ಆರ್ಥಿಕ ಬಿಕ್ಕಟ್ಟಿನಲ್ಲಿ ಇಸ್ರೇಲ್

0
117

ಮೂಡೀಸ್ ಕ್ರೆಡಿಟ್ ರೇಟಿಂಗ್ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ

ಸನ್ಮಾರ್ಗ ವಾರ್ತೆ

ಟೆಲ್ ಅವೀವ್: ಯುದ್ಧದ ವೆಚ್ಚ ಮತ್ತು ಹಣಕಾಸಿನ ವಹಿವಾಟಿನ ತೀವ್ರ ಕುಸಿತವು ಇಸ್ರೇಲ್ ಅನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳುತ್ತಿದೆ. ಅಂತರಾಷ್ಟ್ರೀಯ ಕ್ರೆಡಿಟ್ ಏಜೆನ್ಸಿ ಮೂಡೀಸ್ ಶುಕ್ರವಾರ ಇಸ್ರೇಲ್ ನ ಸಾರ್ವಭೌಮ ಕ್ರೆಡಿಟ್ ರೇಟಿಂಗ್ ಅನ್ನು A1 ನಿಂದ A2 ಗೆ ಇಳಿಸಿದೆ. ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಅರ್ಥ ವ್ಯವಸ್ಥೆಯನ್ನು ಚೇತರಿಸಿಕೊಳ್ಳಲು ಮತ್ತು ಮಾರುಕಟ್ಟೆ ಮತ್ತು ಕ್ರೆಡಿಟ್ ಏಜೆನ್ಸಿಗಳ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯಲು ಸರ್ಕಾರ ಮತ್ತು ಸಂಸತ್ತಿಗೆ ಮಧ್ಯಪ್ರವೇಶಿಸುವಂತೆ ಬ್ಯಾಂಕ್ ಆಫ್ ಇಸ್ರೇಲ್ ಗವರ್ನರ್ ಅಮೀರ್ ಯಾರೋನ್ ಆಗ್ರಹಿಸಿದ್ದಾರೆ.

ಅರ್ಥವ್ಯವಸ್ಥೆಯನ್ನು ಮೂಲಭೂತವಾಗಿ ಗಟ್ಟಿಗೊಳಿಸುತ್ತೇವೆ. ಇದಕ್ಕಿಂತ ಮೊದಲು ಕೂಡಾ ಇಂತಹ ಕಷ್ಟದ ಪರಿಸ್ಥಿತಿ ಎದುರಿಸಿದ್ದೇವೆ ಎಂದು ಗವರ್ನರ್ ಹೇಳಿದರು. ಯುದ್ಧ ಮುಂದುವರಿಯುತ್ತಿರುವುದರ ಜೊತೆಗೆ ಕೆಂಪು ಸಮುದ್ರದಲ್ಲಿ ಸರಕು ಸಾಗಾಟಕ್ಕೆ ಸಮಸ್ಯೆ ಎದುರಿಸುತ್ತಿರುವುದು ಅರ್ಥವ್ಯವಸ್ಥೆಯನ್ನು ಬಾಧಿಸಿತು ಮತ್ತು ಅಕ್ಟೋಬರ್ ಏಳರ ನಂತರ ಐದು ಲಕ್ಷಕ್ಕೂ ಹೆಚ್ಚು ಪ್ರಜೆಗಳು ಇಸ್ರೇಲ್ ತೊರೆದಿದ್ದಾರೆ.

ವಾಣಿಜ್ಯ ವ್ಯವಹಾರ ಆರ್ಥಿಕ ಕ್ರಯ ವಿಕ್ರಯ ಭಾರೀ ಕುಸಿತವನ್ನು ಎದುರಿಸುತ್ತಿದೆ. ಮಧ್ಯೆ ಮಧ್ಯೆ ಅಟ್ಟಿ ಬರುತ್ತಿರುವ ರಾಕೇಟ್‍ಗಳು ಅದರ ಜೊತೆಗೆ ಕೇಳಿ ಬರುತ್ತಿರುವ ಅಪಾಯ ಸೂಚಕ ಸೈರನ್‍ಗಳ ಕಾರಣದಿಂದ ಜನರು ಮನೆಯಿಂದ ಹೊರಬರುವುದು ಕಡಿಮೆಯಾಗಿದೆ. ವಿದ್ಯಾಲಯಗಳು ತೆರೆಯುತ್ತಿಲ್ಲ. ಇಸ್ರೇಲಿನ ಉತ್ಪನ್ನಗಳನ್ನು ಬಹಿಷ್ಕರಿಸುವ ಕರೆ ಕೂಡ ಆರ್ಥಿಕ ವ್ಯವಸ್ಥೆಗೆ ತಿರುಗೇಟು ಆಗಿದೆ.