ಫ್ರಿಡ್ಜ್‌ನಲ್ಲಿ ಗೋಮಾಂಸ; ಮಧ್ಯಪ್ರದೇಶದಲ್ಲಿ 11 ಮನೆಗಳನ್ನು ಕೆಡವಿದ ಪೊಲೀಸರು!

0
368

ಸನ್ಮಾರ್ಗ ವಾರ್ತೆ

ಫ್ರಿಡ್ಜ್‌ನಲ್ಲಿ ಗೋಮಾಂಸ ಪತ್ತೆಯಾದ ಬಳಿಕ 11 ಮನೆಗಳನ್ನು ಪೊಲೀಸರು ಕೆಡವಿದ ಘಟನೆ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಮಂಡ್ಲಾದಲ್ಲಿ ನಡೆದಿದೆ.

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧ ಕ್ರಮದ ಭಾಗವಾಗಿ 11 ಜನರು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ್ದ ಮನೆಗಳನ್ನು ನೆಲಸಮಗೊಳಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೈನ್‌ಪುರದ ಭೈನ್‌ವಾಹಿ ಪ್ರದೇಶದಲ್ಲಿ ವಧೆ ಮಾಡಲೆಂದು ತಂದಿರಿಸಲಾಗಿದ್ದ ಅಧಿಕ ಸಂಖ್ಯೆಯ ಹಸುಗಳನ್ನು ಪಡಿಸಿಕೊಳ್ಳಲಾಗಿದೆ ಎಂಬ ಸುಳಿವು ದೊರೆತ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡ್ಲಾ ಪೊಲೀಸ್ ವರಿಷ್ಠಾಧಿಕಾರಿ ರಜತ್ ಸಕ್ಲೇಚಾ ಪಿಟಿಐಗೆ ಹೇಳಿದ್ದಾರೆ.

“ಮಾಹಿತಿ ದೊರೆತ ಬಳಿಕ ತಂಡವು ಅಲ್ಲಿಗೆ ಧಾವಿಸಿದೆ. ಆರೋಪಿಗಳ ಹಿತ್ತಲಿನಲ್ಲಿ ಕಟ್ಟಿಹಾಕಲಾಗಿದ್ದ 150 ಹಸುಗಳನ್ನು ನಾವು ಪತ್ತೆ ಹಚ್ಚಿದ್ದೇವೆ. ಎಲ್ಲಾ 11 ಆರೋಪಿಗಳ ಮನೆಗಳ ಫ್ರಿಡ್ಜ್‌ನಲ್ಲಿದ್ದ ದನದ ಮಾಂಸವನ್ನು ನಾವು ವಶಪಡಿಸಿಕೊಂಡಿದ್ದೇವೆ. ಕೊಠಡಿಯಲ್ಲಿ ದನದ ಕೊಬ್ಬು, ದನದ ಚರ್ಮ, ಮೂಳೆಗಳು ಕೂಡಾ ಪತ್ತೆಯಾಗಿದೆ” ಎಂದು ರಜತ್ ಸಕ್ಲೇಚಾ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಸರ್ಕಾರಿ ಪಶುವೈದ್ಯರು ವಶಪಡಿಸಿಕೊಂಡ ಮಾಂಸವು ದನದ ಮಾಂಸ ಎಂದು ದೃಢಪಡಿಸಿದ್ದಾರೆ. ದ್ವಿತೀಯ ಡಿಎನ್‌ಎ ವಿಶ್ಲೇಷಣೆಗಾಗಿ ನಾವು ಹೈದರಾಬಾದ್‌ಗೆ ಮಾದರಿಗಳನ್ನು ಕಳುಹಿಸಿದ್ದೇವೆ. 11 ಆರೋಪಿಗಳ ಮನೆಗಳು ಸರ್ಕಾರಿ ಭೂಮಿಯಲ್ಲಿರುವುದರಿಂದ ಅವುಗಳನ್ನು ನೆಲಸಮ ಮಾಡಲಾಗಿದೆ ಎಂದು ಎಸ್‌ಪಿ ಹೇಳಿದರು.

“ಶುಕ್ರವಾರ ರಾತ್ರಿ ಹಸುಗಳು ಮತ್ತು ದನದ ಮಾಂಸವನ್ನು ವಶಪಡಿಸಿಕೊಂಡ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು ಉಳಿದ 10 ಮಂದಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಆರೋಪಿಗಳೆಲ್ಲರೂ ಮುಸ್ಲಿಮರು” ಎಂದು ತಿಳಿಸಿದರು.

“150 ಹಸುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ. ಭೈನಸ್ವಾಹಿ ಪ್ರದೇಶವು ಕೆಲವು ಸಮಯದಿಂದ ಗೋವು ಕಳ್ಳಸಾಗಣೆಯ ಕೇಂದ್ರವಾಗಿದೆ. ಗೋ ಹತ್ಯೆ ಮಾಡಿದರೆ ಮಧ್ಯಪ್ರದೇಶದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ” ಎಂದು ಸಕ್ಲೇಚಾ ಹೇಳಿದರು.

ಇನ್ನು ಪೊಲೀಸರ ಈ ಕ್ರಮಕ್ಕೆ ಖಂಡನೆ ವ್ಯಕ್ತವಾಗಿದೆ. ಈ ಸುದ್ದಿಯನ್ನು ಹಂಚಿಕೊಂಡಿರುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್, “ಇದು ಜಂಗಲ್ (ಕಾಡು) ಫ್ಯಾಸಿಸ್ಟ್ ಆಳ್ವಿಕೆ! ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ” ಎಂದು ಹೇಳಿದ್ದಾರೆ.

ಸುದ್ದಿಗೆ ಕಾಮೆಂಟ್ ಮಾಡಿರುವ ನೆಟ್ಟಿಗರೊಬ್ಬರು, “ಗೋಮಾಂಸ ತಿನ್ನುವ ಮಹಿಳೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದರೆ ಏನು ಶಿಕ್ಷೆ. ನಾನು ಪ್ರಧಾನಿ ಪರವಾಗಿ ಕೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.

“ಮೊದಲನೆಯದಾಗಿ ನಮ್ಮ ದೇಶ ಸಸ್ಯಾಹಾರಿ ದೇಶವಲ್ಲ. ಎರಡನೆಯದಾಗಿ ನಮ್ಮ ದೇಶದಲ್ಲಿ ದನದ ಮಾಂಸ ತಿನ್ನುವುದು ಬ್ಯಾನ್ ಆಗಿಲ್ಲ. ಮೂರನೆಯದಾಗಿ ಗೋ ಹತ್ಯೆ ಮಾತ್ರ ನಿಷೇಧವಾಗಿರುವುದು. ನಾಲ್ಕನೆಯದಾಗಿ ಭಾರತ ಎರಡನೇ ಅತೀ ದೊಡ್ಡ ಗೋ ಮಾಂಸ ರಫ್ತು ಮಾಡುವ ದೇಶ. ಅಷ್ಟಕ್ಕೂ ಫ್ರಿಡ್ಜ್‌ನಲ್ಲಿದದ್ದು ಗೋಮಾಂಸವೇ ಎನ್ನುವುದಕ್ಕೆ ಸಾಕ್ಷಿ ಕೇಳಬೇಕಾಗುತ್ತದೆ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

https://x.com/pbhushan1/status/1802059135229313195?t=RWl4cZs0zdNlKYJUroClbg&s=19