ಹೊಸದಿಲ್ಲಿ,ಎ.6: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದವರ ವಿರುದ್ದ ಕಠಿಣ ಕ್ರಮ ಜರಗಿಸದ ಚುನಾವಣಾ ಆಯೋಗವನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ತೀವ್ರವಾಗಿ ಟೀಕಿಸಿದ್ದು ಸೈನ್ಯವನ್ನು ಅಪಮಾನಿಸಿದ ಆದಿತ್ಯನಾಥ್ಗೆ ಆಯೋಗ ಪ್ರೇಮ ಪತ್ರ ಬರೆಯುತ್ತಿದೆ ಎಂದು ಆರೋಪಿಸಿದ್ದಾರೆ. ಯಾಕೆ ನೀತಿಸಂಹಿತೆ ರೂಪಿಸಲಾಗಿದೆ. ಮೋದಿಯ ಸಂಹಿತೆಯನ್ನು ಚುನಾವಣಾ ಆಯೋಗ ಜಾರಿಗೆ ತರುತ್ತಿದೆ ಎಂದು ಅವರು ಹೇಳಿದರು.
ನೀತಿ ಸಂಹಿತೆ ಉಲ್ಲಂಘಿಸಿದ ನೀತಿ ಆಯೋಗದ ಉಪಾಧ್ಯಕ್ಷರನ್ನು ಇನ್ನು ಮುಂದೆ ಹಾಗೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿ ಸುಮ್ಮನಾಗಿದೆ. ಸತ್ಯಕ್ಕೆ ಯಾಕೆ ಚುನಾವಣಾ ಆಯೋಗ ಹೆದರುತ್ತಿದೆ ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಭಾರತದ ಸೈನ್ಯವನ್ನು ಮೋದಿ ಸೇನೆ ಎಂದು ಕರೆದಿದ್ದರು. ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯಲ್ಲಿರುವ ನ್ಯಾಯ್ ಯೋಜನೆಯನ್ನು ಟೀಕಿಸಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ಗೆ ಚುನಾವಣಾ ಆಯೋಗ ಕೇವಲ ಎಚ್ಚರಿಕೆ ನೀಡಿತ್ತು. ಇದೇ ವೇಳೆ ಮೋದಿಯ ಜೀವನ ಚರಿತ್ರೆ ಸಿನೆಮಾವನ್ನು ನಿಷೇಧಿಸಲಿಲ್ಲ. ನಮೊ ಟಿವಿಯ ಕುರಿತು ತನಿಖೆ ನಡೆಸುವುದಕ್ಕೂ ಅದು ಮುಂದಾಗಿಲ್ಲ. ಅಯೋಗದ ಇಂತಹ ನಿರ್ಲಕ್ಷ್ಯಗಳ ವಿರುದ್ಧ ಕಾಂಗ್ರೆಸ್ ಉಗ್ರ ಟೀಕಾಪ್ರಹಾರದೊಂದಿಗೆ ರಂಗಪ್ರವೇಶಿಸಿದೆ.












