ಕಲ್ಲಿಕೋಟೆ,ಮೇ 2: ತಮ್ಮ ವಿದ್ಯಾಭ್ಯಾಸ ಸಂಸ್ಥೆಗಳಲ್ಲಿ ಮುಖವಸ್ತ್ರ ಬೇಡ ಎಂದು ಎಂಇಎಸ್(ಮುಸ್ಲಿಂ ಎಜುಕೇಶನಲ್ ಸೊಸೈಟಿ) ಸಕ್ರ್ಯೂಲರ್ ಹೊರಡಿಸಿದ್ದನ್ನು ಸಮಸ್ತ ಅಧ್ಯಕ್ಷ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ತಳ್ಳಿ ಹಾಕಿದ್ದಾರೆ. ಧಾರ್ಮಿಕ ವಿಷಯದಲ್ಲಿ ಎಂಇಎಸ್ ಅಧ್ಯಕ್ಷ ಫಸಲ್ ಗಫೂರ್ ಅಭಿಪ್ರಾಯ ಹೇಳಬೇಕಾಗಿಲ್ಲ ಎಂದು ಮುತ್ತುಕೋಯ ತಂಙಳ್ ಹೇಳಿದರು. ಕಲ್ಲಿಕೋಟೆಯಲ್ಲಿ ನಡೆದ ಸಭೆಯ ನಂತರ ಅವರು ಪತ್ರಕರ್ತರಿಗೆ ಈ ರೀತಿ ಪ್ರತಿಕ್ರಿಯಿಸಿದರು.
ಸಲಫಿಸಂ ಬರುವ ಮೊದಲು ಇದ್ದ ವಸ್ತ್ರ ನಿಖಾಬ್(ಮುಖವಸ್ತ್ರ) ಆಗಿದ್ದು ಪ್ರವಾದಿವರ್ಯರ(ಸ) ಕಾಲಘಟ್ಟದಿಂದ ಇರುವ ವಸ್ತ್ರಧಾರಣೆ ರೀತಿಯಿದು. ಅನ್ಯಪುರುಷರನ್ನು ನೋಡುತ್ತಾರೆಂದಿದ್ದರೆ ಮಹಿಳೆಯರು ಕಡ್ಡಾಯವಾಗಿ ಅದನ್ನು ಧರಿಸಬೇಕೆಂದು ಅವರು ಹೇಳಿದರು. ಎಂಇಎಸ್ ಏನೇ ಹೇಳಲಿ. ಆದರೆ ಧಾರ್ಮಿಕ ವಿಷಯದಲ್ಲಿ ಅಭಿಪ್ರಾಯ ಹೇಳಬೇಕಾದವರಲ್ಲ. ಪ್ರತಿಯೊಬ್ಬರು ಅವರ ಸಂಸ್ಥೆಗಳಲ್ಲಿ ಅವರಿಗಿಷ್ಟವಿರುವುದನ್ನು ಜಾರಿಗೆ ತರಬಹುದು. ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ. ಭಾರತ ಒಂದು ದೇಶವಾಗಿದೆ. ಇಲ್ಲಿ ಸ್ವಾತಂತ್ರ್ಯವಿದೆ ಎಂದು ಅವರು ಹೇಳಿದರು. ಮುಸ್ಲಿಂ ವಿಶ್ವಾಸಿಗಳಾದ ಮಕ್ಕಳು ನಮ್ಮ ಜೊತೆಯಿದ್ದಾರೆ. ಅವರನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಧಾರ್ಮಿಕ ವಿಷಯದಲ್ಲಿ ಅಭಿಪ್ರಾಯ ಹೇಳಲು ಎಂಇಎಸ್ಗೆ ಅರ್ಹತೆಯಿಲ್ಲ. ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ನಾವು ಅವಕಾಶ ನೀಡುವುದಿಲ್ಲ ಎಂದು ತಂಙಳ್ ಹೇಳಿದರು.
ಮುಂದಿನ ಅಧ್ಯಯನ ವರ್ಷದಿಂದ ಎಂಇಎಸ್ ಕಾಲೇಜುಗಳಲ್ಲಿ ಮುಖ ವಸ್ತ್ರವನ್ನು ನಿಷೇಧಿಸಿ ಕಳೆದ ದಿವಸ ಸಕ್ರ್ಯೂಲರ್ ಹೊರಡಿಸಲಾಗಿತ್ತು. ಹೈಕೋರ್ಟು ತೀರ್ಪಿನ ಆಧಾರದಲ್ಲಿ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಎಂಇಎಸ್ ಅಧ್ಯಕ್ಷ ಡಾ. ಫಝಲ್ ಗಫೂರ್ ಹೇಳಿದ್ದರು. ಸಾರ್ವಜನಿಕ ಸಮಾಜದಲ್ಲಿ ಅಸ್ವೀಕಾರಾರ್ಹವಾದ ಉಡುಪಿನ ರೀತಿ ಧಾರ್ಮಿಕ ಆಚರಣೆ, ಆಧುನಿಕತೆಯ ಹೆಸರಿನಲ್ಲಾದರೂ ಒಪ್ಪಲು ಸಾಧ್ಯವಿಲ್ಲ ಎಂದು ಸಕ್ರ್ಯೂಲರ್ನಲ್ಲಿ ತಿಳಿಸಲಾಗಿತ್ತು. ಮುಖ ಮರೆಸಿ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗದಂತೆ ಅಧ್ಯಾಪಕರು ದೃಢಪಡಿಸಿಕೊಳ್ಳಬೇಕು. 2019-2020ರ ಅಧ್ಯಯನ ವರ್ಷದಿಂದ ಇದು ಜಾರಿಗೆ ಬರಲಿದೆ. ಯಾವುದೇ ವಿವಾದಕ್ಕೆ ಆಸ್ಪದ ನೀಡಬಾರದೆಂದು ಸಕ್ರ್ಯೂಲರ್ನಲ್ಲಿ ತಿಳಿಸಲಾಗಿತ್ತು. ಇದನ್ನು ವಿರೋಧಿಸಿ ಈಗ ಸಮಸ್ತ ರಂಗಪ್ರವೇಶಿಸಿದೆ.












