ಸನ್ಮಾರ್ಗ ವಾರ್ತೆ
ನಾಗ್ಪುರ: ಜಾತಿ ಗಣತಿ ಕುರಿತು ಆರ್ಎಸ್ಎಸ್ ನಲ್ಲಿ ಭಿನ್ನಮತ ಉಂಟಾಗಿದೆ. ಜಾತಿ ಗಣತಿ ನಿರರ್ಥಕ ಮತ್ತು ದೇಶದ ಹಿತಕ್ಕೆ ಒಪ್ಪುವಂತಹದಲ್ಲ ಎಂದು ಕಳೆದ ದಿನ ಆರ್.ಎಸ್. ಎಸ್ ವಿದರ್ಭ ಪ್ರಾಂತದ ಸಹಸಂಚಾಲಕ್ ಶ್ರೀಧರ ಗಾಡ್ಗೆ ಹೇಳಿದ್ದರು.
ಆದರೆ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಜಾತಿ ಗಣತಿಯನ್ನು ಬಳಸಬೇಕು, ಆದರೆ ಸಾಮಾಜಿಕ ಸಾಮರಸ್ಯ ಮತ್ತು ಏಕತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಆರ್ಎಸ್ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಡ್ಕರ್ ಗುರುವಾರ ಹೇಳಿದರು.
ಹೀಗೆ ಆರೆಸ್ಸೆಸ್ನಲ್ಲಿ ಎರಡು ರೀತಿ ಅಭಿಪ್ರಾಯ ಕಂಡು ಬಂದಿದ್ದು ಮಾಧ್ಯಮಗಳು ಇದನ್ನು ಭಿನ್ನಮತ ಎಂದು ವರದಿ ಮಾಡಿವೆ.
ಒಗ್ಗಟ್ಟು ಸಾಮಾಜಿಕ ನ್ಯಾಯಾಧಾರಿತವಾಗಿ ತಾರತಮ್ಯ ಇಲ್ಲದ ಹಿಂದೂ ಸಮುದಾಯಕ್ಕಾಗಿ ಸಂಘಟನೆ ನಿರಂತರ ಪರಿಶ್ರಮಿಸುತ್ತದೆ. ಐತಿಹಾಸಿಕ ಕಾರಣದಿಂದ ಸಮಾಜದ ಹಲವು ವಿಭಾಗಗಳು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ ಇದು ಸತ್ಯ. ಇವರ ಉನ್ನತಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಇದನ್ನು ಆರೆಸ್ಸೆಸ್ ಪೂರ್ಣರೂಪದಲ್ಲಿ ಬೆಂಬಲಿಸುತ್ತದೆ ಎಂದು ಸುನೀಲ್ ಅಂಬೇಡ್ಕರ್ ಹೇಳಿದರು.
ಇದೇ ವೇಳೆ ಜಾತಿ ಸಮೀಕ್ಷೆ ಬೇಡ, ಆದರೆ ಮೀಸಲಾತಿಯನ್ನು ಆರೆಸ್ಸೆಸ್ ಬೆಂಬಲಿಸುತ್ತದೆ ಎಂದು ಶ್ರೀಧರ್ ಗಾಡ್ಗೆ ಹೇಳಿದರು. ವಿವಿಧ ಜಾತಿಗಳ ವಿವರಗಳು ಸಿಕ್ಕರೆ ಜಾತಿ ಜನಗಣತಿಯಿಂದ ಕೆಲವರಿಗೆ ರಾಜಕೀಯವಾಗಿ ಪ್ರಯೋಜನವಾಗುತ್ತದೆ. ಕಳೆದ ತಿಂಗಳಲ್ಲಿ ಐದು ರಾಜ್ಯಗಳ ಚುನಾವಣೆಯಲ್ಲಿ ಜಾತಿ ಸೆನ್ಸಸ್ ದೊಡ್ಡ ಪ್ರಚಾರವಾಗಿತ್ತು. ಜಾತಿ ಸೆನ್ಸಸ್ ಮಾಡಿ ಎಂದು ಕಾಂಗ್ರೆಸ್ ಒತ್ತಾಯಿಸಿದುದರಿಂದ ಬಿಜೆಪಿ ದೊಡ್ಡ ಇಕ್ಕಟ್ಟಿಗೆ ಸಿಲುಕಿತ್ತು.












