ಹೊಸದಿಲ್ಲಿ,ಎ.6: ಮುಸ್ಲಿಂ ಲೀಗನ್ನು ವೈರಸ್ ಎಂದು ಹೇಳಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಮುಸ್ಲಿಂ ಲೀಗ್ ಚುನಾವಣಾ ಆಯೋಗಕ್ಕೆ ದೂರು ನೀಡಲು ಸಜ್ಜಾಗಿದೆ. ಮುಸ್ಲಿಂ ಲೀಗ್ ವೈರಸ್ ಆಗಿದ್ದು ಅದು ಬಾಧಿಸಿದವರು ಪಾರಾಗಲು ಸಾಧ್ಯವಿಲ್ಲ. ದೇಶದ ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ ಈ ವೈರಸ್ ಬಾಂಧಿಸಿದೆ ಎಂದು ಅವರು ಹೇಳಿದ್ದರು. ಕಾಂಗ್ರೆಸ್ ಗೆದ್ದರೆ ಇಡೀ ದೇಶಕ್ಕೆ ಮುಸ್ಲಿಂ ಲೀಗ್ ಎಂಬ ವೈರಸ್ ಹರಡಬಹುದು ಎಂದು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದರು.
ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ಚುನಾವಣೆಗೆ ಸ್ಪರ್ಧಿಸಲು ನಾಮ ಪತ್ರ ಸಲ್ಲಿಸಿದ ಬಳಿಕ ಯೋಗಿ ವಿವಾದಿತ ಹೇಳಿಕೆ ನೀಡಿದ್ದರು. ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್ ಮತ್ತು ಇಂದು ಕೇರಳದಲ್ಲಿರುವ ಮುಸ್ಲಿಂ ಲೀಗ್ ಒಂದೇ ಆಗಿದೆ ಎಂದು ಯೋಗಿ ಹೇಳಿದ್ದರು.
ಮುಸ್ಲಿಂ ಲೀಗ್ ಉಪಾಧ್ಯಕ್ಷ ಇಕ್ಬಾಲ್ ಅಹ್ಮದ್ರ ನೇತೃತ್ವದ ಪ್ರತಿನಿಧಿಗಳ ತಂಡ ಇಂದು ದೂರು ನೀಡಲಿದೆ. ಮುಸ್ಲಿಂ ಲೀಗ್ ಪಾರ್ಟಿ ಮತ್ತು ಧ್ವಜವನ್ನು ರಾಷ್ಟ್ರೀಯ ಚುನಾವಣಾ ಆಯೋಗ ಅಂಗೀಕಾರ ನೀಡಿದೆ. ಆದ್ದರಿಂದ ಆದಿತ್ಯನಾಥ್ ಹೇಳಿಕೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆಯೆಂದು ಲೀಗ್ ದೂರಿನಲ್ಲಿ ತಿಳಿಸಲಿದೆ ಎಂದು ಮೂಲಗಳು ತಿಳಿಸಿವೆ.












