ಕೋಝಿಕ್ಕೋಡ್,ಎ.8: ಗೂಗಲ್ ಜಾಹೀರಾತು ಸೇವೆಗೆ ಸಂಬಂಧಿಸಿದ ಲೋಪಗಳನ್ನು ಪತ್ತೆ ಹಚ್ಚಿದ ಕೇರಳದ ಯುವಕನಿಗೆ ಗೂಗಲ್ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿದೆ. ಕಲ್ಲಿಕೋಟೆಯ ನಿವಾಸಿ ಸುಲಕ್ಷ್ ವಿ. ಸುಧೀರ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾಹೀರಾತು ಪ್ರಚಾರಕ್ಕೆ ಸಂಬಂಧಿಸಿದ ಹರಾಜಿನ ವಿವರಗಳು ಬಹಿರಂಗಗೊಳ್ಳುವುದಕ್ಕೆ ಆಸ್ಪದವಾಗಿದ್ದ ಲೋಪಗಳನ್ನು ಸುಲಕ್ಷ್ ಕಂಡು ಹುಡುಕಿದ್ದಾರೆ.
ಜಾಹೀರಾತಿಗೆ ಸಂಬಂಧಿಸಿದಂತೆ ಗೂಗಲ್ಗೆ ಮತ್ತು ಜಾಹೀರಾತುದಾರರ ನಡುವೆ ಮಾತ್ರ ಇರಬೇಕಾಗಿದ್ದ ವಿವರಗಳು ಬಹಿರಂಗವಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಕಾರಣವನ್ನು ಕಳೆದ ಫೆಬ್ರುವರಿಯಲ್ಲಿ ಗುರುತಿಸಿ ಸುಲಕ್ಷ್ ಗೂಗಲ್ ಕಂಪೆನಿಗೆ ತಿಳಿಸಿದ್ದರು. ಕೂಡಲೇ ಗೂಗಲ್ ಸಮಸ್ಯೆಯನ್ನು ನಿವಾರಿಸಿಕೊಂಡಿತ್ತು.ಸುಲಕ್ಷ್ ಕೊಚ್ಚಿಯ ವಿವಿಡ್ರಿಯಲ್ ಸೊಲ್ಯೂಶನ್ಸ್ ಸಂಸ್ಥೆಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುಲಕ್ಷ್ ಗೂಗಲ್ ಜಾಹೀರಾತು ಸೇವೆಯ ಖಾಯಂ ಬಳಕೆದಾರ ಕೂಡ ಆಗಿದ್ದಾರೆ.
ಸಮಸ್ಯೆ ತೀರಾ ಹಳೆಯದಲ್ಲ. ಅದನ್ನು ಪತ್ತೆಹಚ್ಚಿದ ಕೂಡಲೆ ಬಗೆಹರಿಸಲು ಸಾಧ್ಯವಾಯಿತು ಎಂದು ಸುಲಕ್ಷ್ ತಿಳಿಸಿದ್ದಾರೆ. ತಮಗೆ ಮಾಡಿರುವ ಸಹಾಯಕ್ಕಾಗಿ ಗೂಗಲ್ ಸುಲಕ್ಷ್ರನ್ನು ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ ಸೇರಿಸಿದೆ. 5000ಡಾಲರ್(3.44 ಲಕ್ಷ ರೂಪಾಯಿ) ನಗದು ಬಹುಮಾನವನ್ನು ಕೂಡ ಗೂಗಲ್ ನೀಡಿ ಗೌರವಿಸಿದೆ.












