ಕುಕಿಗಳನ್ನು ಚುರಾಚಂದ್ಗೆ ತಲುಪಿಸಿದ್ದಾರೆ. ಸಂಘರ್ಷದಿಂದ ಹೋಟೆಲ್ ಮುಚ್ಚಬೇಕಾಗಿ ಬಂದರೂ ಅಲ್ತಾಫ್ ಎಂಬ ಪಂಗಲ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಸರಕಾರ ಮತ್ತು ಪೊಲೀಸರು ಗಲಭೆಗಳಿಗೆ ಬೆಂಬಲ ನೀಡಿದಾಗ ಜನರನ್ನು ಅಪಾಯದಿಂದ ಪಾರುಗೊಳಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಪ್ರಯತ್ನಿಸಿದರು.
ಈ ರೀತಿ ರಿಲೀಫ್ ಕ್ಯಾಂಪ್ಗಳನ್ನು ಸಿದ್ಧಪಡಿಸಿದ, ಸಾವಿರಾರು ಜನರ ಪ್ರಾಣ ರಕ್ಷಿಸಿದ, ತಮ್ಮ ಮನೆಗಳನ್ನೂ ಇತರರಿಗೆ ನೀಡಿದ ಕ್ಯಾಕ್ತದ ಮುಸ್ಲಿಮರ ಕುರಿತು ಎರಡು ವಿಭಾಗಗಳೂ ಯೋಚಿಸಲಿಲ್ಲ. ಒಂದೋ ಎರಡೋ ಆನ್ಲೈನ್ ಮಾಧ್ಯಮಗಳಲ್ಲಿ ಬಂದ ವಾರ್ತೆ ಹೊರತು ಅವರು ಎಲ್ಲಿಯೂ ಕಾಣಲಿಲ್ಲ. ಮಣಿಪುರದಲ್ಲಿ ಕೇವಲ ಕುಕಿಗಳು ಮತ್ತು ಮೈತೇಯಿಗಳು ಮಾತ್ರ ಇದ್ದಾರೆ ಎಂಬ ರೀತಿಯಲ್ಲಿ ವಾರ್ತೆ ಪ್ರಚಾರಗೊಂಡಿತು. ಆಗಲೇ ಕ್ಯಾಕ್ತದಲ್ಲಿ ಮಾತ್ರ ಹನ್ನೊಂದು ಮಂದಿಗೆ ಗುಂಡೇಟು ಮತ್ತು ಇಬ್ಬರಿಗೆ ಬಾಂಬ್ ಆಕ್ರಮಣವೂ ನಡೆದಿದೆ. ಕುಕಿ ಗಡಿಯೊಂದಿಗೆ ಹಂಚಿಕೊಂಡಿದ್ದ ಎಂಟನೇ ವಾರ್ಡ್ ನ 50 ಕ್ಕಿಂತಲೂ ಹೆಚ್ಚು ಮನೆಯವರು ಮನೆಬಿಟ್ಟು ಪಲಾಯನ ಮಾಡಿದ್ದಾರೆ.
ನಿಜವಾಗಿ ಇಂದು ಮಣಿಪುರದಲ್ಲಿ ಬದುಕಲು ಬಹಳ ತೊಂದರೆ ಅನುಭವಿಸುತ್ತಿರುವವರೆಂದರೆ ಕ್ಯಾಕ್ತದ ಪಂಗಲ್ ಮುಸ್ಲಿಮರಾಗಿದ್ದಾರೆ. ಕಾರಣವೇನೆಂದರೆ, ಅಲ್ಲಿ ಮಾತ್ರ ಈಗ ಸಂಘರ್ಷ ನಡೆಯುತ್ತಿದೆ. ಕಟ್ಟಡಗಳು ಕೆಡವಲ್ಪಡುತ್ತಿದ್ದರೂ, ಕಣಿವೆಗಳಲ್ಲಿ ಇದ್ದ ಕುಕಿಗಳು ಬೆಟ್ಟಗಳಿಗೂ, ಬೆಟ್ಟಗಳಲ್ಲಿದ್ದ ಮೈತೇಯಿಗಳು ಕಣಿವೆಗೂ ಬಂದುದರಿಂದ ಅಲ್ಲಿ ಪ್ರಾಣಹಾನಿ ಮತ್ತು ದಾಳಿಗಳು ಇಲ್ಲವಾಗಿದೆ. ಮೂರು ಮೇಥಿಗಳು ಮತ್ತು 2 ಕುಕಿಗಳ ಹತ್ಯೆಯು ಆಗಸ್ಟ್ 5 ರಂದು ಕ್ಯಾಕ್ತದಲ್ಲಿಯೇ ನಡೆದಿತ್ತು. ಇದರಿಂದ ಪಂಗಲ್ ಮುಸ್ಲಿಮರ ಜೀವನ ದುಸ್ತರವಾಯಿತು. ಮುಸ್ಲಿಮರು ಅದುವರೆಗೆ ಮಾಡಿದ ಸಹಾಯವನ್ನೆಲ್ಲಾ ಮರೆತು ಮುಸ್ಲಿಮರು ಒತ್ತಾಸೆಯಿಂದಲೇ ಕೊಲೆಗಳು ನಡೆದಿದೆಯೆಂದು ಹಲವರು ಆರೋಪಿಸಿದರು. ಮೈತೇಯಿಗಳಿಗೆ ಬಹಿರಂಗವಾಗಿ ಬೆಂಬಲ ನೀಡುವಂತೆ ಮುಸ್ಲಿಮರ ಮೇಲೆ ಒತ್ತಡವುಂಟಾಯಿತು. ನಾವು ಮುಸ್ಲಿಮರು ಕಣಿವೆಯಲ್ಲಿ ವಾಸಿಸುವವರು. ನಮಗೆ ಕುಕಿಗಳೊಂದಿಗೂ ಮತ್ತು ಮೈತಿಗಳೊಂದಿಗೂ ಒಳ್ಳೆಯ ಸಂಬಂಧವಿದೆ, ಆದರೆ ಸಂಘರ್ಷ ಆರಂಭಗೊಂಡಂದಿನಿಂದ ತಮ್ಮನ್ನು ಬೆಂಬಲಿಸ ಬೇಕೆಂದು ಈರ್ವರೂ ಒತ್ತಡ ಹೇರುತ್ತಿದ್ದಾರೆ, ನಾವೇಕೆ ಬೆಂಬಲ ವ್ಯಕ್ತಪಡಿಸಬೇಕು? ಇದು ನಮ್ಮ ಯುದ್ಧವಲ್ಲ, ಇದರಲ್ಲಿ ನಮಗೆ ಯಾವುದೇ ಪಾಲಿಲ್ಲ, ಈರ್ವರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡುತ್ತಿದ್ದೇವೆ ಎಂದು ಮೈತೇಯಿ ಪಂಗಲ್ ಇಂಟಲೆಕ್ಚುವಲ್ ಫಾರಮ್ನ ಅಧ್ಯಕ್ಷ ಜಿಯ ಹೇಳುತ್ತಾರೆ. ಕ್ಯಾಕ್ತದ ಜನರು ರಾತ್ರಿ ವೇಳೆ ಮಲಗುವುದಿಲ್ಲ. ಅವರು ನಾಲ್ಕು ಭಾಗವೂ ಗೋಡೆಗಳಿಂದ ಆವೃತವಾದ ಸ್ಥಳದಲ್ಲಿ ಬಂದು ಕುಳಿತುಕೊಳ್ಳುತ್ತಾರೆ.
ಕ್ಯಾಕ್ತ ಬಝಾರ್ನಲ್ಲಿ ಕುಳಿತರೆ ತಡರಾತ್ರಿಯಲ್ಲಿ ಗುಂಡಿನ ಶಬ್ದಗಳು ಮತ್ತು ಬಾಂಬ್ ಆಕ್ರಮಣಗಳ ಶಬ್ದವೂ ಕೇಳಿಸುತ್ತಿತ್ತು. ಇತರ ವಿಭಾಗಗಳಂತೆ ಇವರ ಕೈಯಲ್ಲಿ ಆಯುಧವಿಲ್ಲ. ಹೀಗೆ ಮನೆ ಬಿಟ್ಟು ಹೊರಟು ಹೋದ 8ನೇ ವಾರ್ಡನ್ನು ನೋಡಲು ಸಾಧ್ಯವಾಯಿತು. ಅವರಿಗೆ ಅವರ ಮನೆಯಲ್ಲಿ ವಾಸಿಸಲು ಸಾಧ್ಯವಾಗುವುದಿಲ್ಲ. ಹಲವರು ಮನೆ ಕಳಕೊಂಡಿದ್ದಾರೆ. ಭೀತಿಯಿಂದ ಈಗಲೂ 8ನೇ ವಾರ್ಡ್ ನಲ್ಲಿ ಯಾರೂ ವಾಸಿಸುತ್ತಿಲ್ಲ.
65ರ ಪ್ರಾಯದ ರಹೀಮ್ ಮತ್ತು ಅವರ ಮೂರು ಮಕ್ಕಳ ಕುಟುಂಬವು ಪಕ್ಕ ಪಕ್ಕದ ಮನೆಗಳಲ್ಲಿ ವಾಸವಾಗಿತ್ತು. ಅವರ ನಡುವೆ ಹೇಳಿಕೊಳ್ಳುವಂತಹ ಕುಟುಂಬ ಸಂಬಂಧವಿರಲಿಲ್ಲ. ತೀವ್ರ ಆಕ್ರಮಣಗಳು ನಡೆದ ಆಗಸ್ಟ್ 4 ರಂದು ಕ್ಯಾಕ್ತದಲ್ಲೇ ಇದ್ದ ಓರ್ವ ಗೆಳೆಯನ ಮನೆಯಲ್ಲಿ ತಾತ್ಕಾಲಿಕವಾಗಿ ಉಳಕೊಂಡರು. ಗಲಭೆ ಸ್ವಲ್ಪ ತಣ್ಣಗಾದ ನಂತರ ಹೋಗೋಣವೆಂದು ಭಾವಿಸಿದ್ದರು. ಆದರೆ ಅವರ ಮನೆಗಳೆಲ್ಲವೂ ಬೆಂಕಿಗಾಹುತಿಯಾಗಿದೆ ಎಂಬ ವಾರ್ತೆಯೊಂದಿಗೆ ಅವರು ನಿದ್ದೆಯಿಂದ ಎದ್ದರು. ಆಟೋ ಮತ್ತು ಟ್ಯಾಕ್ಸಿಯನ್ನು ಓಡಿಸಿ ಬದುಕು ಸಾಗಿಸುತ್ತಿದ್ದ ಅವರ ವಾಹನಗಳು, ನಾಲ್ಕು ಮನೆ, ಅದರಲ್ಲಿರುವ ಸಾಮಗ್ರಿಗಳು ಎಲ್ಲವೂ ಸೇರಿ ನಾಲ್ಕೂವರೆ ಕೋಟಿ ನಷ್ಟ ಸಂಭವಿಸಿದೆಯೆಂದು ಅಂದಾಜಿಸಲಾಗಿದೆ. ಇನ್ನು ಎಲ್ಲಿಗೆ ಹೋಗಬೇಕೆಂದು ತಿಳಿಯದೆ, ತಾವೇ ನಿರ್ಮಿಸಿರುವ ನಿರಾಶ್ರಿತ ಶಿಬಿರದಲ್ಲಿ ಅವರು ರಕ್ಷಣೆ ಪಡೆದಿದ್ದಾರೆ.
ಇದರೊಂದಿಗೆ ವಾರ್ಡ್ 8ರ ಮುಸ್ಲಿಮರು ಸಂಪೂರ್ಣವಾಗಿ ಮನೆ ಬಿಟ್ಟರು. ಅಲ್ಲಿ ಪತ್ರಕರ್ತರು ಯಾರೂ ಇರಲಿಲ್ಲ. ಎಲ್ಲರೂ ತಮ್ಮ ಸಂಕಷ್ಟ ಹೇಳಿಕೊಳ್ಳಲು ನಮ್ಮ ಸುತ್ತಲೂ ಸೇರಿಕೊಂಡರು. ತಮಗೆ ಸಾಮಾನ್ಯ ಜೀವನ ಮರಳಿ ದೊರೆಯುವಂತೆ ಮಾಡಬೇಕೆಂದು ನಮ್ಮೊಡನೆ ವಿನಂತಿಸಿದರು. ಅಸಹಾಯಕರಾಗಿ ಅವರ ಸಂಕಷ್ಟವನ್ನು ಆಲಿಸುವುದಲ್ಲದೆ ಬೇರೇನೂ ಮಾಡಲು ನಮಗೆ ಸಾಧ್ಯವಿರಲಿಲ್ಲ. ಅವರಲ್ಲಿ ಪ್ರತಿಯೊಬ್ಬರ
ಅಗತ್ಯಗಳನ್ನು ಕೇಳಿ ಅವುಗಳನ್ನು ವೀಡಿಯೋ ಚಿತ್ರೀಕರಣ ಮಾಡಿದೆವು. ಸಹಾಯ ತಲುಪಿಸಲು ನಮ್ಮಿಂದಾಗುವುದೆಲ್ಲಾ ಮಾಡುವುದೆಂದು ಸಾಂತ್ವನ ಪಡಿಸಿದೆವು. ಅಲ್ಲಿ ನಮಗೆ ನಾವು 2 ದಿನದ ಹಿಂದೆ ಸಂದರ್ಶಿಸಿದ ಇಸ್ಲಾಮಾಬಾದಿನ ಮಸೀದಿಯನ್ನು ಮೈತೇಯಿ ಶಸ್ತ್ರಾಸ್ತ್ರ ವಿಭಾಗವು ವಶಪಡಿಸಿ ಬಂಕರ್ ಆಗಿ ಪರಿವರ್ತಿಸಿದ ವಿವರ ತಿಳಿಯಿತು. ಮಣಿಪುರದ ಸಮಸ್ಯೆಗಳಲ್ಲಿ ಯಾವುದೇ ಪಾತ್ರವಿಲ್ಲದ ಮುಸ್ಲಿಮರನ್ನು ಸಂಘರ್ಷದೆಡೆಗೆ ಎಳೆದುಕೊಳ್ಳಲು ಮತ್ತು ಅದರಿಂದ ಲಾಭ ಪಡೆಯಲು ಮಾಡಿದ ಯತ್ನವಿದು. “ಅವರು ಏಕೆ ಮಸೀದಿಯನ್ನು ಬಂಕರ್ ಮಾಡಬೇಕು? ಅದರಿಂದ ಕುಕಿಗಳು ಈ ಭಾಗಕ್ಕೂ ಪ್ರತಿದಾಳಿ ನಡೆಸುತ್ತಾರೆ. ಇದು ಮುಸ್ಲಿಮರನ್ನೂ ಸಂಘರ್ಷದ ಕಡೆಗೆ ಕರೆತರುವ ಮನಪೂರ್ವಕ ಪ್ರಯತ್ನದ ಭಾಗವಾಗಿದೆ- ಇಸ್ಲಾಮಾಬಾದಿನವನಾದ ವಹೀದರ್ರಹ್ಮಾನ್ ಹೇಳಿದರು.
ಮಸೀದಿ ಮತ್ತು ಅದಕ್ಕೆ ತಾಗಿಕೊಂಡಿರುವ ಮನೆಗಳನ್ನೂ ನಾವು ಸಂದರ್ಶಿಸಿದೆವು. ನಾವು ಮಸೀದಿಗೆ ತಲುಪಿದ ಸಮಯದಲ್ಲಿ ಗುಂಡಿನ ಧಾಳಿ ನಡೆಯುತ್ತಿತ್ತು. ಮಸೀದಿ ಒಳಗಿನಿಂದ ಸಶಸ್ತ್ರ ತಂಡ ಮತ್ತು ಪೊಲೀಸರು ಸೇರಿ ಕುಕಿಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರು. ಮಸೀದಿಯ ಒಂದು ಭಾಗದಲ್ಲಿ ಮದ್ದುಗುಂಡು ತಾಗಿದ ಗುರುತುಗಳಿದ್ದವು. ಅಲ್ಲಿರುವ ದೃಶ್ಯಗಳನ್ನೆಲ್ಲಾ ಸಾಧ್ಯವಾದಷ್ಟು ಚಿತ್ರೀಕರಿಸಿದೆವು. ಮಸೀದಿಯಿಂದ ಹೊರಬರುವಾಗ ಓರ್ವ ವ್ಯಕ್ತಿ ನಮ್ಮ ಬಳಿಗೆ ಓಡಿ ಬಂದ. ಮಸೀದಿಯ ಪಕ್ಕವೇ ಇರುವ ಒಂದು ಮನೆಯಲ್ಲಿ ನನ್ನ ಕುಟುಂಬ ಸಿಲುಕಿಕೊಂಡಿದೆ. ಅವರಿಗೆ ಹೊರಬರಲು ಸಾಧ್ಯ ವಾಗುತ್ತಿಲ್ಲವೆಂದು ಆತ ಹೇಳಿದ. ಗುಂಡಿನ ದಾಳಿ ನಡೆಯುತ್ತಿದ್ದರಿಂದ ನಮಗೆ ಅಲ್ಲಿಗೆ ಹೋಗಲಾಗಲಿಲ್ಲ. ಆದರೆ ಅಂದು ಸಂಜೆಯೇ ಕ್ಯಾಕ್ತದ ಮುಸ್ಲಿಮರ ಪರಿಸ್ಥಿತಿ, ಮಸೀದಿಯನ್ನು ಬಂಕರ್ ಮಾಡಿದ್ದು, ಜನರು ಮನೆಯಲ್ಲಿ ಸಿಲುಕಿಕೊಂಡಿರುವುದು… ಹೀಗೆ ಎಲ್ಲವನ್ನೂ ಸೇರಿಸಿ ಒಂದು ವೀಡಿಯೋ ಮಾಡಿದೆವು. ಆ ವೀಡಿಯೋ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೊರೆಯಿತು. ಅವರು ನಮ್ಮನ್ನು ಸಂಪರ್ಕಿಸಿದರು. ಅವರು ಅದನ್ನು ಕೂಡಲೇ ಮುಖ್ಯ ಮಂತ್ರಿಗೆ ತಲುಪಿಸಿ, ಮುಖ್ಯಮಂತ್ರಿಗಳು ಕೂಡಲೇ ಸಶಸ್ತ್ರ ತಂಡವನ್ನು ಮಸೀದಿಯಿಂದ ತೆರವುಗೊಳಿಸುವಂತೆ ಆದೇಶಿಸಿದರು. ಮರುದಿನವೇ ಅಸ್ಸಾಂ ರೈಫಲ್ಸ್ ಬಂದು ಮಸೀದಿ ಮತ್ತು ಪರಿಸರದ ಪ್ರದೇಶಗಳಿಂದ ಮೈತೀ ಸೈನ್ಯವನ್ನು ತೆರವುಗೊಳಿಸಿತು. ಮನೆಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲಾಯಿತು. ನಮ್ಮ ವೀಡಿಯೋದಲ್ಲಿ ಮಾತನಾಡಿದವರಿಗೆ ಕೊಲೆ ಬೆದರಿಕೆಗಳು ಬಂದವು. ಹಲವರು ತಲೆಮರೆಸಿಕೊಳ್ಳಬೇಕಾಯಿತು.
ಇವೆಲ್ಲವೂ ಮುಸ್ಲಿಮರನ್ನೂ ಈ ಸಂಘರ್ಷಕ್ಕೆ ಎಳೆದುಕೊಳ್ಳುವ ಪ್ರಜ್ಞಾಪೂರ್ವಕ ನಡೆಯಾಗಿತ್ತು. ಈ ಸಂದರ್ಭದಲ್ಲಿ ಪಂಗಲ್ ಮುಸ್ಲಿಮರು ಸಂಯಮವನ್ನು ಪ್ರದರ್ಶಿಸಿದರು. ಅವರು ಸಮಾಲೋಚನೆ ನಡೆಸಿ ಪರಿಸ್ಥಿತಿಯ ಕುರಿತು ಸಂಯಮದಿಂದ ಅವಲೋಕನ ನಡೆಸಿದರು. ಕಷ್ಟಗಳನ್ನು ಸಹಿಸಿ ಕೋಪಗೊಂಡವರನ್ನು ಸಾಂತ್ವನ ಪಡಿಸಿದರು. ಇದರಿಂದ ಅವರು ಉನ್ನತ ಅಧಿಕಾರಿಗಳಿಗೆ ದೂರು ನೀಡಿದರು ಮತ್ತು ಅಲ್ಲಿಗೆ ಬಂದ ಪತ್ರಕರ್ತರಿಗೆ ವಾಸ್ತವಿಕತೆಯನ್ನು ಸ್ಪಷ್ಟವಾಗಿ ವಿವರಿಸಿದರು. ಆದರೂ ಅವರಿಗೆ ನಷ್ಟವಾದದ್ದು ಮರಳಿ ದೊರೆಯುವುದಿಲ್ಲ. ಕ್ಯಾಕ್ತದ ಶಾಂತಿ ನೆಮ್ಮದಿಯ ಜೀವನ ಯಾವಾಗ ಮರಳಿ ದೊರೆಯಬಹುದೆಂದು ಅವರಿಗಾರಿಗೂ ತಿಳಿದಿಲ್ಲ. ಯಾವಾಗಲಾದರೂ ಅದು ಸಾಧ್ಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಹೆಚ್ಚಿನ ಜನರಿದ್ದಾರೆ.
ಆದರೆ ಅವರ ಆವಶ್ಯಕತೆ ಅದಲ್ಲ. ಕುಕಿ-ಮೇಥಿ ನಡುವೆ ಶಾಂತಿಯ ಚರ್ಚೆಗಳು ಮಣಿಪುರದಲ್ಲಿ ನಡೆಯಲಿದೆ. ಆ ಚರ್ಚೆಗಳಲ್ಲಿ ಪಂಗಲ್ಗಳಿಗೂ ಪ್ರಾತಿನಿಧ್ಯ ಬೇಕು. ಕುಕಿ ಮತ್ತು ಮೇಥಿಗಳಂತೆ ಪಂಗಲ್ ಮುಸಲ್ಮಾನರೂ ದುರಂತವನ್ನು ಅನುಭವಿಸಿದ್ದಾರೆ ಎಂದು ಜಿಯಾ ಹೇಳುತ್ತಾರೆ.












