“ಬೀದಿ ನ್ಯಾಯ” ವಿಧಿಸಲು ಇದು ಅರಾಜಕ ದೇಶ ಅಲ್ಲ, ಸರ್ವಾಧಿಕಾರಿಗಳ ನಾಡೂ ಅಲ್ಲ. ಶಾಸಕರಿಗೆ ಈ ಜ್ಞಾನ ಇರಬೇಕು: ಡಿವೈಎಫ್ಐ

0
1212

ಸನ್ಮಾರ್ಗ ವಾರ್ತೆ

ಮಂಗಳೂರಿನ ಸೈಂಟ್ ಜರೋಜಾ ಶಾಲೆಯ ಸಿಸ್ಟರ್ ಹಿಂದು ಧರ್ಮ ನಿಂದನೆ ಮಾಡಿದ್ದರೆ ಅದರ ಮೇಲೆ ಕ್ರಮ ಆಗಲಿ, ಶಿಕ್ಷೆಯೂ ಆಗಲಿ. ಅದಕ್ಕೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದರದ್ದೇ ಕ್ರಮ, ನಿಯಮಗಳಿವೆ. ಆ ಪ್ರಕಾರ ತನಿಖೆ ನಡೆದು ಅಪರಾಧ ಸಾಬೀತಾದರೆ ಶಿಕ್ಷೆ ವಿಧಿಸುವುದು ಸರಿಯಾದ ವಿಧಾನ.

“ಬೀದಿ ನ್ಯಾಯ” ವಿಧಿಸಲು ಇದು ಅರಾಜಕ ದೇಶ ಅಲ್ಲ, ಸರ್ವಾಧಿಕಾರಿಗಳ ನಾಡೂ ಅಲ್ಲ. ಶಾಸಕರಾದವರಿಗೆ ಈ ಜ್ಞಾನ ಇರಬೇಕು. ಶಾಸಕ ವೇದವ್ಯಾಸ ಕಾಮತ್ ಇದನ್ನೆಲ್ಲ ಧಿಕ್ಕರಿಸಿ ಶಾಲೆಗೆ ಮುತ್ತಿಗೆ ಹಾಕಿ ಗೂಂಡಾಗಿರಿ ಮೆರೆದಿರುವುದು ಆಘಾತಕಾರಿ.

ಅದರಲ್ಲೂ ಪ್ರಾಥಮಿಕ ಶಾಲೆಯ ಮುಗ್ಧ ವಿದ್ಯಾರ್ಥಿಗಳನ್ನು ತಮ್ಮದೇ ಶಾಲೆಯ ವಿರುದ್ದ ಮುತ್ತಿಗೆಗೆ ಬಳಸಿರುವುದು, ಧಾರ್ಮಿಕ ಘೋಷಣೆಗಳನ್ನು ಕೂಗಿಸಿರುವುದು ನಾಚಿಕೆಗೇಡಿನ ಕೃತ್ಯ.

ಶಾಸಕನಿಗಿರಬೇಕಾದ ಕನಿಷ್ಟ ಪ್ರಜ್ಞೆ, ಸಮಾಜದ ಭವಿಷ್ಯದ ಕುರಿತು ಕಾಳಜಿ ವೇದವ್ಯಾಸ ಕಾಮತರಿಗೆ ಇಲ್ಲ ಎಂಬುದು ಇಂದಿನ ಘಟನೆಯಿಂದ ಸಾಬೀತಾಗಿದೆ.

ಮಂಗಳೂರಿನ ಸಾಮಾನ್ಯ, ಕಡಿಮೆ ಆದಾಯದ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗಿರುವ ಡೊನೇಷನ್ ಹಾವಳಿ, ದುಬಾರಿ ಫೀಸು, ನಿಯಮ ಬಾಹಿರ ಶಿಕ್ಷಣ ವ್ಯವಸ್ಥೆಯ ಕುರಿತು ವಿಧಾನ ಸಭೆಯಲ್ಲಿ ಧ್ವನಿ ಎತ್ತಬೇಕಿದ್ದ ಶಾಸಕರು, ಅದರ ಬದಲಿಗೆ ಅಧಿವೇಶನ ತೊರೆದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೊಂದರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು, ಮತೀಯ ಭಾವನೆ ಕೆರಳಿಸಲು ಪ್ರಕರಣವನ್ನು ಬಳಸುತ್ತಿರುವುದು ಖಂಡನೀಯ.

ಇದರ ಹಿಂದೆ ಲೋಕಸಭಾ ಚುನಾವಣೆಯ ಸಿದ್ದತೆ ಇರುವುದು ಸ್ಪಷ್ಟ. ಜಿಲ್ಲಾಡಳಿತ, ಸರಕಾರ ಇಂತಹ ಗೂಂಡಾಗಿರಿಯನ್ನು ಸಹಿಸಬಾರದು, ಕಾನೂನಿನ ಪಾಠ, ಜವಾಬ್ದಾರಿಯನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಬೇಕು, ಹಿಂಸೆಗೆ ಪ್ರಚೋದಿಸುವ, ಗೂಂಡಾಗಿರಿ ಮೆರೆದಿರುವ ಶಾಸಕ ವೇದವ್ಯಾಸ ಕಾಮತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ.

ಮುನೀರ್ ಕಾಟಿಪಳ್ಳ
ರಾಜ್ಯಾಧ್ಯಕ್ಷರು, ಡಿವೈಎಫ್ಐ ಕರ್ನಾಟಕ

LEAVE A REPLY

Please enter your comment!
Please enter your name here