ಅಲ್ಲಾಹನ ಮೇಲೆ ಭರವಸೆ

0
83

ಸನ್ಮಾರ್ಗ ವಾರ್ತೆ

✍️ ಖದೀಜ ನುಸ್ರತ್

ತವಕ್ಕಲ್ ಎಂದರೆ ನಮ್ಮ ಎಲ್ಲಾ ವ್ಯವಹಾರ ಹಾಗೂ ಯೋಜನೆಗಳಲ್ಲಿ ಅಲ್ಲಾಹನ ಮೇಲೆ ಸಂಪೂರ್ಣ ನಂಬಿಕೆಯಿಟ್ಟು ಜೀವನದ ಎಲ್ಲಾ ಘಟ್ಟಗಳಲ್ಲಿಯೂ ಅವನ ಅಂತಿಮ ತೀರ್ಮಾನದಲ್ಲಿ ಭರವಸೆಯಿಡುವುದಾಗಿದೆ.

ಅಲ್ಲಾಹನ ಮೇಲಿನ ಭರವಸೆ ದುರ್ಬಲವಾಗುವಾಗ ಮನುಷ್ಯನಿಗೆ ಇಹಲೋಕದ ಚಿಂತೆ ಹೆಚ್ಚಾಗುತ್ತದೆ. ಇದು ನಿಮ್ಮ ವ್ಯವಹಾರಗಳನ್ನು ನೀವು ಯಾವ ರೀತಿ ನೋಡುತ್ತೀರಿ, ನಿಮ್ಮ ಭಾವನೆಗಳನ್ನು ಯಾವ ರೀತಿ ನಿಯಂತ್ರಿಸುತ್ತೀರಿ, ವಿಷಯಗಳನ್ನು ಯಾವ ರೀತಿ ಗ್ರಹಿಸುತ್ತೀರಿ, ಸಂತೋಷ, ದುಃಖ, ಲಾಭ, ನಷ್ಟಗಳಲ್ಲಿ ಅಂತಿಮವಾಗಿ ಯಾರನ್ನು ಅವಲಂಬಿಸುತ್ತೀರಿ ಎಂದು ಅರಿಯುವ ಮಾನಸಿಕ ಸ್ಥಿತಿಯಾಗಿದೆ. ಅಲ್ಲಾಹನ ಮೇಲೆ ಸಂಪೂರ್ಣ ಭರವಸೆಯಿಡುವುದು ಸತ್ಯವಿಶ್ವಾಸಿಗಳ ಲಕ್ಷಣವಾಗಿದೆ.

“ನಮಗೆ ಅಲ್ಲಾಹ್ ಸಾಕು ಮತ್ತು ಅವನೇ ಅತ್ಯುತ್ತಮ ಕಾರ್ಯಸಾಧಕನು.” (ಪವಿತ್ರ ಕುರ್ ಆನ್ 3: 173)

“ಅತ್ಯುತ್ತಮ ರಕ್ಷಕನೂ ಸಹಾಯಕನೂ ಆಗಿರುತ್ತಾನೆ.” (ಪವಿತ್ರ ಕುರ್ ಆನ್ 8:40)

ಪವಿತ್ರ ಕುರ್ ಆನ್ ನಲ್ಲಿ ಅಲ್ಲಾಹನಿಗೆ ವಕೀಲ್ ಎಂಬ ಪದವನ್ನು ಬಳಸಲಾಗಿದೆ. ನಮ್ಮ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸಲು ಅರ್ಹತೆಯಿರುವ, ನಮ್ಮ ಸಮಸ್ಯೆಗಳನ್ನು ನಿಖರವಾಗಿ ಅರಿಯುವ ಮತ್ತು ಅದಕ್ಕೆ ಸೂಕ್ತವಾದ ಪರಿಹಾರವನ್ನು ನೀಡುವವನಾಗಿರುತ್ತಾನೆ. ನಮಗೆ ಆಸಕ್ತಿಯಿರುವ ವಿಷಯಗಳಲ್ಲಿ ಕಾಲಾತೀತವಾದ ಎಲ್ಲಾ ಬೇಡಿಕೆಗಳನ್ನು ಆಲಿಸುವ ಮತ್ತು ಅವುಗಳ ಗುಣಲಕ್ಷಣಗಳ ಬಗ್ಗೆ ಅನನ್ಯವಾದ ಜ್ಞಾನ ಹೊಂದಿರುವ ನ್ಯಾಯಾಧೀಶನಾಗಿರುತ್ತಾನೆ. ತಾನು ಉದ್ದೇಶಿಸುವುದನ್ನೆಲ್ಲಾ ಮಾಡುವ ಸಾಮರ್ಥ್ಯವಿರುವವನಾಗಿರುತ್ತಾನೆ. ಅವನು ಉದ್ದೇಶಿಸುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಮತ್ತು ಅವನು ತಡೆದುದನ್ನು ಬದಲಾಯಿಸುವ ಶಕ್ತಿ ಯಾರಿಗೂ ಇಲ್ಲ.

“ಅವರೊಡನೆ ಹೇಳಿರಿ- ಅಲ್ಲಾಹನೇ ನಮಗಾಗಿ ಲಿಖಿತಗೊಳಿಸಿದುದರ ಹೊರತು ಬೇರಾವುದೂ (ಒಳಿತು ಕೆಡುಕು)ನಮ್ಮನ್ನು ಬಾಧಿಸುವುದಿಲ್ಲ. ಅಲ್ಲಾಹನೇ ನಮ್ಮ ಮಾಲಿಕನಾಗಿರುತ್ತಾನೆ. ಸತ್ಯ ವಿಶ್ವಾಸಿಗಳು ಅವನ ಮೇಲೆಯೇ ಭರವಸೆಯನ್ನಿಡಬೇಕು.” (ಪವಿತ್ರ ಕುರ್ ಆನ್ 9:51)

ನಮ್ಮ ಆರ್ಥಿಕ, ರಾಜಕೀಯ , ಸಾಮಾಜಿಕ, ಕೌಟುಂಬಿಕ, ಆರೋಗ್ಯ ಸಮಸ್ಯೆ ಯಾವುದೂ ಅಲ್ಲಾಹನು ಇಚ್ಚಿಸದೆ, ತೀರ್ಮಾನಿಸದೆ ಏನೂ ಸಂಭವಿಸಲಾರದು. ಅಲ್ಲಾಹನ ಅಭಯ ಇದ್ದರೆ ನಮ್ಮ ಶತ್ರುಗಳಿಗೂ ಏನೂ ಮಾಡಲು ಸಾಧ್ಯವಾಗದು. ನಾವು ಅಲ್ಲಾಹನ ಮೇಲೆ ಅವಲಂಬಿತರಾಗಿದ್ದರೆ ಲೌಖಿಕ ಜೀವನದಲ್ಲಿ ಬರುವಂತಹ ಸಮಸ್ಯೆಗಳು, ಸನ್ನಿವೇಶಗಳು ಎಷ್ಟೇ ಕಷ್ಟವಾಗಿದ್ದರೂ ಹೃದಯ, ಆತ್ಮ, ಮನಸ್ಸು ಎಲ್ಲವೂ ಅಲ್ಲಾಹನೊಂದಿಗೆ ನಿಕಟ ಸಂಬಂಧ ಹೊಂದಿರುವುದು.

ತವಕ್ಕುಲ್ ಎಂದರೆ ಆಲಸ್ಯದಿಂದ ಮನೆಯಲ್ಲಿ ಕುಳಿತು ಅಲ್ಲಾಹನ ಮೇಲೆ ಭರವಸೆಯಿಡುವುದಲ್ಲ. ಸಹನೆ, ಪರಿಶ್ರಮ, ನಂಬಿಕೆ ಮತ್ತು ತವಕ್ಕುಲ್ ಮಧ್ಯೆ ಗಾಢವಾದ ಸಂಬಂಧವಿದೆ. ನಿರಂತರ ಪರಿಶ್ರಮ ಪಟ್ಟ ನಂತರ ಪರಿಹಾರ ಮತ್ತು ವಿಮೋಚನೆಯನ್ನು ಪ್ರಾರ್ಥನೆಯೊಂದಿಗೆ ಸಹನೆಯಿಂದ ನಿರೀಕ್ಷಿಸಬೇಕು. ರೋಗಿಯಾದಾಗ ತಜ್ಞ ವೈದ್ಯರನ್ನು ಸಂಪರ್ಕಿಸಿ ಅಗತ್ಯವಿರುವ ಪರೀಕ್ಷೆಗಳನ್ನು ನಡೆಸಿ ಸರಿಯಾದ ಚಿಕಿತ್ಸೆ ಮತ್ತು ಔಷಧಿಯನ್ನು ಪಡೆಯುಬೇಕು. ಅನಂತರ ಕೇವಲ ಔಷಧ ಮತ್ತು ವೈದ್ಯರನ್ನು ಅವಲಂಭಿಸದೆ ಅಲ್ಲಾಹನ ಮೇಲೆ ಭರವಸೆಯಿಟ್ಟು ರೋಗ ಶಮನಕ್ಕಾಗಿ ಪ್ರಾರ್ಥಿಸಬೇಕು. ಆರಂಭದಲ್ಲಿ ಅಲ್ಲಾಹನು ನಮ್ಮನ್ನು ಪರೀಕ್ಷಿಸುವನು ಮತ್ತು ನಂತರ ಅವನು ಕರುಣೆಯ ಕೃಪಾಕಟಾಕ್ಷವನ್ನು ತೆರೆಯುವನು.

ಇಬ್ರಾಹೀಮ್(ಅ) ಅಲ್ಲಾಹನ ಮೇಲೆ ಭರವಸೆಯಿಟ್ಟಾಗ ಧಗಧಗಿಸುವ ಬೆಂಕಿಯು ತಂಪಾಗಿಯೂ, ಮೂಸಾ(ಅ)ರಿಗೆ ಫಿರ್ ಔನನಿಂದ ರಕ್ಷಣೆ ಹೊಂದಲು ಸಮುದ್ರವು ದಾರಿಯಾಗಿಯೂ ಮಾರ್ಪಟ್ಟಿತು. ಹೀಗೆ ಎಲ್ಲಾ ಪ್ರವಾದಿಗಳಿಗೂ ಅಲ್ಲಾಹನ ಮೇಲೆ ಭರವಸೆಯಿಡುವ ಸಂದಿಗ್ಧ ಪರಿಸ್ಥಿತಿಗಳು ಎದುರಿಸಿದ್ದರು. ಕೆಲವು ವಿಷಯಗಳು ಆರಂಭದಲ್ಲಿ ಒಳಿತಾಗಿ ಕಾಣದಿದ್ದರೆ ಹೀಗೆ ಏಕೆ ಸಂಭವಿಸಿತು? ಎಂದು ಆಲೋಚಿಸಬೇಡಿರಿ. ಅಲ್ಲಾಹನೊಂದಿಗೆ ದೃಢವಿಶ್ವಾಸವನ್ನಿಡಿರಿ. ಅದರ ಅಂತ್ಯವು ನಿಮಗೆ ಒಳಿತಾಗುವ ಸಾಧ್ಯತೆ ಇದೆ.

ವಿವಾಹ, ವಿದ್ಯಾಭ್ಯಾಸ, ಉದ್ಯೋಗ ಅಥವಾ ಕೆಲವೊಮ್ಮೆ ಯಾವುದಾದರೂ ವ್ಯವಹಾರಗಳು ಅಪಾಯದಲ್ಲಿ ಸಿಲುಕಿಸಬಹುದೇ ಎಂಬ ಭಯವಿದ್ದರೆ ರಕ್ಷಣೆಗಾಗಿ ಅಲ್ಲಾಹನೊಂದಿಗೆ ಪ್ರಾರ್ಥಿಸಿರಿ ನಂತರ ಅವನ ಮೇಲೆ ಭರವಸೆಯಿಟ್ಟು ತೀರ್ಮಾನ ಕೈಗೊಳ್ಳಿರಿ. ನಿಮ್ಮ ಬುದ್ಧಿವಂತಿಕೆ, ಸಾಮರ್ಥ್ಯ ಮತ್ತು ಜ್ಞಾನವನ್ನು ಉಪಯೋಗಿಸಿ ಅಲ್ಲಾಹನು ನೇರ ಮಾರ್ಗವನ್ನು ತೋರಿಸಿ ಕೊಡುವನೆಂಬ ಭರವಸೆಯಿಡಿರಿ. ಎಲ್ಲಾ ವ್ಯವಹಾರಗಳಲ್ಲಿ ಲಾಭ, ಹಾನಿ, ನಷ್ಟ ಸಂಭವಿಸುವ ಸಾಧ್ಯತೆ ಇದೆ. ನಷ್ಟ ಅಥವಾ ಲಾಭ ಸಂಭವಿಸುವಾಗ ಅದು ಅಲ್ಲಾಹನ ವಿಧಿ ಎಂದು ಸ್ವೀಕರಿಸಬೇಕು.

“ಯಾವುದಾದರೊಂದು ಅಭಿಪ್ರಾಯದಲ್ಲಿ ನೀವು ದೃಢ ನಿರ್ಧಾರ ತಾಳಿದರೆ ಅಲ್ಲಾಹನ ಮೇಲೆ ಭರವಸೆಯಿಡಿರಿ. ಅಲ್ಲಾಹನ ಮೇಲೆಯೇ ಭರವಸೆಯಿಟ್ಟು ಕಾರ್ಯವೆಸಗುವವರನ್ನು ಅವನು ಪ್ರೀತಿಸುತ್ತಾನೆ.” (ಪವಿತ್ರ ಕುರ್ ಆನ್ 3: 159)

ಈ ಜಗತ್ತಿನಲ್ಲಿ ವಾಸಿಸುವ ಪ್ರತಿಯೊಂದು ಜೀವಿಯು ಅಲ್ಲಾಹನ ಮೇಲೆ ಸಂಪೂರ್ಣ ಭರವಸೆಯೊಂದಿಗೆ ಜೀವಿಸುತ್ತದೆ. ಎಲ್ಲಾ ಜೀವಿಗಳು ಬೆಳಗ್ಗಿನ ಜಾವದಲ್ಲಿ ತನ್ನ ಖಾಲಿ ಹೊಟ್ಟೆಯಲ್ಲಿ ತನ್ನ ಮನೆಯಿಂದ ಹೊರಟು ಸಂಜೆಯಾಗುವಾಗ ಹೊಟ್ಟೆ ತುಂಬಾ ಆಹಾರವನ್ನು ಸೇವಿಸಿ ತನ್ನ ವಾಸಸ್ಥಳಕ್ಕೆ ಮರಳುತ್ತದೆ. ಮಾತ್ರವಲ್ಲ ತಮ್ಮ ಮರಿಮಕ್ಕಳಿಗೆ ಬೇಕಾದಂತಹ ಆಹಾರವನ್ನು ತೆಗೆದುಕೊಂಡು ಬರುತ್ತದೆ.

“ತಮ್ಮ ಆಹಾರವನ್ನು ಹೊತ್ತುಕೊಂಡು ತಿರುಗಾಡದಿರುವ ಎಷ್ಟೋ ಪ್ರಾಣಿಗಳಿವೆ. ಅಲ್ಲಾಹನು ಅವುಗಳಿಗೆ ಅಹಾರ ಕೊಡುತ್ತಾನೆ, ನಿಮ್ಮ ಅನ್ನದಾತನೂ ಅವನೇ. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.” (ಪವಿತ್ರ ಕುರ್ ಆನ್ 29 :40)

ಅಲ್ಲಾಹನ ಮೇಲೆ ಭರವಸೆಯಿಡುವುದಕ್ಕಿಂತ ಮುಂಚೆ ಅಲ್ಲಾಹ್ ಯಾರು ಎಂಬುದನ್ನು ಸರಿಯಾಗಿ ಅರಿತಿರಬೇಕು. ಪವಿತ್ರ ಕುರ್ ಆನ್ ನಲ್ಲಿ ಅಲ್ಲಾಹನ ಮೇಲೆ ಭರವಸೆಯಿಡಿರಿ ಎಂದು ಆಜ್ಞಾಪಿಸುವಾಗ ಅಲ್ಲಾಹನ ಕೆಲವು ಗುಣನಾಮಗಳನ್ನು ಪ್ರಸ್ತಾಪಿಸಲಾಗಿದೆ.

“ನನಗೆ ಅಲ್ಲಾಹನೇ ಸಾಕು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ನಾನು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇನೆ ಮತ್ತು ಅವನು ’ವಿಶ್ವ ಮಹಾಸಿಂಹಾಸನ’ದ ಮಾಲಿಕನಾಗಿದ್ದಾನೆ.” (ಪವಿತ್ರ ಕುರ್ ಆನ್ 9:129)

“ಸ್ವಯಂ ಜೀವಂತನೂ ಅಮರನೂ ಆಗಿರುವ ದೇವನ ಮೇಲೆ ಭರವಸೆಯಿಡಿರಿ.” (ಪವಿತ್ರ ಕುರ್ ಆನ್ 25: 58)

ಮನೆಯಿಂದ ಹೊರಗೆ ಹೋಗುವಾಗ, ಮಲಗಲು ಹೋಗುವಾಗ ಮಾಡುವ ಕೊನೆಯ ಪ್ರಾರ್ಥನೆಯು ನಮಗೆ ತವಕ್ಕುಲ್ ನ ಮಹತ್ವವನ್ನು ಪುನಃ ಪುನಃ ನೆನಪಿಸುತ್ತದೆ. ಇಡೀ ಮಾನವಕುಲ ನಿಮಗೆ ಹಾನಿ ಮಾಡಲು ಪ್ರಯತ್ನಿಸಿದರೆ ಅಲ್ಲಾಹನು ಬಯಸದಿದ್ದರೆ ಹಾನಿ ಮಾಡಲು ಸಾಧ್ಯವಿಲ್ಲ. ಇಡೀ ಮಾನವ ಕುಲ ನಿಮಗೆ ಸಹಾಯ ಮಾಡಲು ಒಟ್ಟುಗೂಡಿದರೆ ಅಲ್ಲಾಹನು ಬಯಸದಿದ್ದರೆ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಎಲ್ಲಾ ಪರಿಶ್ರಮಗಳನ್ನು ಮಾಡಿದ ನಂತರ ಎಲ್ಲವೂ ನೇರ ಮಾರ್ಗದಲ್ಲಿ ನಡೆಯಲು ಅಲ್ಲಾಹನ ಸಹಾಯ ಮತ್ತು ಬೆಂಬಲವನ್ನು ನಿರೀಕ್ಷಿಸಬೇಕು. ಅಲ್ಲಾಹನು ನಿಮಗೆ ನೀಡಲು ಇಚ್ಛಿಸಿದುದು ಭೂಮಿಯ ಯಾವ ಮೂಲೆಯಲ್ಲಿದ್ದರೂ ಪರ್ವತಗಳ ಮಧ್ಯೆ ಇದ್ದರೂ ನಿಮ್ಮ ಬಳಿಗೆ ಬರುವುದು. ಅಲ್ಲಾಹನು ನಿಮಗೆ ವಿಧಿಸದಿರುವುದು ನಿಮ್ಮ ಕಣ್ಣ ಮುಂದೆ ಇದ್ದರೂ ನಿಮಗೆ ಸಿಗಲಾರದು. ಅಲ್ಲಾಹನ ಮೇಲೆ ಭರವಸೆ ಇಡುವವರಿಗೆ ಕಷ್ಟ ನಷ್ಟದ ಸಮಯದಲ್ಲಿ ಅಲ್ಲಾಹ್ ನಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ, ರಕ್ಷಿಸುತ್ತಾನೆ, ಪೋಷಿಸುತ್ತಾನೆ, ಸಹಾಯ ಮಾಡುತ್ತಾನೆಂಬ ಶುಭ ನಿರೀಕ್ಷೆಯಿಂದ ಹೃದಯವು ಶಾಂತವಾಗಿ, ದೃಢವಾಗಿ, ಪ್ರಬಲವಾಗಿ ಇರುವುದು.