ಪ್ರಧಾನಿ ನರೇಂದ್ರ ಮೋದಿಯೇ ಭಾರತದ ದೊಡ್ಡ ಸಮಸ್ಯೆ: ಎಂ.ಕೆ.ಸ್ಟಾಲಿನ್

0
206

ಸನ್ಮಾರ್ಗ ವಾರ್ತೆ

ಪ್ರಸ್ತುತ ಭಾರತದ ದೊಡ್ಡ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ವಾಗ್ದಾಳಿ ನಡೆಸಿದರು.

ಶ್ರೀಪೆರಂಬದೂರಿನ ಡಿಎಂಕೆ ಅಭ್ಯರ್ಥಿ ಟಿ ಆರ್ ಬಾಲು ಮತ್ತು ಕಾಂಚೀಪುರಂ ಅಭ್ಯರ್ಥಿ ಜಿ ಸೆಲ್ವಂ ಪರ ಪ್ರಚಾರದ ವೇಳೆ ಚೆನ್ನೈ ಬಳಿಯ ಪಡಪ್ಪೈ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, “ಪ್ರಧಾನಿ ಮೋದಿ ಅವರು ರಾಜ್ಯಗಳಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ” ಎಂದು ಆರೋಪಿಸಿದರು.

“12 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ಪ್ರಧಾನಿಯಾದ ನಂತರ ರಾಜ್ಯಗಳನ್ನು ಇಷ್ಟಪಡುವುದಿಲ್ಲ. ಪ್ರಧಾನಿಯಾದಾಗ ಹೇಳಿದ್ದೇನು, ಈಗ ಮಾಡುತ್ತಿರುವುದೇನು” ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

ಮೋದಿ ಪ್ರಧಾನಿಯಾದಾಗ ಹೇಳಿರುವುದೇನು? ಅವರು ಸಿಎಂ ಆಗಿದ್ದರಿಂದ ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ರಾಷ್ಟ್ರದ ಸಮಸ್ಯೆಗಳ ಬಗ್ಗೆಯೂ ತಿಳಿದಿದ್ದರು. ಆದರೆ ಈಗ ಅವರು ಏನು ಮಾಡುತ್ತಿದ್ದಾರೆ. ರಾಜ್ಯಪಾಲರನ್ನು ಬಳಸಿಕೊಂಡು ಪ್ರಧಾನಿ ಮೋದಿ ಅವರು ರಾಜ್ಯಗಳಿಗೆ ತೊಂದರೆ ಮಾಡುತ್ತಿದ್ದಾರೆ. ಇಡೀ ರಾಷ್ಟ್ರಕ್ಕೆ ಮೋದಿಯೇ ದೊಡ್ಡ ಸಮಸ್ಯೆ” ಎಂದು ಸಿಡಿಮಿಡಿಗೊಂಡರು.

“ಮೋದಿ ಆಡಳಿತದಲ್ಲಿ ಜನರ ಬದುಕು ದುಸ್ತರವಾಗಿದೆ” ಎಂದು ಹೇಳಿದ ಸ್ಟಾಲಿನ್, “ಇಂತಹ ಉನ್ನತ ಸ್ಥಾನದಲ್ಲಿರುವ ಮೋದಿಯವರು ಒಡೆದು ಆಳುವ ರಾಜಕಾರಣ ಮಾಡುತ್ತಿದ್ದಾರೆ. ಮೋದಿ ಎಂದಾದರೂ ಜನರ ಕಲ್ಯಾಣಕ್ಕಾಗಿ ಸಮಯ ನೀಡಿದ್ದಾರಾ? ಜನರಿಗೆ ಸಮಸ್ಯೆಗಳಿರುತ್ತವೆ ಆದರೆ ಮೋದಿಯವರ ಆಡಳಿತದಲ್ಲಿ ಜನರ ಇಡೀ ಜೀವನವೇ ಸಮಸ್ಯೆಯಾಗಿದೆ” ಎಂದು ವಾಗ್ದಾಳಿ ಮಾಡಿದರು.