ನೇಜಾರು ಪ್ರಕರಣ; ಮುಖ್ಯಮಂತ್ರಿ ಸಹಿತ ವಿವಿಧ ಗಣ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಮುಸ್ಲಿಮ್ ಜಸ್ಟೀಸ್ ಫೋರಂ ಕರ್ನಾಟಕ

0
437

ಸನ್ಮಾರ್ಗ ವಾರ್ತೆ

ನವೆಂಬರ್ 12 2023 ರವಿವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ನೇಜಾರಿನಲ್ಲಿ ನಡೆದ ಅಮಾಯಕ ತಾಯಿ ಮತ್ತು ಮೂರು ಮಕ್ಕಳ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಸ್ಥಳಕ್ಕೆ ಮುಸ್ಲಿಂ ಜಸ್ಟೀಸ್ ಫೋರಂ ತಂಡ ಭೇಟಿ ನೀಡಿ ಅನ್ಯಾಯಕ್ಕೊಳಗಾದ ಕುಟುಂಬದ ನೋವಿನಲ್ಲಿ ನಾವೆಲ್ಲರೂ ಪಾಲುದಾರರು ಎಂದು ಅಭಯವನ್ನು ನೀಡಿತು.

ತದನಂತರ ಪ್ರಕರಣದ ಗಂಭೀರತೆಯನ್ನು ಅರಿತು ನೊಂದವರ ಅಭಿಪ್ರಾಯವನ್ನು ಸಂಗ್ರಹಿಸಿ ಈ ಪ್ರಕರಣವನ್ನು ಯಾವ ರೀತಿ ಮುಂದುವರಿಸಬಹುದು ಮತ್ತು ಹೇಗೆ ಮುಂದುವರಿಸಿದರೆ ಇದಕ್ಕೆ ಸೂಕ್ತ ಪರಿಹಾರವನ್ನು ದೊರಕಿಸಬಹುದು ಎಂಬ ನಿಟ್ಟಿನಲ್ಲಿ ಮುಸ್ಲಿಂ ಜಸ್ಟೀಸ್ ಫೋರಂ ಇದರ ಕಾನೂನು ಸಲಹೆಗಾರ, ಹೈಕೋರ್ಟ್ ನ್ಯಾಯವಾದಿ ಜನಾಬ್ ಮುಜಾಫರ್ ಅಹಮದ್ ರವರನ್ನು ಹಾಗೂ ಕರ್ನಾಟಕ ಲೋಕಾಯುಕ್ತದ ವಿಶೇಷ ಸರಕಾರಿ ಅಭಿಯೋಜಕರಾದ ಲತೀಫ್ ಬಡಗನ್ನೂರುರವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚೆ ನಡೆಸಿತು.

ತದನಂತರ ನ್ಯಾಯವಾದಿ ಜನಾಬ್ ಮುಜಾಫರ್ ಅಹಮದ್ ರವರ ನಿರ್ದೇಶನದ ಪ್ರಕಾರ ಬೆಂಗಳೂರಿನಲ್ಲಿ ಕರ್ನಾಟಕದ ಅಮೀರೇ ಶರಿಯತ್ ಹಝ್ರತ್ ಮೌಲಾನ ಸಗೀರ್ ಅಹ್ಮದ್ ಖಾನ್ ಸಾಹೇಬ್ ಮತ್ತು ಮೌಲಾನ ಮಕ್ಸೂದ್ ಇಮ್ರಾನ್ ರಶಾದೀ, ಇಮಾಂ ಜಾಮಾ ಮಸೀದಿ, ಸಿಟಿ ಮಾರ್ಕೆಟ್, ಬೆಂಗಳೂರು ರವರನ್ನು ಭೇಟಿಯಾಗಿ ಪ್ರಕರಣದ ಸಂಪೂರ್ಣ ಚಿತ್ರಣ ಮತ್ತು ಗಂಭೀರತೆಯನ್ನು ತಿಳಿಸಿ ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯ ನ್ಯಾಯಾಲಯದ ಹಾಗೂ ವಿಶೇಷ ಸರಕಾರಿ ಅಭಿಯೋಜಕರ ಮೂಲಕ ನಡೆಸುವಂತೆ ಮತ್ತು ಆರೋಪಿಗೆ ಮರಣದಂಡನೆ ಶಿಕ್ಷೆಯನ್ನು ನೀಡಲು ಸರಕಾರವನ್ನು ಒತ್ತಾಯಿಸಲು ಕೇಳಿಕೊಳ್ಳಲಾಯಿತು.

ಈ ಮೇಲಿನ ಬೇಡಿಕೆಯನ್ನು ಕಾರ್ಯರೂಪಕ್ಕೆ ತರಲು ಕರ್ನಾಟಕ ಸರ್ಕಾರದ ಗೌರವಾನ್ವಿತ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗನ್ನು ಬೆಂಗಳೂರಿನ ವಿಧಾನ ಸೌಧದಲ್ಲಿ ಭೇಟಿಯಾಗಿ ಪ್ರಕರಣದ ಸಮಗ್ರ ವಿವರಣೆಯನ್ನು ತಿಳಿಸಿ, ಮನವಿಯನ್ನು ಸಲ್ಲಿಸಲಾಯಿತು.

ನಂತರದ ಬೆಳವಣಿಗೆಯಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಜನಾಬ್ ನಸೀರ್ ಅಹಮದ್ ರವರನ್ನು ನೇಜಾರಿನ ಸಂತ್ರಸ್ತ ಕುಟುಂಬದವರೊಂದಿಗೆ ಭೇಟಿಯಾಗಿ ಘಟನೆಯ ಸಂಪೂರ್ಣ ಮಾಹಿತಿ ಒದಗಿಸಿ ನಮ್ಮ ಬೇಡಿಕೆಯನ್ನು ಈಡೇರಿಸಲು ಅವರ ಸಹಾಯವನ್ನು ಕೋರಲಾಯಿತು. ನಮ್ಮ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಅವರು ಮುಖ್ಯಮಂತ್ರಿಗಳ ಕಾನೂನು ಕಾರ್ಯದರ್ಶಿಗಳನ್ನು ನಮ್ಮ ತಂಡಕ್ಕೆ ಭೇಟಿ ಮಾಡಿಸಿ, ಅದೇ ದಿನ ಗೌರವಾನ್ವಿತ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿದರು.

ಸಂತ್ರಸ್ತ ಕುಟುಂಬ ಮತ್ತು ಎಂಜೆಎಫ್ ತಂಡವನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಯನ್ನು ಪರಿಗಣಿಸಿ ಆದಷ್ಟು ಬೇಗ ಇದನ್ನು ಅನುಷ್ಠಾನ ಮಾಡುತ್ತೇನೆಂದು ಭರವಸೆಯನ್ನು ನೀಡಿದ್ದಾರೆ ಎಂದು ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ ಇದರ ಅಧ್ಯಕ್ಷರಾದ ಇರ್ಷಾದ್ ಯು ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.