ಚುನಾವಣಾ ಬಾಂಡ್‌ ಯೋಜನೆಗೆ ಜನಸಾಮಾನ್ಯರ ತೆರಿಗೆಯ ’14 ಕೋಟಿ ರೂ.’ ವ್ಯಯಿಸಿದ್ದ ಮೋದಿ ಸರಕಾರ!

0
101

ಸನ್ಮಾರ್ಗ ವಾರ್ತೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಚುನಾವಣಾ ಬಾಂಡ್‌ಗಳನ್ನು ಮುದ್ರಿಸಲು, ನಿರ್ವಹಿಸಲು ತೆರಿಗೆದಾರರ ಹಣದಿಂದ 14 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂಬ ಸ್ಪೋಟಕ ಮಾಹಿತಿ ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.

ನಿವೃತ್ತ ಕಮೋಡೋರ್(ಜಲಸೇನಾ ಅಧಿಕಾರಿ) ಲೋಕೇಶ್ ಬಾತ್ರಾ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಆರ್‌ಟಿಐ ಈ ಮಹತ್ವದ ಮಾಹಿತಿಯನ್ನು ನೀಡಿದೆ.

ಒಟ್ಟು 30 ಹಂತಗಳಲ್ಲಿ 12,04,59,043 ರೂಪಾಯಿಗಳನ್ನು ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ ಕಮಿಷನ್ ಆಗಿ ವಿಧಿಸಲಾಗಿದೆ ಮತ್ತು ಬಾಂಡ್‌ಗಳ ಮುದ್ರಣ ವೆಚ್ಚಕ್ಕಾಗಿ 1,93,73,604 ರೂ.ವ್ಯಯಿಸಲಾಗಿದೆ. ಕಮಿಷನ್‌ ಮೊತ್ತವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲು ಮತ್ತು ನಿರ್ವಹಿಸಲು ವಿಧಿಸುವ ಹಣವನ್ನು ಸೂಚಿಸುತ್ತದೆ. ಇದಲ್ಲದೆ ಮಾಸ್ಕ್-ಎ ಪ್ರಿಂಟ್ ಭದ್ರತೆಯನ್ನು ಪರಿಶೀಲಿಸುವ ಸಾಧನಕ್ಕಾಗಿ ಹೆಚ್ಚುವರಿ 6,720 ರೂ.ಗಳನ್ನು ವಿಧಿಸಲಾಗಿದೆ ಎಂದು ಆರ್ಥಿಕ ವ್ಯವಹಾರಗಳ ಸಚಿವಾಲಯ ಆರ್‌ಟಿಐ ಮೂಲಕ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.

ನಾಸಿಕ್ ಮೂಲದ ಇಂಡಿಯಾ ಸೆಕ್ಯುರಿಟಿ ಪ್ರೆಸ್ ಈ ಬಾಂಡ್‌ಗಳನ್ನು ಮುದ್ರಿಸುವ ಕಾರ್ಯವನ್ನು ಮಾಡಿದೆ. 1,000, ರೂ, 10,000, ರೂ 1 ಲಕ್ಷ, ರೂ 10 ಲಕ್ಷ ಮತ್ತು ರೂ 1 ಕೋಟಿ ಮೌಲ್ಯದ ಬಾಂಡ್‌ಗಳನ್ನು ಮುದ್ರಿಸಿದೆ.

ಮುದ್ರಿತವಾದ ಚುನಾವಣಾ ಬಾಂಡ್‌ಗಳು

1,000 ರೂ.ಗಳ 2,65,000 ಚುನಾವಣಾ ಬಾಂಡ್‌ಗಳು
10,000 ರೂ.ಗಳ 2,65,000 ಬಾಂಡ್‌ಗಳು
1 ಲಕ್ಷ ಮೌಲ್ಯದ 93,000 ಚುನಾವಣಾ ಬಾಂಡ್‌ಗಳು
10 ಲಕ್ಷ ಮೌಲ್ಯದ 26,000 ಬಾಂಡ್‌ಗಳು
1 ಕೋಟಿಯ 33,000 ಬಾಂಡ್‌ಗಳು

ಈ ಬಾಂಡ್‌ಗಳ ಮುದ್ರಣ ಮತ್ತು ನಿರ್ವಹಣೆಯ ವೆಚ್ಚವನ್ನು ದಾನಿಗಳು ಅಥವಾ ಚುನಾವಣಾ ಬಾಂಡ್‌ ಸ್ವೀಕರಿಸುವವರು ಭರಿಸುವುದಿಲ್ಲ, ಅದು ಸರ್ಕಾರ ಅಂದರೆ ತೆರಿಗೆದಾರರ ಹಣದಿಂದ ಭರಿಸಲಾಗಿದೆ. ಚುನಾವಣಾ ಬಾಂಡ್‌ ಯೋಜನೆಯಲ್ಲಿ, ಬಾಂಡ್ ಖರೀದಿಸುವ ದಾನಿಗಳು ಎಸ್‌ಬಿಐಗೆ ಯಾವುದೇ ಸೇವಾ ಶುಲ್ಕ (ಕಮಿಷನ್) ಮತ್ತು ಬಾಂಡ್‌ಗಳ ಮುದ್ರಣ ವೆಚ್ಚವನ್ನು ಪಾವತಿಸಬೇಕಾಗಿಲ್ಲ, ಸರ್ಕಾರ ಅಥವಾ ಅಂತಿಮವಾಗಿ ತೆರಿಗೆ ಪಾವತಿದಾರರು ಈ ವೆಚ್ಚವನ್ನು ಭರಿಸುತ್ತಾರೆ ಎಂದು ಬಾತ್ರಾ ಹೇಳಿದ್ದಾರೆ.

ಇದಲ್ಲದೆ ತೆರಿಗೆ ಪಾವತಿದಾರರ ವೆಚ್ಚದಲ್ಲಿ ರಾಜಕೀಯ ಪಕ್ಷಗಳ ತೆರಿಗೆ-ಮುಕ್ತ ಪ್ರಯೋಜನಗಳಿಗಾಗಿ ಚುನಾವಣಾ ಬಾಂಡ್‌ ಯೋಜನೆಯನ್ನು ನಿರ್ವಹಿಸಲು ಸರ್ಕಾರಿ ಯಂತ್ರೋಪಕರಣಗಳು ಮತ್ತು ಮಾನವ ಶಕ್ತಿಯ ಬಳಕೆಗೆ ಭಾರಿ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ಲೋಕೇಶ್ ಬಾತ್ರಾ ಅವರು ಆರೋಪಿಸಿದ್ದಾರೆ.

ಚುನಾವಣಾ ಬಾಂಡ್‌ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದ ನಂತರ ನರೇಂದ್ರ ಮೋದಿ ಸರ್ಕಾರವು 2024ರಲ್ಲಿ ತಲಾ 1 ಕೋಟಿ ರೂಪಾಯಿಗಳ 8,350 ಚುನಾವಣಾ ಬಾಂಡ್‌ಗಳನ್ನು ಮುದ್ರಿಸಿದೆ ಎಂದು ಬಾತ್ರಾ ಅವರು ಈ ಹಿಂದೆ ಸಲ್ಲಿಸಿದ ಆರ್‌ಟಿಐ ಮಾಹಿತಿ ಬಹಿರಂಗಪಡಿಸಿದೆ. ಒಂದು ಎಲೆಕ್ಟೋರಲ್ ಬಾಂಡ್ ಮುದ್ರಣದ ವೆಚ್ಚವು 25 ರೂಪಾಯಿಯಾಗಿದೆ, ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚುವರಿ 6% ಜಿಎಸ್‌ಟಿಯನ್ನು ವಿಧಿಸುತ್ತವೆ.

ಫೆಬ್ರವರಿ 15ರಂದು ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಇದು ಅಸಂವಿಧಾನಿಕ ಮತ್ತು ಈ ಮಾಹಿತಿಯ ಮತದಾರರ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕರೆದಿರುವ ನ್ಯಾಯಾಲಯವು, ಬಾಂಡ್‌ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಎಸ್‌ಬಿಐಗೆ ಸೂಚಿಸಿತ್ತು. ಆದರೆ ಎಸ್‌ಬಿಐ ಚುನಾವಣಾ ಬಾಂಡ್‌ ಕುರಿತ ಮಾಹಿತಿ ನೀಡಲು ಕಾಲಾವಕಾಶವನ್ನು ಕೋರಿತ್ತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಸ್‌ಬಿಐಗೆ ಚುನಾವಣಾ ಬಾಂಡ್‌ ಕುರಿತು ಮಾಹಿತಿಯನ್ನು ನೀಡುವಂತೆ ಸುಪ್ರೀಂಕೋರ್ಟ್‌ ಖಡಕ್‌ ಆಗಿ ಸೂಚಿಸಿತ್ತು. ಆ ಬಳಿಕ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದ್ದು, ಬಿಜೆಪಿ ಚುನಾವಣಾ ಬಾಂಡ್‌ ಯೋಜನೆಯಿಂದ ಅತಿ ಹೆಚ್ಚು ಪ್ರಯೋಜನ ಪಡೆದುಕೊಂಡಿದೆ ಎನ್ನುವುದು ಬಯಲಾಗಿತ್ತು.

LEAVE A REPLY

Please enter your comment!
Please enter your name here