ಸತ್ವ ಪರೀಕ್ಷೆಗಳಿಂದ ಕಲಿಯಬೇಕಾದ ಪಾಠಗಳು

0
361

ಸನ್ಮಾರ್ಗ ವಾರ್ತೆ

✍️ಮುಸ್ತಫಾ ಶೇಖ್ ಇಬ್ರಾಹೀಮ್

ಬದುಕಿನಲ್ಲಿ ನಾವು ಎದುರಿಸುವ ಸತ್ವ ಪರೀಕ್ಷೆಗಳಿಂದ ಪಾಠ ಕಲಿಯದೆ ಸವಾಲುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ.

ಮೊದಲನೇ ಪಾಠ: ತೌಹೀದ್, ಈಮಾನ್ ಮತ್ತು ಅಲ್ಲಾಹನ ಮೇಲಿನ ಭರವಸೆಯ ಪಾಠ. ಓರ್ವ ಸತ್ಯವಿಶ್ವಾಸಿಯ ವೈಯಕ್ತಿಕ ವಾಸ್ತವಿಕತೆಯ ಕುರಿತು ಪರೀಕ್ಷೆಗಳು ಬೆಳಕು ಚೆಲ್ಲುತ್ತವೆ. ತಾನು ಓರ್ವ ದುರ್ಬಲ ದಾಸನಾಗಿದ್ದೇನೆ, ಸೃಷ್ಟಿಕರ್ತನ ಶಕ್ತಿ ಸಾಮರ್ಥ್ಯವಿಲ್ಲದೆ ಯಾವುದೇ ಚಲನೆ ಅಸಾಧ್ಯವೆಂಬ ಪ್ರಾಯೋಗಿಕ ಜ್ಞಾನ ಮನದಟ್ಟಾಗುತ್ತದೆ. ಇದನ್ನು ಅರ್ಥೈಸಿದ ಬಳಿಕ ಅಲ್ಲಾಹನ ಮೇಲೆ ಭರವಸೆಯನ್ನು ಇಡಬೇಕಾದ ರೀತಿಯಲ್ಲಿ ಭರವಸೆಯಿಟ್ಟು ಅವನಲ್ಲಿ ಅಭಯ ಯಾಚಿಸುವ ರೀತಿಯಲ್ಲಿ ಯಾಚಿಸಲು ಓರ್ವನನ್ನು ಪ್ರೇರೇಪಿಸುತ್ತದೆ. ಸ್ವತಃ ತನ್ನಲ್ಲಿರುವ ಅಹಂಕಾರ, ವಂಚನೆ, ನಿರ್ಲಕ್ಷತೆ, ಅಹಂಭಾವವನ್ನು ದೂರೀಕರಿಸಲು ಇದು ಸಹಾಯಕವಾಗುತ್ತದೆ.

ಎರಡನೆಯದಾಗಿ ಸತ್ವ ಪರೀಕ್ಷೆಗಳು ಐಹಿಕ ಜಗತ್ತಿನ ಬದುಕಿನ ವಂಚನೆಯನ್ನು ಸ್ಪಷ್ಟ ಪಡಿಸುತ್ತದೆ. ಐಹಿಕ ಬದುಕಿನ ಹಿಂದೆ ರೋಗ, ಸಂಕಷ್ಟಗಳು, ಆಯಾಸಗಳು ಇಲ್ಲದೆ ಇರುವ ಸರಿಯಾದ ಆರೋಗ್ಯ ಪೂರ್ಣವಾದ ಒಂದು ಬದುಕು ಇದೆಯೆಂಬುದನ್ನು ಮನವರಿಕೆ ಮಾಡಿಕೊಡುತ್ತದೆ.

“ಈ ಲೌಕಿಕ ಜೀವನವು ಒಂದು ಆಟ ಮತ್ತು ಮನೋರಂಜನೆಯಲ್ಲದೆ ಇನ್ನೇನೂ ಅಲ್ಲ. ನೈಜ ಜೀವನ ಗೃಹವು ಪರಲೋಕ ಗೃಹವೇ ಆಗಿದೆ. ಇವರು ಅರಿಯುತ್ತಿದ್ದರೆ.” (ಅಂಕಬೂತ್: 64)

ಮೂರನೆಯದಾಗಿ ತನ್ನ ಆರೋಗ್ಯದ ಬಗ್ಗೆ ಇರುವ ಅಲ್ಲಾಹನ ಅನುಗ್ರಹವನ್ನು ಸ್ಮರಿಸುವುದು ಸತ್ವ ಪರೀಕ್ಷೆಯಾಗಿದೆ. ಖಂಡಿತವಾಗಿಯೂ ತಾನು ಸುದೀರ್ಘ ಕಾಲ ಅನುಭವಿಸಿ ಆಸ್ವದಿಸಿದ ಆರೋಗ್ಯ ಸುಖದ ಅರ್ಥದ ಕುರಿತು ತಾನು ಅನುಭವಿಸುವ ವಿಪತ್ತುಗಳು ಅವನಿಗೆ ವಿವರಿಸುತ್ತದೆ. ಅದರ ಮಾಧುರ‍್ಯವನ್ನು ಆತ ಆಸ್ವಾದಿಸಿ ಅದರ ಮೌಲ್ಯ ವಾಸ್ತವದಲ್ಲಿ ಆತ ಇದುವರೆಗೆ ಅರಿತಿರಲಿಲ್ಲ ಎಂಬ ವಾಸ್ತವ ಆತನ ಅರಿವಿಗೆ ಬರುತ್ತದೆ! ಆರೋಗ್ಯ ತನ್ನ ತಲೆಯ ಮೇಲಿನ ಕಿರೀಟವಾಗಿದೆ ಎಂಬುದನ್ನು ಆತ ಅನಾರೋಗ್ಯ ಪೀಡಿತನಾಗುವುದರ ಹೊರತು ಆರೋಗ್ಯವಂತ ಅರಿತಿರಲಾರ ಎಂಬ ವಾಸ್ತವ ಹಿಂದೆ ಯಾರೋ ಬಲ್ಲವರು ಹೇಳಿದ ಮಾತು ಎಷ್ಟೊಂದು ಅರ್ಥಗರ್ಭಿತ.!

ನಾಲ್ಕನೆಯದಾಗಿ ಮಿತಿ ಮೀರಿ ಸಂಭ್ರಮಿಸಬಾರದೆಂದು ಪರೀಕ್ಷೆಗಳು ಜ್ಞಾಪಿಸುತ್ತವೆ.
ಅಲ್ಲಾಹನು ಹೇಳುತ್ತಾನೆ, “ಭೂಮಿಯ ಮೇಲೆ ಅಥವಾ ನಿಮ್ಮ ಮೇಲೆ ಎರಗುವ ಯಾವ ಸಂಕಷ್ಟವೂ ನಾವು ಅದನ್ನು ಸೃಷ್ಟಿಸುವುದಕ್ಕೆ ಮುಂಚೆ ಒಂದು ಗ್ರಂಥದಲ್ಲಿ (ವಿಧಿ ಲಿಖಿತದಲ್ಲಿ) ಬರೆದಿಟ್ಟುಕೊಳ್ಳದೆ ಇಲ್ಲ. ಖಂಡಿತವಾಗಿಯೂ ಹೀಗೆ ಮಾಡುವುದು ಅಲ್ಲಾಹನಿಗೆ ಅತ್ಯಂತ ಸುಲಭ ಕಾರ್ಯವಾಗಿದೆ. (ಹೀಗೇಕೆಂದರೆ) ನಿಮಗುಂಟಾಗುವ ಯಾವುದೇ ನಷ್ಟಕ್ಕಾಗಿ ನೀವು ಖೇದಿಸಬಾರದು ಮತ್ತು ಅಲ್ಲಾಹನು ನಿಮಗೆ ಏನನ್ನು ದಯಪಾಲಿಸಿರುವನೋ ಅದರ ಬಗ್ಗೆ ಹಿಗ್ಗಬಾರದು. ಅಲ್ಲಾಹನು ಆತ್ಮಪ್ರಶಂಸಕರನ್ನು ಮತ್ತು ದುರಭಿಮಾನಿಗಳನ್ನು ಮೆಚ್ಚುವುದಿಲ್ಲ.” (ಅಲ್ ಹದೀದ್: 22-23)

ಐದನೆಯದಾಗಿ ತನ್ನ ಕುಂದು ಕೊರತೆ ಲೋಪ ದೋಷಗಳನ್ನು ಅರಿತು ಆ ಬಗ್ಗೆ ಸ್ಮರಿಸಲು ಸಾಧ್ಯವಾಗುವ ರೀತಿಯಲ್ಲಿ ಪಶ್ಚಾತ್ತಾಪ ಪಡಲು ಸತ್ವ ಪರೀಕ್ಷೆಗಳು ಓರ್ವ ದಾಸನನ್ನು ಪ್ರೇರೇಪಿಸುತ್ತದೆ. ಸ್ವತಃ ತಮ್ಮ ಕೈಗಳಿಂದ ಮಾಡದ ಹೊರತು ನಿಮ್ಮನ್ನು ವಿಪತ್ತುಗಳು ಬಾಧಿಸಿಲ್ಲ. ಅಲ್ಲಾಹನು ಸಾಕಷ್ಟು ಬಾರಿ ನಿಮಗೆ ಕ್ಷಮಿಸಿರುತ್ತಾನೆ. ಸತ್ವ ಪರೀಕ್ಷೆಗಳು ಮಹಾಶಿಕ್ಷೆ ಬಂದೆರಗುವುದಕ್ಕಿಂತ ಮುಂಚೆ ಪಶ್ಚಾತ್ತಾಪ ಪಡಲು ಇರುವ ಅವಕಾಶವಾಗಿದೆ.
“ನಿಮಗೆ ಒದಗಿರುವ ಯಾವುದೇ ಸಂಕಷ್ಟವು ನಿಮ್ಮ ಕೈಗಳ ಗಳಿಕೆಯಿಂದಲೇ ಆಗಿದೆ. ಅನೇಕ ಪಾಪಗಳನ್ನು ಅವನು ಹಾಗೆಯೇ ಕ್ಷಮಿಸಿ ಬಿಡುತ್ತಾನೆ.” (ಸೂರಾ ಅಶ್ಶೂರಾ: 30)

ಆರನೆಯದ್ದಾಗಿ ಖಂಡಿತವಾಗಿಯೂ ಸತ್ವ ಪರೀಕ್ಷೆಗಳು ನಮ್ಮ ಚಟುವಟಿಕೆಗಳ ಸಂಸ್ಕರಣೆಯ ಪಾಠವಾಗಿದೆ. ಎಲ್ಲಾ ಕಾರ್ಯಗಳಲ್ಲಿಯೂ ಸಹನೆ ತಾಳ್ಮೆ ವಹಿಸಿ ಮುಂದೆ ಸಾಗಿ ಸಹನೆ ತಾಳ್ಮೆಯ ಮೂಲಕ ಒಂದು ಸಮಾಜವನ್ನು ತರಬೇತಿ ಗೊಳಿಸಲು ಸಾಧ್ಯವಾಗುತ್ತದೆ ಎಂಬ ಪಾಠ ಕಲಿಸುತ್ತದೆ. ಅಲ್ಲಾಹನನ್ನು ಸ್ಮರಿಸಿ ಸ್ತುತಿಸಲು ಸತ್ಯದ ಹಾದಿಯಲ್ಲಿ ದೃಢವಾಗಿ ನಿಲ್ಲಲು ಅಲ್ಲಾಹನನ್ನು ಧಿಕ್ಕರಿಸಿ ಮುನ್ನಡೆಯುವುದರಿಂದ ಮಿಥ್ಯದ ಹಾದಿಯಿಂದ ದೂರ ನಿಲ್ಲಲು ಸಹನೆಯಿಂದಲ್ಲದೆ ಸಾಧ್ಯವಿಲ್ಲ. ಶಾಶ್ವತವಾದ ಸ್ವರ್ಗ ಗಳಿಸಲು ಅಲ್ಲಾಹನ ಸಂತೃಪ್ತಿ ಪಡೆಯಲು ಸಹನೆಯು ಕೊಂಡೊಯ್ಯುತ್ತದೆ. ಅಲ್ಲಾಹನು ಹೇಳುತ್ತಾನೆ, “ಸಹನಾಮಯಿಗಳ ಹೊರತು ಅದು ಲಭಿಸದು. ಮಹಾ ಸೌಭಾಗ್ಯವಂತರಿಗಲ್ಲದೆ ಅದನ್ನು ಗಳಿಸಲು ಸಾಧ್ಯವಿಲ್ಲ.”

ಲೋಕದಲ್ಲಿ ವಿಪತ್ತುಗಳು ಇಲ್ಲದಿರುತ್ತಿದ್ದರೆ, ಪರಲೋಕದಲ್ಲಿ ದಿವಾಳಿಗಳ ಸಾಲಿನಲ್ಲಿ ಸೇರ ಬೇಕಾಗಬಹುದು ಎಂದು ಕೆಲವು ಗತ ವಿದ್ವಾಂಸರುಗಳು ಹೇಳಿದ್ದಾರೆ.

ಪ್ರವಾದಿ(ಸ)ರು ಹೇಳಿರುತ್ತಾರೆ, “ಕೆಲವು ಜನರಿಗೆ ಅಲ್ಲಾಹನ ಬಳಿ ವಿಶೇಷ ದರ್ಜೆ ಇರುತ್ತದೆ. ತಮ್ಮ ವರ್ತನೆ ಕಾರ್ಯ ಚಟುವಟಿಕೆಗಳಿಂದಲ್ಲದೆ ಅದರ ಬಳಿಗೆ ತಲುಪಲು ಸಾಧ್ಯವಿಲ್ಲ. ಅದಕ್ಕಾಗಿ ಆ ವಿಶೇಷ ದರ್ಜೆಯವರೆಗೆ ತಲುಪುವ ತನಕ ಆ ವ್ಯಕ್ತಿಗೆ ಅನಿಷ್ಟ ಸಂಕಷ್ಟಗಳ ಮೂಲಕ ಅಲ್ಲಾಹನು ಅವರನ್ನು ಪರೀಕ್ಷಿಸುತ್ತಲೇ ಇರುವನು.”

ಇಮಾಮ್ ಹಸನುಲ್ ಬಸೂರಿ ಹೇಳುತ್ತಾರೆ, “ಬರುತ್ತಿರುವಂತಹ ಆಪತ್ತುಗಳ, ಸಂಕಷ್ಟಗಳನ್ನು ದ್ವೇಷಿಸದಿರಿ. ನೀವು ದ್ವೇಷಿಸುವ ಕಾರ್ಯಗಳ ಮೂಲಕ ಅಲ್ಲಾಹನು ನಿಮಗೆ ಯಶಸ್ಸನ್ನು ನಿಶ್ಚಯಿಸಿರಬಹುದು.”

ಅನು: ಅಬೂ ಸಫ್ವಾನ್