ಆ‌ರ್.ಟಿ.ಇ ಕುರಿತು “ಶಾಲಾ ಸಮೀಕ್ಷಾ ವರದಿ” ಬಿಡುಗಡೆಗೊಳಿಸಿದ ಎಸ್‌.ಐ.ಓ

0
243

ಸನ್ಕಾರ್ಗ ವಾರ್ತೆ

ಬೆಂಗಳೂರು: “ಶಾಸಕರ ಭವನ”ದಲ್ಲಿ ಇತ್ತೀಚೆಗೆ ಎಸ್.ಐ.ಓ ಕರ್ನಾಟಕದ ವತಿಯಿಂದ ಪ್ರಕಟವಾದ “ಶಾಲಾ ಸಮೀಕ್ಷಾ ವರದಿಯನ್ನು ಖ್ಯಾತ ಶಿಕ್ಷಣ ತಜ್ಞರಾದ ಪ್ರೊ. ನಿರಂಜನಾರಾಧ್ಯ ವಿ.ಪಿ ಮತ್ತು ವಿಧಾನಪರಿಷತ್ ಸದಸ್ಯರಾದ ನಸೀ‌ರ್ ಅಹ್ಮದ್ ಹಾಗೂ ಸಿ. ಇ. ಆರ್. ಟಿ ಸಂಸ್ಥೆಯ ನಿರ್ದೇಶಕರಾದ ರೋಶನ್ ಮೊಹಿದ್ದೀನ್. ಎಸ್.ಐ.ಓ ಕರ್ನಾಟಕದ ರಾಜ್ಯಾಧ್ಯಕ್ಷರಾದ ಜೀಶಾನ್ ಆಖಿಲ್. ಕಾರ್ಯದರ್ಶಿ ಮಹಮ್ಮದ್ ಪೀ‌ರ್ ಲಟಗೇರಿ ರವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಎಸ್.ಐ.ಓ (SIO) ಕರ್ನಾಟಕದ ಪದಾಧಿಕಾರಿಗಳು, ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಶಿಕ್ಷಣ ಹಕ್ಕು ಕಾಯ್ದೆ (RTE) 2009 ರ ಮಾನದಂಡಗಳಿಗೆ ಸಂಬಂಧಿಸಿದಂತೆ ರಾಜ್ಯದ ಶಾಲೆಗಳ ಪ್ರಸ್ತುತ ವಸ್ತುಸ್ಥಿತಿ ತಿಳಿಯಲು ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಶಿಫಾರಸು/ ಸಲಹೆಗಳನ್ನು ನೀಡುವ ಉದ್ದೇಶದಿಂದ ಎಸ್.ಐ.ಓ ಕರ್ನಾಟಕವು ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಕೇಂದ್ರದ ಸಹಯೋಗದಲ್ಲಿ ಶಾಲಾ ಸಮೀಕ್ಷೆಯನ್ನು ನಡೆಸಿತ್ತು, ಅದರ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ವಿವಿಧ ಆಯಾಮಗಳಲ್ಲಿ ಶಿಕ್ಷಣ ತಜ್ಞರು/ವಿಷಯ ಪರಿಣಿತರಿಂದ ಲೇಖನಗಳನ್ನು ಒಳಗೊಂಡ “ಶಾಲಾ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಿದೆ.

ಸಮೀಕ್ಷೆಯ ವಿಶಿಷ್ಟತೆ

ರಾಜ್ಯದ 19 ಜಿಲ್ಲೆಗಳಲ್ಲಿ ಒಟ್ಟು 151 ಶಾಲೆಗಳ ಸಮೀಕ್ಷೆ ನಡೆಸಿದೆ, ಇದರಲ್ಲಿ 103- ನಗರ ಪ್ರದೇಶದ ಶಾಲೆಗಳು, 48- ಗ್ರಾಮೀಣ ಭಾಗದ ಶಾಲೆಗಳು, 119- ಸರ್ಕಾರಿ ಶಾಲೆಗಳು, 32- ಖಾಸಗಿ ಶಾಲೆಗಳು, 73- ಕನ್ನಡ ಮಾಧ್ಯಮ ಶಾಲೆಗಳು, 50- ಉರ್ದು ಮಾಧ್ಯಮದ ಶಾಲೆಗಳು, 21- ಇಂಗ್ಲೀಷ್ ಮಾಧ್ಯಮದ ಶಾಲೆಗಳು, 06- ಮರಾಠಿ ಮಾಧ್ಯಮದ ಶಾಲೆಗಳು, 01- ತೆಲುಗು ಮಾಧ್ಯಮದ ಶಾಲೆಗಳು ಒಳಗೊಂಡಿದೆ.

”ಶಾಲಾ ಸಮೀಕ್ಷಾ ವರದಿ”ಯ ಪ್ರಮುಖ ಅಂಶಗಳು.

1) 151 ಶಾಲೆಗಳಲ್ಲಿ 270 ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದಾರೆ, ಪ್ರತಿಯೊಂದು ಶಾಲೆಯಲ್ಲಿ ಕನಿಷ್ಠ 2 ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ ಇದರಲ್ಲಿ ಬಹುತೇಕ ವಲಸೆ ಮತ್ತು ಕಾರ್ಮಿಕರ ಮಕ್ಕಳಾಗಿದ್ದಾರೆ.

2) 151 ಶಾಲೆಗಳಲ್ಲಿ ಕೇವಲ 70 ಶಾಲೆಗಳಲ್ಲಿ ಮಾತ್ರ ಶುದ್ಧ ಕುಡಿಯುವ, ನೀರಿನ ಸೌಲಭ್ಯವಿದೆ, 72 ಶಾಲೆಗಳು (24/7) ಸಾರ್ವಜನಿಕ ನೀರಿನ ವ್ಯವಸ್ಥೆಯ ಮೇಲೆಯೇ ಅವಲಂಬಿತವಿದೆ,09 ಶಾಲೆಗಳಲ್ಲಿ ಯಾವುದೇ ರೀತಿಯ ನೀರಿನ ಸೌಲಭ್ಯವಿಲ್ಲ.

3) 151 ಶಾಲೆಗಳಲ್ಲಿ 117 ರಲ್ಲಿ ಮಾತ್ರ ಪ್ರತ್ಯೇಕ ಶೌಚಾಲಯವಿದೆ, 34 ಶಾಲೆಗಳಲ್ಲಿ ಕೇವಲ ಬಾಲಕಿಯರಿಗೆ ಮಾತ್ರ ಶೌಚಾಲಯವಿದೆ, ಬಹುತೇಕ ಶೌಚಾಲಯಗಳು ತೀರಾ ಕಳಪೆ ಮಟ್ಟದಲ್ಲಿದ್ದು, ಬಾಲಕರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ.

4) 151 ಶಾಲೆಗಳಲ್ಲಿ 56 ಶಾಲೆಗಳಿಗೆ ಇಲಾಖೆ ವತಿಯಿಂದ ಬೋಧನಾ-ಕಲಿಕಾ ಉಪಕರಣ ಒದಗಿಸಲಾಗಿದೆ, ಉಳಿದ 95 ಶಾಲೆಗಳಲ್ಲಿ 75 ಶಾಲೆಯಲ್ಲಿ ಶಿಕ್ಷಕರೇ ತಮ್ಮ ಸ್ವಂತ ಹಣದಿಂದ ಬೋಧನಾ-ಕಲಿಕಾ ಉಪಕರಣವನ್ನು ಖರೀದಿಸಿದ್ದಾರೆ, ಇದರಲ್ಲಿ 20 ಶಾಲೆಯಲ್ಲಿ ಶಿಕ್ಷಕರು ಬೋಧನಾ-ಕಲಿಕಾ ಉಪಕರಣವನ್ನು ಬಳಸದೇ ಪಾಠ ಮಾಡುತ್ತಿದ್ದಾರೆ.

3 ರಲ್ಲಿ 1 ಶಾಲೆಗೆ ಮಾತ್ರ ಇಲಾಖೆಯಿಂದ ಶಿಕ್ಷಕರಿಗೆ ಬೋಧನಾ ಕಲಿಕಾ ಉಪಕರಣವನ್ನು ನೀಡಲಾಗುತ್ತಿದೆ, ಈ ಹಿಂದೆ ಇಲಾಖೆಯೂ ಬೋಧನೋಪಕರಣ ಖರೀದಿಗಾಗಿ ಶಿಕ್ಷಕರಿಗೆ ತಿಂಗಳಿಗೆ 500 ರೂಪಾಯಿಯನ್ನು ನೀಡುತ್ತಿತ್ತು, ಇದೀಗ ಅದು ಸ್ಥಗಿತಗೊಂಡಿದೆ.

ಶಿಫಾರಸುಗಳು:

1) ಆರ್ಟಿಇ 2009 ಅನ್ನು ಮತ್ತು ಕಾಯ್ದೆಯ ಎಲ್ಲ ಸೆಕ್ಷನ್ ಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸಲಹಾ ಪರಿಷತ್ತನ್ನು ಸಶಕ್ತಗೊಳಿಸಿ, ಸಮಪರ್ಕವಾಗಿ ಜಾರಿಗೆ ತರಬೇಕು

2) 6 ರಿಂದ 14 ವರ್ಷದ ವರೆಗೆ ಇರುವ ಇರುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಹುಟ್ಟಿನಿಂದ 18 ವರ್ಷದ ವರೆಗೆ ವಿಸ್ತರಿಸಬೇಕು, ಬಾಲ್ಯ ಪೂರ್ವ ಆರೈಕೆ, ಪೌಷ್ಠಿಕಾಂಶ ಮತ್ತು ಸಾಮಾಜೀಕರಣಗೊಳಿಸುವ ಪ್ರಕ್ರಿಯೆಯೂ ಕಾಯ್ದೆಯ ಭಾಗವಾಗಬೇಕು, ಅದಕ್ಕಾಗಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.

3) ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಮತ್ತು ಬಲಪಡಿಸಲು ವಾರ್ಷಿಕ ಆಯವ್ಯಯದಲ್ಲಿ ಶಿಕ್ಷಣಕ್ಕೆ ಒಟ್ಟು ಅನುದಾನದಲ್ಲಿ ಶೇ 20% ಅನುದಾನವನ್ನು ಮೀಸಲಿಡಬೇಕು.