ಮುಂಜಾನೆ ಅಝಾನ್ ವಿರೋಧಿಸಿದವರನ್ನು ಕಟಕಟೆಯಲ್ಲಿ ನಿಲ್ಲಿಸಿದ ಯಕ್ಷಗಾನ

0
19659

ಸನ್ಮಾರ್ಗ ವಾರ್ತೆ

✍️ಅಮಾನ್

2023 ಮಾರ್ಚ್‌ನಲ್ಲಿ ಬಿಜೆಪಿ ನಾಯಕ ಈಶ್ವರಪ್ಪ ದ.ಕ. ಜಿಲ್ಲೆಯಲ್ಲಿ ನಡೆದ ಸಭೆಯೊಂದರಲ್ಲಿ ಆಡಬಾರದ ಮಾತೊಂದನ್ನು ಆಡಿದ್ದರು. ಈ ಅಝಾನ್ ಉಂಟಲ್ಲ, ಅದು ಯಾವಾಗಲೂ ನನಗೆ ತಲೆಬೇನೆ ತರುತ್ತದೆ. ಅಲ್ಲಾಹನಿಗೆ ಮೈಕ್ರೋಫೋನಲ್ಲಿ ಅಝಾನ್ ಕೊಟ್ಟರೆ ಮಾತ್ರ ಕೇಳಿಸ್ತದಾ? ಆತನೇನು ಕಿವುಡನೆ ಎಂದು ಅವರು ಪ್ರಶ್ನಿಸಿದ್ದರು. ಅದಕ್ಕೆ ಶಿಳ್ಳೆ ಚಪ್ಪಾಳೆಗಳು ಬಿದ್ದಿದ್ದುವು.
ಈ ಮಾತಿಗೆ ಆಕ್ಷೇಪ ವ್ಯಕ್ತವಾದಾಗ, ಪರೀಕ್ಷೆ ಹತ್ತಿರ ಬಂದಿದ್ದು ವಿದ್ಯಾರ್ಥಿಗಳ ಕಲಿಕೆಗೆ ಲೌಡ್ ಸ್ಪೀಕರ್ ಅಝಾನ್ ತೊಂದರೆ ಕೊಡುತ್ತದೆ ಎಂದವರು ಸಮರ್ಥಿಸಿಕೊಂಡಿದ್ದರು.

ನಿಜವಾಗಿ, ಅಝಾನ್‌ಗೆ ಬೇಕಿರುವುದು ಕೇವಲ ಐದೇ ಐದು ನಿಮಿಷಗಳು ಅಥವಾ ಅದಕ್ಕಿಂತಲೂ ಕಡಿಮೆ ಅವಧಿ ಮಾತ್ರ. ಇಷ್ಟು ಸಣ್ಣ ಅವಧಿಯ ಅಝಾನ್‌ನಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತದೆ ಎಂದು ಹೇಳಿದರೆ ಅದನ್ನು ದ್ವೇಷ ಎಂದಲ್ಲದೆ ಇನ್ನೇನೆಂದು ಕರೆಯಬೇಕು?

ಇದಕ್ಕಿಂತ ಮೊದಲು 2022ರಲ್ಲಿ ಲೌಡ್ ಸ್ಪೀಕರ್‌ನಲ್ಲಿ ಅಝಾನ್ ಕೊಡುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ರಾಜ್ಯದಲ್ಲಿ ಬಿಜೆಪಿ ಬೆಂಬಲಿಗರು ದೊಡ್ಡ ಮಟ್ಟದಲ್ಲಿ ಅಭಿಯಾನ ಆರಂಭಿಸಿದ್ದರು. ಮುಂಜಾನೆ ಲೌಡ್ ಸ್ಪೀಕರ್‌ನಲ್ಲಿ ಅಝಾನ್ ಕೊಡುವುದನ್ನು ನಿಲ್ಲಿಸದಿದ್ದರೆ ಸಾವಿರ ಮಂದಿರಗಳಲ್ಲಿ ಬೆಳಿಗ್ಗೆ 5 ರಿಂದ ಓಂಕಾರ ಆರಂಭಿಸುವುದಾಗಿ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದರು. ಮಾತ್ರವಲ್ಲ ಮೈಸೂರಿನಲ್ಲಿ ತನ್ನ ಬೆಂಬಲಿಗರೊಂದಿಗೆ ಬೆಳಿಗ್ಗೆ ಲೌಡ್ ಸ್ಪೀಕರ್‌ನಲ್ಲಿ ಸುಪ್ರಭಾತ ಆರಂಭಿಸಿದ್ದರು.

ಈ ನಡುವೆ ಬೊಮ್ಮಾಯಿ ಸರ್ಕಾರ ರಾತ್ರಿ 10 ರಿಂದ ಬೆಳಿಗ್ಗೆ 6ರ ವರೆಗೆ ಹೊರಾಂಗಣದಲ್ಲಿ ಲೌಡ್ ಸ್ಪೀಕರ್ ಬಳಕೆಯನ್ನು ನಿಷೇಧಿಸಿತು. ಸುಪ್ರೀಂ ಕೋರ್ಟ್ ನ ಆದೇಶದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದು ಸಮರ್ಥಿಸಿಕೊಂಡಿತ್ತು. ಆ ಬಳಿಕ ಕೇವಲ ಬೆಂಗಳೂರಿನಲ್ಲೇ 300 ಕ್ಕಿಂತಲೂ ಅಧಿಕ ಮಸೀದಿಗಳಿಗೆ ಪೊಲೀಸರು ನೋಟಿಸು ಜಾರಿ ಮಾಡಿದರು. ಲೌಡ್ ಸ್ಪೀಕರ್ ಬಳಸುವವರು 15 ದಿನಗಳೊಳಗೆ ಪರ್ಮಿಷನ್ ತಗೊಳ್ಳಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದರು.

ಕೊನೆಗೂ ಮುಂಜಾನೆಯ ಅಝಾನನ್ನು ಲೌಡ್ ಸ್ಪೀಕರ್‌ನಲ್ಲಿ ಕೊಡದಂತೆ ಯಶಸ್ವಿಯಾಗಿ ತಡೆಯಲಾಯಿತು. ಆ ಸಂದರ್ಭದಲ್ಲಿ ಮುಸ್ಲಿಮರ ಹೊರತಾಗಿ ಬಹುತೇಕ ಯಾರೂ ಈ ಆದೇಶದ ಪ್ರಾಮಾಣಿಕತೆಯನ್ನು ಪ್ರಶ್ನಿಸಲಿಲ್ಲ. ಮುಖ್ಯವಾಗಿ ಯಕ್ಷಗಾನ ಬಯಲಾಟ, ನಾಟಕ ಇತ್ಯಾದಿ ಕ್ಷೇತ್ರದ ಮಂದಿ ಮೌನ ವಹಿಸಿದರು. ಸುಪ್ರೀಂ ಕೋರ್ಟ್‌ನ ಆದೇಶ ಪಾಲನೆಗಿಂತ ಐದು ನಿಮಿಷದ ಅಜಾನ್ ಮೇಲಿನ ದ್ವೇಷವೇ ಇಂತದ್ದೊಂದು ಆದೇಶಕ್ಕೆ ಕಾರಣ ಎಂಬ ಮುಸ್ಲಿಮರ ಆಕ್ಷೇಪಕ್ಕೆ ಯಾರು ದನಿ ನೀಡಲಿಲ್ಲ.

ಇದೀಗ ಯಕ್ಷಗಾನ ಕ್ಷೇತ್ರಕ್ಕೆ ಈ ನಿಯಮದಿಂದ ತೀವ್ರ ಹೊಡೆತ ಬಿದ್ದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯಕ್ಷಗಾನಕ್ಕೆ ಕರಾವಳಿ ಬಹು ಪ್ರಸಿದ್ಧ. ಅದರಲ್ಲೂ ಕಟೀಲು ದುರ್ಗಾಪರಮೇಶ್ವರಿ ಮೇಳವಂತೂ ಎಲ್ಲೆಡೆ ಜನಪ್ರಿಯ. ಕಟೀಲು ಮೇಳವು ಯಕ್ಷಗಾನವನ್ನು ರಾತ್ರಿ ಪೂರ್ತಿ ಆಯೋಜಿಸಬೇಕು ಎಂದು ಇತ್ತೀಚೆಗೆ ಹೈಕೋರ್ಟು ನಿರ್ದೇಶನ ನೀಡಿತ್ತು. ಆದರೆ ರಾತ್ರಿ 10 ಗಂಟೆಯ ಬಳಿಕ 70 ಡೆಸಿಬಲ್ ಗಿಂತ ಹೆಚ್ಚು ಶಬ್ದ ಮಾಡದಂತೆ ಸುಪ್ರೀಂಕೋರ್ಟ್ ಆದೇಶ ಇದೆ. ಮತ್ತು ಹೊರಾಂಗಣದಲ್ಲಿ ಲೌಡ್ ಸ್ಪೀಕರ್ ಬಳಸದಂತೆ ನಿರ್ದೇಶನವೂ ಇದೆ. ಆದರೆ ಯಕ್ಷಗಾನದ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಚಂಡೆಯ ಸದ್ದೇ 150ಕ್ಕಿಂತಲೂ ಅಧಿಕ ಡೆಸಿಬಲ್ ಇದೆ. ಸಾಮಾನ್ಯ ವ್ಯಕ್ತಿ ಏರು ಧ್ವನಿಯಲ್ಲಿ ಆಡುವ ಮಾತು 50ರಿಂದ 55 ಡೆಸಿಬಲ ಇರುತ್ತದೆ. ಸುಪ್ರೀಂ ಕೋರ್ಟ್‌ನ ಆದೇಶ ಪಾಲಿಸುವುದಾದರೆ ರಾತ್ರಿ ಇಡೀ ಯಕ್ಷಗಾನ ಆಡಲು ಸಾಧ್ಯವೇ ಇಲ್ಲ. ಅಲ್ಲದೆ ಹೆಚ್ಚಿನ ಯಕ್ಷಗಾನ ಪ್ರಸಂಗಗಳು ವಸತಿ ಪ್ರದೇಶದ ಆಸುಪಾಸಿನಲ್ಲೇ ನಡೆಯುತ್ತವಾದ್ದರಿಂದ ಸುಪ್ರೀಂ ಆದೇಶ ಪಾಲಿಸಿ ರಾತ್ರಿ ಪೂರ್ತಿ ಯಕ್ಷಗಾನ ಆಯೋಜಿಸುವುದು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ.

ಯಾಕೆಂದರೆ, ಕಮರ್ಷಿಯಲ್ ವ್ಯಾಪ್ತಿಯಲ್ಲಿ ರಾತ್ರಿ 55 ಡೆಸಿಬಲ್, ವಸತಿ ವ್ಯಾಪ್ತಿಯಲ್ಲಿ ರಾತ್ರಿ 45 ಡೆಸಿಬಲ್ ಮತ್ತು ಶಬ್ದ ರಹಿತ ವಲಯದಲ್ಲಿ ರಾತ್ರಿ 40 ಡೆಸಿಬಲ್‌ನಂತೆ ಲೌಡ್ ಸ್ಪೀಕರ್ ಬಳಸಬೇಕು ಎಂಬುದಾಗಿ ಪೊಲೀಸರ ಸೂಚನೆಯೂ ಇದೆ. ಈ ನಿಯಮ ಪಾಲಿಸಿ ರಾತ್ರಿ ಹತ್ತರ ನಂತರ ಯಕ್ಷಗಾನ ಬಯಲಾಟ ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ವಿಶೇಷ ಏನೆಂದರೆ, ಯಕ್ಷಗಾನದ ಸೊಗಸು ಇರೋದೇ ರಾತ್ರಿಯಲ್ಲಿ ಎನ್ನಲಾಗುತ್ತಿದೆ.

ನಿಜವಾಗಿ, ಯಕ್ಷಗಾನಕ್ಕೆ ಅಡ್ಡಿಯಾಗಿರುವುದು ಸುಪ್ರೀಂ ಕೋರ್ಟ್‌ನ ನಿಯಮಗಳಲ್ಲ. ಧರ್ಮದ್ವೇಷಿ ಮತ್ತು ಅಧಿಕಾರ ದಾಹದ ರಾಜಕೀಯ. ಮುಸ್ಲಿಮರಿಗೆ ಹೇಗಾದರೂ ಏಟು ಕೊಡಬೇಕು ಎಂಬ ದ್ವೇಷದ ನಡೆಯೇ ಅಂತಿಮವಾಗಿ ಯಕ್ಷಗಾನಕ್ಕೆ ಕಂಟಕವಾಗಿ ಪರಿಣಮಿಸಿದೆ.

ಹಾಗಂತ, ಲೌಡ್ ಸ್ಪೀಕರ್‌ಗೆ ಸಂಬಂಧಿಸಿ 2005ರಲ್ಲೇ ಈ ತೀರ್ಪು ನೀಡಿತ್ತು. ಆದರೆ ಬೊಮ್ಮಾಯಿ ಸರಕಾರ ಇದನ್ನು ಜಾರಿ ಮಾಡಲು ಮುಂದಾದದ್ದು ಎಂಬುದರಲ್ಲೇ 2022ರಲ್ಲಿ ಸರಕಾರದ ಉದ್ದೇಶ ಶುದ್ಧಿಯನ್ನು ಅಳೆಯಲು ಇದುವೇ ಧಾರಾಳ ಸಾಕು.