ಸನ್ಮಾರ್ಗ ವಾರ್ತೆ
ಭುವನೇಶ್ವರ್, ಡಿ. 22: ಒಡಿಸ್ಸಾದ ಪುರಿಯ ಜಗನ್ನಾಥ್ ಮಂದಿರದಲ್ಲಿ ಕಾಮಿಯ ಜಾನಿ ಎಂಬ ಯುಟ್ಯೂಬರ್ ಪ್ರವೇಶಿಸಿದ್ದನ್ನು ಅಲ್ಲಿನ ಬಿಜೆಪಿ ತೀವ್ರವಾಗಿ ವಿರೋಧಿಸಿದೆ.
ಗೋ ಮಾಂಸ ಬಳಕೆಗೆ ಪ್ರೋತ್ಸಾಹಿಸುವ ವ್ಯಕ್ತಿ ದೇವಾಸ್ಥಾನ ಪ್ರವೇಶಿಸಿದ್ದು ಹಿಂದುತ್ವ ಭಕ್ತರ ಧಾರ್ಮಿಕ ಭಾವನೆಗೆ ಘಾಸಿ ಮಾಡಿದ್ದಾರೆ. ಘಟನೆಯಲ್ಲಿ ಯುಟ್ಯೂಬರ್ ವಿರುದ್ಧ ಭಾರತೀಯ ದಂಡ ಸಂಹಿತೆ 295 ನೇ ಕಲಂ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜತಿನ್ ಮೊಹಂತಿ ಹೇಳಿದರು. ಈತನಿಗೆ ದೇವಸ್ಥಾನ ಪ್ರವೇಶಿಸಲು ಹೇಗೆ ಅನುಮತಿ ಸಿಕ್ಕಿತು ಎಂದು ತನಿಖೆ ನಡಸುವಂತೆಯೂ ಅವರು ಆಗ್ರಹಿಸಿದ್ದಾರೆ.
ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ರ ನಂಬಿಕಸ್ಥ ವಿಕೆ ಪಾಂಡ್ಯರ ಜತೆ ಕಾಮಿಯ ಜಾನಿ ಮಾತಾಡುವ ವೀಡಿಯೊವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದರು. ಮಂದಿರದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಾಂಡ್ಯ ವೀಡಿಯೊದಲ್ಲಿ ಮಾತಾಡುತ್ತಾರೆ. ಇದರ ನಂತರ ಬಿಜೆಪಿ ರಂಗ ಪ್ರವೇಶಿಸಿತು.
ಕಾಮಿಯ ಜಾನಿ ದೇವಸ್ಥಾನದ ಪರಿಸರದಲ್ಲಿ ವೀಡಿಯೊ ಶೂಟ್ ಮಾಡಿದ್ದು , ಬೀಫ್ ತಿನ್ನುವವರಿಗೆ ಜಗನ್ನಾಥ ಮಂದಿರದಲ್ಲಿ ಪ್ರವೇಶವಿಲ್ಲ ಎಂದು ಜತಿನ್ ಮೊಹಂತಿ ಹೇಳಿದ್ದಾರೆ. ದೇವಸ್ಥಾನಕ್ಕೆ ವೀಡಿಯೊ ಹಾಕುವ ಮೊದಲು ಕಾಮಿಯಾ ಜಾನಿ ತಾನು ಬೀಫ್ ತಿನ್ನುವ ದೃಶ್ಯಗಳನ್ನು ಹಂಚಿಕೊಂಡಿದ್ದು ಇದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಇದೇ ವೇಳೆ ಬಿಜೆಪಿಯ ಆರೋಪ ನಿರಾಧಾರವಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದರು. ದೇವಸ್ಥಾನದ ಪರಿಸರದಲ್ಲಿ ಕ್ಯಾಮರ ಉಪಯೋಗಿಸಲಾಗಿದೆ ಎನ್ನುವುದು ತಪ್ಪು. ಸರಿಯಾದ ಸಾಕ್ಷ್ಯ ಕೊಟ್ಟರೆ ಕ್ರಮ ಜರಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಬಿಜೆಪಿಯ ವಿರುದ್ಧ ಬಿಹಾರ ಜನತಾ ದಳ ರಂಗ ಪ್ರವೇಶಿಸಿದ್ದು ದೇವಸ್ಥಾನದ ಅಭಿವೃದ್ಧಿಯಲ್ಲಿ ಬಿಜೆಪಿಯ ಅಸಹಿಷ್ಣುತೆಯನ್ನು ಇದು ತೋರಿಸುತ್ತಿದೆ ಎಂದು ಹೇಳಿದೆ.












