ಕೇರಳದಲ್ಲಿ ಐಎಸ್‍ನಿಂದ ಸ್ಫೋಟ ಸಂಚು; ತಮಿಳುನಾಡಿನಲ್ಲಿ ಮೂರು ಕಡೆ ಎನ್‍ಐಎ ದಾಳಿ

0
577

ಕೊಚ್ಚಿ,ಮೇ 2: ಕೇರಳದಲ್ಲಿ ಐಎಸ್ ಸ್ಫೋಟಕ್ಕೆ ಸಂಚು ಹೆಣೆದಿದೆ ಎಂದು ವರದಿಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸುರಕ್ಷಾ ಏಜೆನ್ಸಿ(ಎನ್‍ಐಎ) ತಮಿಳುನಾಡಿನ ಮೂರು ಕಡೆ ಮಿಂಚಿನ ದಾಳಿ ನಡೆಸಿತು. ಕರಯ್ಕಲ್, ಕುಂಭಕೋಣಂ, ರಾಮನಾಥಪುರಂಗಳಲ್ಲಿ ಕೊಚ್ಚಿಯಿಂದ ಹೋದ ಎನ್‍ಐಎ ತಂಡ ದಾಳಿ ನಡೆಸಿದೆ. ತೌಹೀದ್ ಜಮಾತ್ ಮುಂತಾದ ಸಂಘಟನೆಗಳ ಕಚೇರಿಗೆ ಎನ್‍ಐಎ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಕೇರಳದಲ್ಲಿ ಅತ್ಮಾಹುತಿ ದಾಳಿ ನಡೆಸಲು ಐಎಸ್ ಸಂಚು ನಡೆಸಿದೆ ಎಂದು ಪ್ರಕರಣದಲ್ಲಿ ಬಂಧಿತನಾದ ರಿಯಾಝ್ ಅಬೂಬಕರ್ ಹೇಳಿಕೆ ನೀಡಿದ್ದನು. ಇದರ ಬೆನ್ನಿಗೆ ತಮಿಳ್ನಾಡಿನ ಮೂರು ಕಡೆಗಳಿಗೆ ಎನ್‍ಐಎ ದಾಳಿ ಮಾಡಿದ್ದು ಕೆಲವು ಪ್ರಧಾನ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಪಾಲಕ್ಕಾಡ್ ಮುದಲಮಡದ ರಿಯಾಝ್ ತಮಿಳ್ನಾಡಿನ ಸಂಘಟನೆಗಳೊಂದಿಗೆ ಸಂಬಂಧ ಇರಿಸಿಕೊಂಡಿದ್ದಾನೆ ಎಂದು ಎನ್‍ಐಎ ದೃಢಪಡಿಸಿದೆ. ತಮಿಳ್ನಾಡಿನ ವ್ಯಕ್ತಿಗಳೊಂದಿಗೆ ರಿಯಾಝ್ ಆನ್‍ಲೈನ್ ಚ್ಯಾಟ್ ಮಾಡುತ್ತಿದ್ದ. ಮಾತ್ರವಲ್ಲದೇ ಸ್ಫೋಟ ನಡೆಸಲು ಅವಶ್ಯಕವಾದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಲು ರಿಯಾಝ್‍ನ್ನೊಳಗೊಂಡ ತಂಡ ಯತ್ನಿಸಿತ್ತು ಎನ್ನಲಾಗಿದೆ. ಈ ವಿವರಗಳು ಮತ್ತು ಶ್ರೀಲಂಕಾ ಸ್ಫೋಟದ ಹಿನ್ನೆಲೆಯಲ್ಲಿ ತಮಿಳ್ನಾಡು ಕೇಂದ್ರೀಕರಿಸಿ ಎನ್‍ಐಎ ದಾಳಿ ನಡೆಸಿದೆ.