ಕೊಲ್ಕತ್ತಾ ರೈಲು ದುರಂತ; ಈದ್ ಆಚರಣೆ ಬಿಟ್ಟು ಗಾಯಾಳುಗಳಿಗೆ ನೆರವಾದ ಗ್ರಾಮಸ್ಥರು

0
319

ಸನ್ಮಾರ್ಗ ವಾರ್ತೆ

ಕೊಲ್ಕತ್ತಾ : ಫಝೂರ್ ರಹಮಾನ್ ಮತ್ತು ಅವರ ಸ್ನೇಹಿತರಿಗೆ ಈ ಬಾರಿಯ ಈದ್ ಅಲ್ ಅಝ್ ಹಾ ಹೆಚ್ಚು ವಿಧದಲ್ಲಿ ಅರ್ಥಪೂರ್ಣ ಆಚರಣೆಯಾಯಿತು.

ಡಾರ್ಜಿಲಿಂಗ್ ಜಿಲ್ಲೆಯ ಛೋಟಾ ನಿರ್ಮಲ್‌ಜೋತ್ ಗ್ರಾಮದ ಮಸೀದಿಯಲ್ಲಿ ಆಗಷ್ಟೇ ಕುಟುಂಬ ಹಾಗೂ ಸ್ನೇಹಿತರ ಜತೆಗೆ ಈದ್ ಪ್ರಾರ್ಥನೆ ಮುಗಿಸಿದ್ದ ಫಝೂರ್, ಹಬ್ಬ ಮತ್ತು ಆಚರಣೆಗೆ ಸಜ್ಜಾಗುತ್ತಿರುವಾಗಲೇ ಕೇಳಿಬಂದ ದೊಡ್ಡ ಸ್ಫೋಟದ ಸದ್ದು ಪ್ರತಿಯೊಬ್ಬರಿಗೂ ಆಘಾತ ತಂದಿತು. ಬೆಳಿಗ್ಗೆ 8ಕ್ಕೆ ಪ್ರಾರ್ಥನೆ ಆರಂಭಿಸಿದ್ದೆವು. ಪ್ರಾರ್ಥನೆ ಮುಗಿಯುತ್ತಿದ್ದಂತೆ ದೊಡ್ಡ ಸ್ಫೋಟದ ಸದ್ದು ಕೇಳಿಸಿತು ಎಂದು ಅವರು ನೆನಪಿಸಿಕೊಂಡರು.

ಆರಂಭಿಕ ಆಘಾತದ ಬಳಿಕ ತಿಳಿದು ಬಂದದ್ದು ರೈಲು ಹಳಿಯಲ್ಲಿ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ ಎನ್ನುವುದು. 8.55ಕ್ಕೆ ಅಲ್ಪದೂರವನ್ನು ನಡೆದುಕೊಂಡು ತಲುಪಿದಾಗ ಹಲವು ರೈಲು ಬೋಗಿಗಳು ಹಳಿತಪ್ಪಿದ್ದು ಗಮನಕ್ಕೆ ಬಂತು. ಅಗರ್ತಲದಿಂದ ಸೀಲ್ದಾಕ್ಸ್‌ಗೆ ಹೊರಟಿದ್ದ ಕಾಂಚನಜುಂಗ ಎಕ್ಸ್ ಪ್ರೆಸ್ ರೈಲಿಗೆ ಗೂಡ್ಸ್‌ ರೈಲಿನ ಹಿಂಬದಿ ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು.

ಬತ್ತದ ಗದ್ದೆಗಳನ್ನು ದಾಟಿ ಹಲವು ಮಂದಿ ಗ್ರಾಮಸ್ಥರು ಅವಘಡ ಸಂಭವಿಸಿದ ಸ್ಥಳಕ್ಕೆ ಧಾವಿಸಿದರು. ಘಟನಾ ಸ್ಥಳಕ್ಕೆ ತಲುಪಿದ ಮೊದಲಿಗರಲ್ಲಿ ಫಝೂರ್ ಕೂಡ ಒಬ್ಬರು. ಸಿಲಿಗುರಿ ಪಟ್ಟಣದಿಂದ 25 ಕಿಲೋಮೀಟರ್ ದೂರದ ಅಲ್ಪಸಂಖ್ಯಾತರ ಪ್ರಾಬಲ್ಯದ ಸ್ಥಳದಲ್ಲಿ ಸಂಭವಿಸಿದ ಈ ಕರಾಳ ದುರಂತಕ್ಕೆ ಗ್ರಾಮಸ್ಥರು ತಕ್ಷಣ ಸ್ಪಂದಿಸಿದರು. ದುರಂತದಲ್ಲಿ ಸಂತ್ರಸ್ತರಾದವರಿಗೆ ನೆರವು ನೀಡುವುದು ಮಾನವೀಯತೆಯ ಕರೆ ಎಂಬ ಭಾವನೆಯಿಂದ ಈದ್ ಆಚರಣೆ ಬಿಟ್ಟು ಎಲ್ಲರೂ ನೆರವಿನ ಹಸ್ತ ಚಾಚಿದರು.

“ಘಟನಾ ಸ್ಥಳ ಭಯಾನಕವಾಗಿತ್ತು… ಬೋಗಿಗಳು ಹಳಿ ತಪ್ಪಿದ್ದವು. ಕೆಲವರು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರು. ಕೆಲವರಿಗೆ ಭಾರೀ ರಕ್ತಸ್ರಾವ ಆಗುತ್ತಿತ್ತು. ಮಹಿಳೆಯರು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಇಂಥ ಪರಿಸ್ಥಿತಿಯನ್ನು ಹಿಂದೆಂದೂ ನೋಡಿರಲಿಲ್ಲ” ಎಂದು ಸ್ನೇಹಿತರ ಜತೆ ಗಾಯಾಳುಗಳನ್ನು ಸಾಗಿಸುವಲ್ಲಿ ನಿರತರಾಗಿದ್ದ ಫೈಝೂರ್ ವಿವರಿಸಿದರು.

ಹಲವು ಮಂದಿ ಗ್ರಾಮಸ್ಥರು ಸೇರಿದ್ದರು. ಗುಂಪುಗಳಾಗಿ ವಿಭಜಿಸಿಕೊಂಡು ರಕ್ಷಣಾ ಕಾರ್ಯದಲ್ಲಿ ನಿರತರಾದೆವು. ಕೆಲವರು ಗಾಯಾಳುಗಳನ್ನು ಅವಶೇಷಗಳ ಅಡಿಯಿಂದ ತೆಗೆಯುವಲ್ಲಿ ನಿರತರಾದರೆ, ಮತ್ತೆ ಕೆಲವರು ಲಗೇಜ್‌ಗಳನ್ನು ಸುರಕ್ಷಿತವಾಗಿ ತೆಗೆದರು. ಈ ಗೊಂದಲದಲ್ಲಿ ಲಗೇಜ್ ಕಾಣೆಯಾಗಬಾರದು ಎನ್ನುವುದು ನಮ್ಮ ಕಾಳಜಿಯಾಗಿತ್ತು ಎಂದು ಬಣ್ಣಿಸಿದರು.

ಪಾಶಿದೇವಾ ಠಾಣೆಯಿಂದ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಆಗಮಿಸುವವರೆಗೂ ಅಂದರೆ ಸುಮಾರು ಒಂದೂವರೆ ಗಂಟೆ ಕಾಲ ಗ್ರಾಮಸ್ಥರು ಲಗೇಜ್ ಗಳಿಗೆ ಕಾವಲು ನೀಡಿದರು. ಹಲವು ಮಂದಿ ಮಧ್ಯಾಹ್ನದವರೆಗೂ ಕಾಯುತ್ತಿದ್ದರು.

ನಮ್ಮ ಸಮುದಾಯಕ್ಕೆ ಇದು ವಿಶೇಷ ದಿನವಾಗಿದ್ದರೂ, ಇಂದು ಅದು ಎರಡನೇ ಆದ್ಯತೆಯಾಯಿತು. ಪ್ರಯಾಣಿಕರಿಗೆ ನೆರವಾಗುವುದು ಎಲ್ಲರಿಗೂ ಪ್ರಮುಖವಾಗಿತ್ತು. ಮಾನವೀಯತೆಯ ಕರೆಗೆ ನಾವು ಸ್ಪಂದಿಸಲೇಬೇಕಿತ್ತು ಎಂದು ಹಕೀಂ ಹೇಳಿದರು. ಕೆಲವರು ದೂರದಿಂದ ನೀರು ತಂದುಕೊಟ್ಟರೆ ಮತ್ತೆ ಕೆಲವರು ತಮಗೆ ತಿಳಿದಂತೆ ಪ್ರಥಮ ಚಿಕಿತ್ಸೆ ನೀಡಿ ನೆರವಾದರು.