ರಾಯ್‌ ಬರೇಲಿ ಉಳಿಸಿಕೊಂಡ ರಾಹುಲ್ ಗಾಂಧಿ; ವಯನಾಡ್‌ನಿಂದ ಪ್ರಿಯಾಂಕಾ ಸ್ಪರ್ಧೆ: ಗೆದ್ದರೆ ಸಂಸತ್‌ನಲ್ಲಿ ಗಾಂಧಿ ಕುಟುಂಬದ ಮೂವರು

0
365

ಸನ್ಮಾರ್ಗ ವಾರ್ತೆ

ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಯ್‌ಬರೇಲಿಯನ್ನು ಅಣ್ಣ ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ, ಈಗ ವಯನಾಡ್ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಗೆ ಅಣಿಯಾಗುವ ಮೂಲಕ ತಮ್ಮ ಚೊಚ್ಚಲ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ.

ಸಕ್ರಿಯ ರಾಜಕಾರಣಕ್ಕೆ 2019ರಲ್ಲೇ ಪದಾರ್ಪಣೆ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಎದುರಾಳಿ ಎಂದೇ ಬಿಂಬಿತವಾಗಿದ್ದರು. ನಂತರ ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರ ನಂತರ ಸ್ಪರ್ಧಿಸುವ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡವರು.

ಅಮೇಠಿಯಲ್ಲಿ ಸೋಲಿನ ಭೀತಿಯಲ್ಲಿದ್ದಾಗ ರಾಹುಲ್ ಗಾಂಧಿ ಕೈಹಿಡಿದ ಕ್ಷೇತ್ರ ವಯನಾಡ್. ಇದೇ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಅವರು ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಂತೂ ಭಾರೀ ಅಂತರದ ಗೆಲುವನ್ನು ಅಲ್ಲಿನ ಮತದಾರರು ರಾಹುಲ್‌ಗೆ ನೀಡಿದ್ದರು. ಎರಡು ಕ್ಷೇತ್ರಗಳಲ್ಲಿ ಒಂದನ್ನು ಉಳಿಸಿಕೊಳ್ಳುವ ಜರೂರು ಎದುರಾದಾಗ, ಪಕ್ಷದ ವರಿಷ್ಠರ ಸಭೆ ನಡೆಸಿ ರಾಯ್‌ ಬರೇಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದರು. ಇದರಿಂದಾಗಿ 52 ವರ್ಷದ ಪ್ರಿಯಾಂಕಾ ಅವರು ಚುನಾವಣಾ ರಾಜಕೀಯಕ್ಕೆ ಧುಮುಕುತ್ತಿದ್ದಾರೆ.

‘ನಾನೇನು ಭಯಗೊಂಡಿಲ್ಲ… ಬದಲಿಗೆ ವಯನಾಡ್ ಅನ್ನು ಪ್ರತಿನಿಧಿಸಲು ಸಂತೋಷವಾಗಿದೆ. ರಾಹುಲ್ ಅನುಪಸ್ಥಿತಿಯನ್ನು ಕ್ಷೇತ್ರದ ಜನರು ಎಂದೂ ಭಾವಿಸದಂತೆ ನಾನು ಕೆಲಸ ಮಾಡಬೇಕಿದೆ. ರಾಯ್‌ಬರೇಲಿಯಲ್ಲಿ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅಲ್ಲಿನ ಜನರೊಂದಿಗೆ ನನಗೆ ಉತ್ತಮ ಒಡನಾಟವಿದೆ. ಅದು ಎಂದಿಗೂ ಕೊನೆಯಾಗದು’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಉದ್ಯಮಿ ರಾಬರ್ಟ್ ವಾದ್ರಾ ಅವರನ್ನು ವರಿಸಿರುವ ಪ್ರಿಯಾಂಕಾ ಅವರು ಅಮೇಠಿಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಗಾಂಧಿ ಕುಟುಂಬದ ನಿಷ್ಠಾವಂತ ಕಿಶೋರಿ ಲಾಲ್ ಶರ್ಮಾ ಅವರನ್ನು ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಕಣಕ್ಕಿಳಿಸಲಾಗಿತ್ತು.

ವಯನಾಡ್‌ನಲ್ಲಿ ಪ್ರಿಯಾಂಕಾ ಗೆಲುವು ಸಾಧ್ಯವಾದರೆ, ಗಾಂಧಿ ಕುಟುಂಬ ಮೂವರ ಸಂಸತ್ತಿನಲ್ಲಿರಲಿದ್ದಾರೆ. ಇಂಥ ಸನ್ನಿವೇಶ ಇದೇ ಮೊದಲು. ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

“ಬಹಳಾ ಸಮಯಗಳ ನಂತರ ಅತ್ಯಂತ ಯಶಸ್ವಿ ಚುನಾವಣಾ ಪ್ರಚಾರವನ್ನು 2024ರಲ್ಲಿ ಕಾಂಗ್ರೆಸ್ ಕಂಡಿತು. ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಗಳಿಗೆ ಸರಿಯಾದ ತಿರಗೇಟು ನೀಡಲು ಪ್ರಿಯಾಂಕಾಗೆ ಮಾತ್ರ ಸಾಧ್ಯ ಎಂಬ ಮಾತುಗಳು ಕೇಳಿ ಬಂದಿದ್ದವು. ಮೀನು, ಮಾಂಸ, ಮಂಗಳ ಸೂತ್ರ ಆರೋಪಗಳಿಗೆ ಪ್ರಿಯಾಂಕಾ ತಿರುಗೇಟು ನೀಡಿದ್ದರು’ ಎಂದು ಲೇಖಕ ರಶೀದ್‌ ಕಿದ್ವಾಯಿ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ 99 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಆ ಮೂಲಕ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು 233 ಕ್ಷೇತ್ರಗಳನ್ನು ಗೆದ್ದುಕೊಂಡಿತು.