ಮಾನವನ ಘನತೆ, ಗೌರವ ಕಾಪಾಡಿ; ಮಾನವ ಹಕ್ಕುಗಳು ವಿಚಾರ ಗೋಷ್ಠಿಯಲ್ಲಿ ಮೌಲಾನಾ ಹಾಮಿದ್ ಮುಹಮ್ಮದ್ ಖಾನ್

0
377

ಸನ್ಮಾರ್ಗ ವಾರ್ತೆ

ಬೀದರ್: ಮನುಕುಲ ಸಕಲ ಜೀವರಾಶಿಗಳಲ್ಲೇ ಶ್ರೇಷ್ಠವಾಗಿದ್ದು, ಮಾನವ ಘನತೆ, ಗೌರವಗಳನ್ನು ಕಾಪಾಡಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್‍ ತೆಲಂಗಾಣ ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ಮೌಲಾನಾ ಹಾಮೆದ್ ಮೊಹಮ್ಮದ್ ಖಾನ್ ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ಬೀದರ್ ಘಟಕದ ವತಿಯಿಂದ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳು ಕುರಿತು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭೂಮಿಯ ಮೇಲೆ ಬದುಕುವ ಹಕ್ಕು ಪ್ರತಿ ಮಾನವನಿಗೂ ಇದೆ. ಹೀಗಾಗಿ, ಒಬ್ಬ ವ್ಯಕ್ತಿಯನ್ನು ಕೊಲೆಗೈದರೆ ಇಡೀ ಮನುಕುಲವನ್ನೇ ವಧಿಸಿದಂತೆ. ಒಬ್ಬರಿಗೆ ಜೀವದಾನ ಮಾಡಿದರೆ ಇಡೀ ಮಾನವ ಕುಲಕೋಟಿಗೆ ಜೀವದಾನ ಮಾಡಿದಂತೆ ಎಂದವರು ಹೇಳಿದರು.

ತಾಯಿಯ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಜೀವನಕ್ಕೂ ಮನುಷ್ಯ ಜೀವನದಷ್ಟೇ ಮಹತ್ವ ಇದೆ. ಭ್ರೂಣ ಹತ್ಯೆ ಘೋರ ಅಪರಾಧವಾಗಿದೆ. ಮನುಷ್ಯನಿಗೆ ತನ್ನ ಜೀವ ತಾನು ತೆಗೆದುಕೊಳ್ಳುವುದಕ್ಕೂ ಅವಕಾಶ ಇಲ್ಲ ಎಂದು ತಿಳಿಸಿದರು.

ಯಾವುದೇ ಧರ್ಮದಲ್ಲಿ ಒತ್ತಾಯ, ಬಲಾತ್ಕಾರವಿಲ್ಲ. ಪ್ರವಾದಿಗಳು ಕೇವಲ ದೇವ ಸಂದೇಶ ಜನರಿಗೆ ತಲುಪಿಸುವ ಹೊಣೆ ಹೊತ್ತಿದ್ದರು. ದೇವ ಸಂದೇಶ ಒಪ್ಪಿಕೊಳ್ಳುವಂತೆ ಯಾರ ಮೇಲೂ ಒತ್ತಡ ಹಾಕಿರಲಿಲ್ಲ. ಮಾನವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧರ್ಮವೂ ಪ್ರಾಮುಖ್ಯ ನೀಡಿದೆ ಎಂದು ಹೇಳಿದರು.

ಮಾನವರೆಲ್ಲರೂ ಸರಿ ಸಮಾನರು. ಧರ್ಮ, ಜಾತಿ, ಜನಾಂಗ, ಬಣ್ಣದ ಆಧಾರದ ಮೇಲೆ ಭೇದ ಭಾವ ಸಲ್ಲದು. ಅದಾಗಿಯೂ ಮುಸ್ಲಿಮರನ್ನು ಅಸ್ಪೃಶ್ಯರಂತೆ ಕಾಣುತ್ತಿರುವುದು ಕಳವಳದ ಸಂಗತಿ ಎಂದರು.

ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ. ಕೃಷ್ಣಪ್ಪ ಮಾತನಾಡಿ, ಮಾನವ ಹಕ್ಕುಗಳನ್ನು ಎಲ್ಲರೂ ಅರಿಯಬೇಕು. ಅವುಗಳ ರಕ್ಷಣೆ ಮಾಡಬೇಕು ಎಂದು ಹೇಳಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ಎಲ್ಲ ಧರ್ಮಗಳ ಮಹಾ ಪುರುಷರು ಹಾಗೂ ಪ್ರವಾದಿಗಳು ಮಾನವ ಏಕತೆಗೆ ಆದ್ಯತೆ ಕೊಟ್ಟಿದ್ದರು. ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದು ಹೇಳಿದರು.

ವಕೀಲ ಬಾಬುರಾವ್ ಹೊನ್ನಾ ಮಾತನಾಡಿ, ಕೋಮುವಾದ, ಕಾರ್ಪೋರೇಟ್ ಹಿತಾಸಕ್ತಿ ಆಡಳಿತ ಹಾಗೂ ಜನವಿರೋಧಿ ಕಾನೂನುಗಳಿಂದ ಸರ್ಕಾರಿ ಮಟ್ಟದಲ್ಲೇ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೀರಭದ್ರಪ್ಪ ಉಪ್ಪಿನ್ ಅವರನ್ನು ಸನ್ಮಾನಿಸಲಾಯಿತು. ರಫೀಕ್ ಅಹಮ್ಮದ್, ಇಕ್ಬಾಲ್ ಗಾಝಿ, ಮೌಲಾನಾ ಮೊಸಿನ್ ಕಿರ್ಮಾನಿ, ಇನಾಯತ್ ಸಿಂಧೆ, ಮುಹಮ್ಮದ್ ಸೈಫುದ್ದಿನ್ ಉಪಸ್ಥಿತರಿದ್ದರು.

ಜಮಾಅತೆ ಇಸ್ಲಾಮಿ ಹಿಂದ್‍ನ ಬೀದರ್ ಘಟಕದ ಅಧ್ಯಕ್ಷ ಮಹಮ್ಮದ್ ಮೌಅಝ್ಝಮ್ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಮಹಮ್ಮದ್ ನಿಜಾಮುದ್ದಿನ್ ನಿರೂಪಿಸಿದರು. ಮಹಮ್ಮದ್ ಆರಿಫುದ್ದಿನ್ ವಂದಿಸಿದರು.