ಸನ್ಮಾರ್ಗ ವಾರ್ತೆ
✍️ ಅಶ್ರಫ್ ಕೆ.
ನನಗೆ ಮೂವತ್ತು ವರ್ಷ ಪ್ರಾಯ. ನಾಲ್ಕು ವರ್ಷದಿಂದ ನನಗೆ ಓರ್ವ ಯುವತಿಯೊಂದಿಗೆ ಪ್ರೇಮವಿದೆ. ನಾವು ಎಷ್ಟು ಅನ್ಯೋನ್ಯವಾಗಿದ್ದೇವೆ ಎಂದು ಕೇಳಿದರೆ ಒಬ್ಬರನ್ನೊಬ್ಬರು ಬೇರ್ಪಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಲ್ಲಿದ್ದೇವೆ. ಅವಳನ್ನು ವಿವಾಹವಾಗುತ್ತೇನೆಂದು ನಮ್ಮ ಮನೆಯವರೊಂದಿಗೆ ಹಲವು ಬಾರಿ ಕೇಳಿದರೂ ಅವರು ಅನುಮತಿ ನೀಡಲಿಲ್ಲ. ಅವಳು ವಿಚ್ಛೇದಿತ ಮಹಿಳೆಯಲ್ಲವೇ ಎಂಬುದು ಅವರ ವಿರೋಧಕ್ಕೆ ಕಾರಣ. ಇನ್ನು ಅವಳ ಕುಟುಂಬಿಕರು ಕೂಡಾ ನಮ್ಮ ಮನೆಯವರಿಗೆ ಇಷ್ಟವಿಲ್ಲದ ಕಾರಣ ಅವರೂ ಒಪ್ಪುತ್ತಿಲ್ಲ. ಆದರೆ ನಾನು ಆ ಯುವತಿಯನ್ನು ದಿನಾಲೂ ಭೇಟಿ ಮಾಡುತ್ತೇನೆ. ನಾವಿಬ್ಬರೂ ಬಹಳ ಪ್ರೀತಿಸುತ್ತೇವೆ. ಅದು ಅನೈತಿಕ ಸಂಬಂಧಕ್ಕೆ ಕಾರಣವಾಗುತ್ತದೋ ಎಂದು ಕೂಡಾ ನಾನು ಹೆದರುತ್ತಿದ್ದೆ.
ಮುಂದೆ ಬೇರೆ ಯಾವುದೇ ದಾರಿ ಕಾಣದಾದಾಗ, ನಾವು ವಿವಾಹಿತರಾಗಿದ್ದೇವೆ ಎಂದು ಒಂದು ಕರಾರು ಪತ್ರವನ್ನು ಬರೆದೆವು. ಅದರಲ್ಲಿ ವಲೀಯ ಸ್ಥಾನದಲ್ಲಿ ನಾವು ಅಲ್ಲಾಹು ಸುಬ್ಹಾನಹು ವತಅಲಾ’ಎಂದು ಬರೆದೆವು. ಅಲ್ಲಾಹನಿಗಿಂತ ದೊಡ್ಡ ವಲೀ ಬೇರೆ ಯಾರಿರಲು ಸಾಧ್ಯ? ಮದುವೆಗೆ ಸಾಕ್ಷಿಗಳಾಗಿ ನಮ್ಮೊಂದಿಗಿರುವ ಇಬ್ಬರು ದೇವಚರರನ್ನು ಸೇರಿಸಿ ಕೊಂಡೆವು. ಆ ಎರಡು ಮಲಕ್‌ಗಳು ನಮ್ಮ ಪ್ರತಿಯೊಂದು ಕ್ರಿಯೆಯನ್ನು ಸ್ಪಷ್ಟವಾಗಿ ಬರೆದು ದಾಖಲಿಸಿಡುತ್ತಿದೆಯಲ್ಲವೇ. ಇದು ಬಹಳ ವಿಚಿತ್ರವೆಂದು ನನಗೆ ತಿಳಿದಿದೆ. ಆದರೆ ಅಲ್ಲಾಹನಿಗೆ ನಮ್ಮ ಸದುದ್ದೇಶ ತಿಳಿದಿದೆಯಲ್ಲವೇ? ತಮ್ಮ ಅಭಿಪ್ರಾಯವೇನು? ಈ ವಿವಾಹ ಮಾನ್ಯವಾಗಿದೆಯೇ? ಅಥವಾ ಇಲ್ಲವೇ?
ಓರ್ವ ಅನ್ಯ ಸ್ತ್ರೀಯೊಂದಿಗೆ ಇಂತಹ ಸಂಬಂಧಕ್ಕೆ ಇಸ್ಲಾಮೀ ಶರೀಅತ್‌ನಲ್ಲಿ ಯಾವುದೇ ಅನುಮತಿಯಿಲ್ಲ. ಇದನ್ನು ನೀವು ಪ್ರಥಮವಾಗಿ ತಿಳಿದುಕೊಳ್ಳಬೇಕು. ಇದು ಹಲವು ರೀತಿಯ ಅನೈತಿಕತೆಗೂ ಅನಾಹುತಗಳಿಗೂ ಕಾರಣವಾಗುತ್ತದೆ. ಮನುಷ್ಯನನ್ನು ವಂಚಿಸುವ ಶೈತಾನನ ಹಾದಿಯಲ್ಲಿದ್ದೀರಿ. “ಆದಮ್‌ರ ಸಂತತಿಗಳೇ, ಶೈತಾನನು ನಿಮ್ಮ ಮಾತಾಪಿತರನ್ನು ಸ್ವರ್ಗದಿಂದ ಹೊರ ಹಾಕಿದಂತೆ, ನಿಮ್ಮನ್ನು ಶೈತಾನನು ವಂಚನೆಗೆ ಒಳಪಡಿಸದಿರಲಿ.” (ಅಲ್ ಅಅರಾಫ್- 27) ಎಂದು ಅಲ್ಲಾಹನು ಮುನ್ನೆಚ್ಚರಿಕೆಯನ್ನು ನೀಡಿದ್ದಾನೆ.
ಆದ್ದರಿಂದ ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪಪಟ್ಟು ಈ ಸಂಬಂಧವನ್ನು ಕೊನೆಗೊಳಿಸಿ ಮದುವೆ ಮಾಡಿಕೊಡುವ ವಲೀಯ್ಯ್ ಬೇಕು, ಎರಡು ಸಾಕ್ಷಿಗಳು ಬೇಕು. ಇದು ವಿವಾಹವು ಧರ್ಮಬದ್ಧವಾಗುವ ಉಪಾಧಿಗಳು. ಸ್ತ್ರೀಯ ವಲೀಯು ಅವಳ ತಂದೆಯಾಗಿದ್ದಾರೆ. ತಂದೆ ಮರಣ ಹೊಂದಿದ್ದರೆ ಸಮೀಪದ ಸಂಬಂಧಿಕರು ನೆರವೇರಿಸಬೇಕು. ಸಾಕ್ಷಿಗಳು ಮನುಷ್ಯರೇ ಆಗಬೇಕು. ದೇವಚರರು ಆಗುವುದಿಲ್ಲ. ಸಾಕ್ಷಿಗಳಲ್ಲಿ ಇರಬೇಕಾದ ಕೆಲವು ಗುಣಗಳನ್ನು ವಿದ್ವಾಂಸರು ಸೂಚಿಸಿರುವರು. ಅಲ್ಲಾಹನನ್ನು ವಲೀಯ್ಯ್ ಮಾಡಿ, ಮಲಕ್‌ಗಳನ್ನು ಸಾಕ್ಷಿಗಳನ್ನಾಗಿ ಮಾಡಿ ನೀವು ಈ ಪವಿತ್ರವಾದ ಒಪ್ಪಂದವನ್ನು ಹಾಸ್ಯಾಸ್ಪದಗೊಳಿಸಿದ್ದೀರಿ. ಶರೀಅತ್‌ನ ನಿಯಮಗಳಿಂದ ಮುಖ ತಿರುಗಿಸಿದ್ದೀರಿ. ಇದು ಅಮಾನ್ಯವಾದ ವಿವಾದವಾಗಿದೆ. ಬಳಿಕ ಆಕೆಯ ತಂದೆಯನ್ನು ನಿಮ್ಮ ವಿವಾಹಕ್ಕೆ ಒಪ್ಪಿಸಲು ಸಾಧ್ಯವಾದರೆ, ವಲೀಯ್ ಮತ್ತು ಸಾಕ್ಷಿಗಳೊಂದಿಗೆ ಶರೀಅತ್ ನಿಯಮದಂತೆ ವಿವಾಹವಾಗಿರಿ. ಸದುದ್ದೇಶಗಳು ಕೆಡುಕನ್ನು ಮಾಡುವುದಕ್ಕೆ ನ್ಯಾಯವಾಗುವುದಿಲ್ಲ.ಮೊದಲ ನೋಟಕ್ಕೆ ಇದೊಂದು ಕಾಲ್ಪನಿಕ ಪ್ರಶ್ನೆ ಮತ್ತು ಉತ್ತರದಂತೆ ಕಾಣಿಸಬಹುದು.ಅಷ್ಟೂ ವಿಚಿತ್ರವಾದ ರೀತಿಯಲ್ಲಿ ಈ ವಿವಾಹ ನಡೆದಿದೆ. ಆದರೆ ಇದು ನಿಜವಾದ ಒಂದು ಪ್ರಶ್ನೆಯಾಗಿದೆ. Isಟಚಿm ತಿebಟಿeಣ (24.4.2019)ನಲ್ಲಿ ನಿಮಗೆ ಇದನ್ನು ಕಾಣಬಹುದು.
ಇದು ಒಟ್ಟಿಗೆ ಜೀವಿಸುವುದರ (ಲಿವೀಂಗ್ ಟುಗೆದರ್) ಹೊಸ ರೂಪ ಮಾತ್ರ. ಒಂದು ರೀತಿಯ ಧಾರ್ಮಿಕ ಪ್ರಶ್ನೆ ಮತ್ತು ದೇವಭಯ ಈರ್ವರಿಗೆ ಇದ್ದ ಕಾರಣ ಅವರು ತಮ್ಮ ಅನೈತಿಕ ಸಂಬಂಧವನ್ನು ಇಸ್ಲಾಮಿನೊಂದಿಗೆ ಜೋಡಿಸಲು ಪ್ರಯತ್ನಿಸಿದ್ದಾರೆ. ಈ ಪ್ರವೃತ್ತಿ ಹೊಸ ತಲೆಮಾರಿನಲ್ಲಿ ಶಕ್ತಿ ಪಡೆಯುತ್ತಿದೆಯೆಂದು ಮೇಲೆ ಸೂಚಿಸಿದ ವೆಬ್‌ಸೈಟ್ ಅನ್ನು ನೋಡಿದಾಗ ಮನವರಿಕೆಯಾಯಿತು.
ನಮ್ಮಲ್ಲೂ ಇಂತಹ ವಾದಗಳು ಕಂಡುಬರುವ ಸಾಧ್ಯತೆ ಇದೆ. ಅಂತಹ ಕೆಲವು ಸುಳಿವುಗಳು ಕೆಲವು ಮದುವೆ ಸಮಾರಂಭಗಳಲ್ಲಿಯೂ ಕಂಡು ಬಂದಿದೆ. ಇದು ಸಾಂಪ್ರದಾಯಿಕ ವಿಧಾನಗಳಲ್ಲಿ ಸಣ್ಣ ಬದಲಾವಣೆಗಳನ್ನು ತರುವ ಮೂಲಕ ಆರಂಭವಾಗಿದೆ. ಹಾಗೆ ಮಾಡುವುದರಲ್ಲಿ ತಪ್ಪೇನಿದೆ? ಪ್ರವಾದಿ(ಸ)ರು ಅದನ್ನು ವಿರೋಧಿಸಿದ್ದಾರಾ? ಇದ್ದರೆ ಸಾಕ್ಷಿ ಎಲ್ಲಿದೆ ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಾರೆ. ವಿವಾಹ ಸಮಾರಂಭದ ಸಾಂಪ್ರದಾಯಿಕ ವಿಧಾನಗಳೊಂದಿಗೆ ಅವರು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಲಿಬರಿಝಮ್‌ನ ಸ್ತ್ರೀವಾದವು ಅವರನ್ನು ಸ್ವಲ್ಪ ಮಟ್ಟಿಗೆ ಪ್ರಭಾವಿತಗೊಳಿಸಿರಬಹುದು. ಮದುವೆ ಸಮಾರಂಭವನ್ನು ಬಹುತೇಕವಾಗಿ ಇಸ್ಲಾಮೀ ಸಂಪ್ರದಾಯದಂತೆ ನಡೆಸಲಾಗುತ್ತಿದೆ. ವರದಕ್ಷಿಣೆಯಂತಹ ಕೆಲವು ಅನಿಷ್ಟಗಳು ಮಾತ್ರ ಇದುವರೆಗೆ ಕಂಡು ಬಂದಿದೆ. ಇಂತಹ ಕೆಲವು ಅನಿಷ್ಟವನ್ನು ಹೊರತು ಪಡಿಸಿದರೆ ವಿಶ್ವದ ಎಲ್ಲಾ ಮುಸ್ಲಿಮ್ ಸಮೂಹಗಳಲ್ಲೂ ಸಮಾನ ರೀತಿಯಲ್ಲೇ ವಿವಾಹ ನಡೆಯುತ್ತಿದೆ. ಪ್ರವಾದಿಯವರ(ಸ) ಕಾಲದ ವಿವಾಹದ ಮಾದರಿಯನ್ನೇ ತಲೆ ತಲಾಂತರಗಳಿಂದ ಎಲ್ಲಾ ಕಡೆಯೂ ಸಮಾನವಾಗಿ ನಡೆಸಲಾಗುತ್ತಿದೆ. ಅಹ್ಲುಸುನ್ನತ್ ವಲ್ ಜಮಾಅತ್‌ನ ಹನಫಿ, ಮಾಲಿಕಿ, ಹಂಬಲಿ, ಶಾಫಿಈ ಎಂಬ ನಾಲ್ಕು ಮುಖ್ಯ ಮದ್‌ಹಬ್ ಅನ್ನು ಪರಿಶೀಲಿಸಿದರೂ ಇದೇ ಸ್ವರೂಪ ಕಾಣಲು ಸಾಧ್ಯವಿದೆ. ಮದುವೆಯ ಉಪಾಧಿಗಳು ಬಹಳ ಮುಖ್ಯ. ಅವುಗಳನ್ನು ಹದೀಸ್‌ಗಳ ಆಧಾರದಲ್ಲಿ ರಚಿಸಲಾಗಿದೆ. ಲಿಬರಲ್ ಆಕ್ರಮಣವು ಇತರ ಸಮುದಾಯವನ್ನು ಸ್ಪಷ್ಟವಾಗಿ ಘಾಸಿಗೊಳಿಸುತ್ತಿರುವಾಗ, ಅದನ್ನು ಎದುರಿಸುವ ತಾಕತ್ತು ಇರುವುದು ಮುಸ್ಲಿಮ್ ಸಮೂಹದಲ್ಲಿ ಮಾತ್ರ. ಆದರೂ ಅದರ ಪರೋಕ್ಷ ಪ್ರಭಾವವು ಅವರಲ್ಲಿ ಉಂಟಾಗುತ್ತದೆ. ಅದು ಹೆಚ್ಚಾಗಿ ಸ್ತ್ರೀ-ಪುರುಷ ಸಂಬಂಧಗಳಲ್ಲಿ ಪ್ರತಿಫಲಿಸುತ್ತದೆ. ಕುರ್‌ಆನ್ ಮತ್ತು ಸುನ್ನತ್‌ಗಳ ಆಧಾರದಲ್ಲಿ ಮದ್‌ಹಬ್‌ಗಳು ಅಭಿವೃದ್ಧಿಪಡಿಸಿದ ವಿವಾಹ ಪದ್ಧತಿಗಳು ಲಿಬರಲ್ ಆಕ್ರಮಣವನ್ನು ತಡೆದುಕೊಳ್ಳಲು ಪರ್ಯಾಪ್ತವಾಗಿದೆಯೆಂದು ಅದರ ಕುರಿತು ಸಾಮಾನ್ಯ ಜ್ಞಾನವಿರುವವರಿಗೆ ಅರ್ಥವಾಗದಿರಲಿಕ್ಕಿಲ್ಲ. ಮನುಷ್ಯನ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ಕರಾರು ಯಾವುದೆಂದು ಕೇಳಿದರೆ ಅದಕ್ಕಿರುವ ಒಂದೇ ಒಂದು ಉತ್ತರ- ವಿವಾಹದ ಒಪ್ಪಂದ. ಈ ಕರಾರು ಸ್ನೇಹ ಮತ್ತು ಕರುಣೆಯಲ್ಲಿ ಅದಿಷ್ಠಿತವಾಗಿರಬೇಕೆಂದು ಇಸ್ಲಾಮ್ ಒತ್ತಾಯಿಸುತ್ತದೆ. ಮೊದಲೇ ಹೇಳಿದಂತೆ ವಿವಾಹದಲ್ಲಿ ಉಪಾಧಿಗಳು ಮುಖ್ಯ. ಅದು ಪೂರ್ತಿಗೊಂಡಿರಬೇಕು. ಅಂತಾದರೆ ಮಾತ್ರ ವಿವಾಹವು ಮಾನ್ಯವಾಗುತ್ತದೆ.
ವಿಧಾನಗಳ ವಿಷಯದಲ್ಲಿ ಮದ್‌ಹಬ್‌ಗಳ ನಡುವೆ ವ್ಯತ್ಯಾಸವಿದೆಯಲ್ಲವೇ ಎಂದು ಕೆಲವರು ಕೇಳಬಹುದು. ಅಂತಹ ಭಿನ್ನಾಭಿಪ್ರಾಯಗಳು ನಿಜವಾಗಿ ಅನುಗ್ರಹವಾಗಿದೆ. ವಿವಾಹವು ಕೆಲವು ಸಂಕೀರ್ಣತೆಗಳಿಗೆ ತಲುಪುವಾಗ ಈ ಭಿನ್ನಾಭಿಪ್ರಾಯದಲ್ಲಿ ಯಾವುದಾದರೂ ಒಂದು ರಕ್ಷಣೆಗೆ ಬರುತ್ತದೆ ಎಂಬುದಾಗಿದೆ. ಶಾಫೀ ಕರ್ಮಶಾಸ್ತ್ರದಲ್ಲಿ ನಾನು ನಿಮಗೆ ವಿವಾಹ ಮಾಡಿಕೊಟ್ಟಿದ್ದೇನೆ ಎಂಬ ಮಾತನ್ನು (ಸ್ವೀಗ) ಹೇಳುವುದು ಎಂಬುದು ಒಂದನೆಯ ಉಪಾಧಿ. ಇನ್ನೊಂದು ಕಾರ್ಯ ನಡೆಸಿದರೆ ಮಾತ್ರ ಆ ಉಪಾಧಿಯು ಪೂರ್ಣಗೊಳ್ಳುವುದು ಎಂಬ ಶರ್ತ ಇರಿಸಬಾರದು. “ನೀನು ನನಗೆ ಒಂದು ಮನೆ ಕೊಟ್ಟರೆ ನಾನು ನನ್ನ ಮಗಳನ್ನು ನಿನಗೆ ವಿವಾಹ ಮಾಡಿಕೊಡುತ್ತೇನೆ. ಒಂದು ತಿಂಗಳಿಗೆ ನನ್ನ ಮಗಳನ್ನು ನಿನಗೆ ವಿವಾಹ ಮಾಡಿಕೊಟ್ಟೆ” ಎಂದು ನಿಶ್ಚಿತ ಕಾಲವನ್ನು ನಿರ್ಧರಿಸಿದರೆ ವಿವಾಹ ಅಸಿಂಧುವಾಗುತ್ತದೆ. ಉಪಯೋಗಿಸುವ ಪದಗಳು ವಿವಾಹವನ್ನು ಸ್ಪಷ್ಟವಾಗಿ ಸೂಚಿಸಬೇಕು. ಸವ್ವಜತುಕು, ಅನ್‌ಕಹೌತುಕ, ತಸವ್ವಜುತು’ ಎಂಬಂತಹ ಪದಗಳು.
ಶಾಫೀ ಕರ್ಮಶಾಸ್ತ್ರದಲ್ಲಿ ವರನು ಪೂರೈಸಬೇಕಾದ ಶರತ್ತುಗಳನ್ನು ಸಹ ನಿಶ್ಚಯಿಸಿದೆ. ರಕ್ತ ಸಂಬಂಧ, ಸ್ತನಪಾನ ಸಂಬಂಧ, ವಿವಾಹ ಸಂಬಂಧದಿಂದ ತನಗೆ ವಿವಾಹ ನಿಷಿದ್ಧವಾದ ಮಹಿಳೆ ಆಗಿರಬಾರದು. ನಿರ್ಬಂಧಗೊಳಿಸಿದ್ದ ವಿವಾಹ ನಡೆಸಬಾರದು. ಸ್ವತಃ ಇಷ್ಟಪಟ್ಟಿರಬೇಕು. ಇವೆಲ್ಲಾ ಶರ್ತಗಳು ವಧುವಿಗೂ ಅನ್ವಯಿಸುತ್ತದೆ. ತಲಾಖ್ ಅಥವಾ ಪತಿಯ ಮರಣದ ಕಾರಣದಿಂದ ಇದ್ದತ್‌ನಲ್ಲಿ ಇರುವ ಸ್ತ್ರೀಯಾಗಿರಕೂಡದು.
ವಿವಾಹಕ್ಕೆ ಎರಡು ಪುರುಷ ಸಾಕ್ಷಿಗಳು ಬೇಕು. ಅವರು ಊರಿನಲ್ಲಿ ಗೊಂದಲವೆಬ್ಬಿಸುವವರೂ, ತೊಂದರೆ ಕೊಡುವವರೂ ಆಗಿರಬಾರದು. ವಲೀಯನ್ನು ಓರ್ವ
ಸಾಕ್ಷಿದಾರನೆಂದು ಪರಿಗಣಿಸುವಂತಿಲ್ಲ. ಆತ ವಿಲಾಯತ್ ಅನ್ನು ಇನ್ನೋರ್ವನಿಗೆ ವರ್ಗಾಯಿಸಿದರೂ ಕೂಡಾ. ಏಕೆಂದರೆ, ಆಗಲೂ ಅವನು ವಲೀಯೇ ಆಗಿರುತ್ತಾನೆ. ವಲೀಯ್ಯ್ ಗೂ ಉಪಾಧಿಗಳಿವೆ. ಆತ ನಿರ್ಬಂಧಿತಾವಸ್ಥೆಯಲ್ಲಿ ವಿಲಾಯತ್ ನಿರ್ವಹಿಸುವವನಾಗಿರಬಾರದು. ತನ್ನಿಷ್ಟದ ಪ್ರಕಾರ ಆಗಿರಬೇಕು. ಮುಸ್ಲಿಮನಾಗಿರಬೇಕು ಎಂಬುದೂ ಶರ್ತವಾಗಿದೆ. ತಾನು ನಿಕಾಹ್ ಮಾಡಿಕೊಡುವ ವಧು ತನಗೆ ವಿವಾಹ ನಿಷಿದ್ಧ(ಮಗಳಂತೆ)ವಾಗಿರಬೇಕು. ನ್ಯಾಯ ವಂತನಾಗಿರಬೇಕು.
ಹನಫಿ ಕರ್ಮಶಾಸ್ತ್ರದಲ್ಲಿ
ಹನಫಿ ಮದ್‌ಹಬ್‌ನ ವಿವಾಹ ಪದ್ಧತಿಯು ಬಹುತೇಕ ಇದೇ ರೀತಿಯಿದೆ. ವಿವಾಹ ಮಾಡಿಕೊಟ್ಟೆ ಅದನ್ನು ಸ್ವೀಕರಿಸಿದೆ. ಎಂಬಂತಹ ಪದಗಳು/ಸ್ವೀಗಗಳು ಇರಬೇಕು. ಈಜಾಬ್, ಖಬೂಲ್ ಎಂಬುದು ಇದರ ಸಾಂಕೇತಿಕ ಪದ. `ಸವ್ವಜ್‌ತುಕ’ ಎಂಬಂತಹ ಸ್ಪಷ್ಟವಾದ ಸ್ವೀಗಗಳು ಒಳ್ಳೆಯದು. ಈಜಾಬ್ ಮತ್ತು ಖಬೂಲು ವಿರುದ್ಧವಾಗಬಾರದು ಎಂದೂ ಇದೆ.
ಉದಾಹರಣೆಗೆ, ಇಷ್ಟು ಸ್ವರ್ಗಕ್ಕೆ ಮಹರ್ ನಿಶ್ಚಯಿಸಿ ವಿವಾಹ ಮಾಡಿಕೊಟ್ಟಿದ್ದೇನೆ ಎಂದು ಹೇಳುವಾಗ, ಆ ಮಹ್ರ್ ಇಲ್ಲದೆ ವಿವಾಹ ಮಾಡಿ ಕೊಟ್ಟಿದ್ದನ್ನು ನಾನು ಸ್ವೀಕರಿಸಿದ್ದೇನೆ ಎಂದು ಹೇಳಿದರೆ ವಿವಾಹವು ಸಿಂಧುವಾಗುವುದಿಲ್ಲ. ಇನ್ನು ನಿಶ್ಚಿತ ಅವಧಿಗೆ ವಿವಾಹ ಮಾಡಲಾಗಿದೆಯೆಂದರೂ ಸರಿಯಲ್ಲ. ಬುದ್ಧಿಸ್ತಿಮಿತದಲ್ಲಿರಬೇಕು, ಪ್ರಾಯ ಪೂರ್ತಿಯಾಗಿರಬೇಕು, ಸ್ವಾತಂತ್ರವಿರಬೇಕು… ಇವೆಲ್ಲಾ ವಧು-ವರರಿಗೆ ಇಬ್ಬರಿಗೂ ಅನ್ವಯವಾಗುತ್ತದೆ. ಇದ್ದತ್‌ನಲ್ಲಿರುವ ಮಹಿಳೆಯರನ್ನು ವಿವಾಹವಾಗಬಾರದು. ವಧು ಯಾರು? ವರ ಯಾರು? ಎಂದು ಎಲ್ಲರೂ ಸ್ಪಷ್ಟವಾಗಿ ಅರಿತಿರಬೇಕು. ಎರಡು ಸಾಕ್ಷಿಗಳಿರಬೇಕು. ಒಂದು ಸಾಕ್ಷಿ ಸ್ತ್ರೀಯಾದರೂ ಸಾಕು. ಬುದ್ಧಿಸ್ತಿಮಿತ, ನ್ಯಾಯವಂತ, ಪ್ರಾಯ ಪೂರ್ತಿಯಾಗಬೇಕು. ಮೊದಲಾದವು ಸಾಕ್ಷಿಗಳಿಗೂ ಅನ್ವಯವಾಗುತ್ತದೆ.
ಇತರ ಮದ್‌ಹಬ್‌ಗಳ ಬಹುತೇಕ ವಿದ್ವಾಂಸರಿಗಿಂತ ಭಿನ್ನವಾದ ಒಂದು ವಿಷಯ ಹನಫಿಯಲ್ಲಿದೆ. ಮಹಿಳೆ ಬುದ್ಧೀಮತಿಯೂ, ಪ್ರಾಯಪೂರ್ತಿಯಾದವಳೂ, ಕಾರ್ಯಪ್ರಾಪ್ತೆಯಾಗಿದ್ದವಳಾದರೆ ವಲೀಯ್ ಕಡ್ಡಾಯವಲ್ಲ ಎಂಬುದು ಅದು. ತಲಾಕ್‌ಗೆ ಸಂಬಂಧಿಸಿ ಹೇಳುತ್ತಾ, ಅವಳು ಇನ್ನೊಂದು ವಿವಾಹವಾಗಿ… (ಅಲ್‌ಬಕರ 230) ಎಂದು ಪವಿತ್ರ ಕುರ್‌ಆನ್‌ನಲ್ಲಿ ಬಂದಿದೆಯಲ್ಲಾ. ಇದು ಸ್ತ್ರಿಯು ಸ್ವಯಂ ವಿವಾಹವಾಗುವುದರ ಕುರಿತು ಎಂಬುದು ಇಮಾಮ್ ಅಬೂ ಹನೀಫರ ನಿಲುವು. ನಂತರ ಬಂದಂತಹ “ಅವರು ಇದ್ದತ್ ಪೂರ್ಣಗೊಳಿಸಿದರೆ ನಂತರ ಸ್ವಂತ ವಿಷಯದಲ್ಲಿ ನ್ಯಾಯಯುತ ರೀತಿಯಲ್ಲಿ ತಮ್ಮ ಇಷ್ಟದಂತೆ ತೀರ್ಮಾನ ತೆಗೆದುಕೊಳ್ಳಲು (ಮಹಿಳೆಯರಿಗೆ) ಸ್ವಾತಂತ್ರ್ಯ ವಿದೆ.” (ಅಲ್‌ಬಕರ 234) ಎಂಬ ಸೂಕ್ತವು ಇನ್ನೊಂದು ಆಧಾರವಾಗಿ ಉಲ್ಲೇಖಿಸಲಾಗುತ್ತದೆ. ಈ ಎರಡು ಸೂಕ್ತಗಳಲ್ಲೂ ವಿವಾಹವನ್ನು ಮತ್ತು ಅದರ ಕರ್ತವ್ಯವನ್ನು ಸ್ತ್ರೀಯರೊಂದಿಗೆ ಸೇರಿಸಿ ಹೇಳಲಾಗಿದೆಯೆಂದೂ, ಆದ್ದರಿಂದ ವಲೀಯ್ ಇಲ್ಲದಿದ್ದರೂ ವಿವಾಹವು ಸಿಂಧುವಾಗುತ್ತದೆಯೆಂದು ಅಬೂ ಹನೀಫಾರ ವಾದ. ಇತರ ಮದ್‌ಹಬ್‌ನ ವಿದ್ವಾಂಸರು ಅಥವಾ ಇತರ ವಿದ್ವಾಂಸರು ಇದನ್ನು ಅಂಗೀಕರಿಸಿಲ್ಲ. ಇದೊಂದು ವ್ಯಾಖ್ಯಾನ ಮಾತ್ರವೆಂದೂ, ಸಹೀಹ್ ಆಗಿ ಬಂದ ಪ್ರವಾದಿ ವಚನಗಳಿಗೆ ವಿರುದ್ಧವಾಗಿದೆಯೆಂದು ಅವರು ಹೇಳುತ್ತಾರೆ. ವಲೀ ಇಲ್ಲದ ನಿಕಾಹ್ ಇಲ್ಲವೆಂದೂ ಸ್ತ್ರೀಯು ಸ್ವತಃ ಅಥವಾ ಇತರರಿಗೆ ನಿಕಾಹ್ ನೆರವೇರಿಸಿಕೊಡುವಂತಿಲ್ಲವೆಂದೂ ಪ್ರವಾದಿ ವಚನಗಳು ಇವೆ. “ಈ ವಿಷಯದಲ್ಲಿ ಗೊಂದಲ ಉಂಟು ಮಾಡುವುದು ತಪ್ಪು. ಇಂತಹ ಪುರಾವೆಗಳಿಲ್ಲದ ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸಬಾರದು. ವಲೀಯ್ ಅಗತ್ಯ ಎಂದು ಪ್ರವಾದಿ(ಸ)ರು ಸ್ಪಷ್ಟವಾಗಿ ತಿಳಿಸಿರುವಾಗ ಅವರ ವಿರುದ್ಧ ನಿಲುವು ತೆಗೆದುಕೊಳ್ಳುವುದು ಹೇಗೆ? ಪ್ರಸಿದ್ಧ ಮುಫ್ತಿ ಇಬ್ನು ಬಾಝ್ ಹೇಳಿದ ಮಾತುಗಳಿವು. ಈ ಅಭಿಪ್ರಾಯವನ್ನೇ ಮುಸ್ಲಿಮ್ ಜಗತ್ತು ಒಪ್ಪಿಕೊಂಡು ಬಂದಿದೆ.
ಹಂಬಲಿ ಕರ್ಮಶಾಸ್ತ್ರ
ಇತರ ಮದ್‌ಹಬ್‌ನಂತೆ ಹಂಬಲಿಯಲ್ಲಿಯೂ ವಿವಾಹ ಮಾಡಿಕೊಡುವುದು ಮತ್ತು ವಿವಾಹವನ್ನು ಸ್ವೀಕರಿಸಿದೆ ಎಂದು ಹೇಳುವುದೂ (ಈಜಾಬ್, ಖಬೂಲ್) ಸ್ಪಷ್ಟವಾದ ಪದಗಳಲ್ಲಿರಬೇಕು. ನಾನು ವಿವಾಹ ಮಾಡಿಕೊಟ್ಟೆ ಎಂದು ವಲೀಯ್ಯ್ ಹೇಳಬೇಕು. ಇದಕ್ಕೆ ಉತ್ತರವಾಗಿ ವರನು “ನಾನು ಸ್ವೀಕರಿಸಿದೆ” ಎಂದು ಮಾತ್ರ ಹೇಳಿದರೂ ತೊಂದರೆಯಿಲ್ಲ. ಈಜಾಬ್‌ಗೆ ಮೊದಲು ಖುಬೂಲ್ ಹೇಳಬಾರದು ಎಂದು ಮಾತ್ರ. ಬಲಾತ್ಕಾರವಲ್ಲದೆ ಇಬ್ಬರ ಇಷ್ಟ ಪ್ರಕಾರ ವಿವಾಹ ನಡೆಯಬೇಕು. ವಲೀಯ್ ಪುರುಷನಾಗಿರಬೇಕು. ಪ್ರಾಯಪೂರ್ತಿಯಾಗದವನೋ ಬುದ್ಧಿಸ್ತಿಮಿತದಲ್ಲಿ ಇಲ್ಲದವನೋ ಆಗಬಾರದು. ವಧು ಸ್ವತಃ ವಿಲಾಯತ್ ವಹಿಸಿಕೊಳ್ಳುವಂತಿಲ್ಲ. ವಿವಾಹಕ್ಕೆ ಎರಡು ಸಾಕ್ಷಿಗಳು ಬೇಕು. ಅದು ವರ ಮತ್ತು ವಧುವಿನ ಸಂಬಂಧಿಕರಾಗಬಾರದು. ಈರ್ವರೂ ತಮ್ಮ ವಿವಾಹವನ್ನು ನಿಷಿದ್ಧ ತಡೆಯಾಗಿರುವ ಶರಈ ಕಾರಣವೂ ಇರಬಾರದು.
ಮಾಲಿಕಿ ಮದ್‌ಹಬ್
ಈಜಾಬ್ ಮತ್ತು ಖಬೂಲ್‌ನ ಪದಗಳು ಸ್ಪಷ್ಟವೂ ನಿಖರವೂ ಆಗಿರಬೇಕು. ಈಜಾಬ್ ಹೇಳಿ ತುಂಬಾ ಸಮಯದ ಬಳಿಕ ಖುಬೂಲ್ ಹೇಳುವುದಲ್ಲ. ಅದು ಕೂಡಲೇ ಆಗಬೇಕು. ಇಂತಿಷ್ಟು ಸಮಯಕ್ಕೆ ಎಂದು ವಿವಾಹ ಮಾಡಿಕೊಡುವಂತಿಲ್ಲ, ಇಬ್ಬರಿಗೆ ಯಾವಾಗ ಬೇಕಾದರೂ ವಿಚ್ಛೇದನ ಪಡೆದು ಕೊಳ್ಳಬಹುದು ಎಂಬ ಆಯ್ಕೆಯೂ ಈಜಾಬ್-ಖುಬೂಲ್‌ನಲ್ಲಿರಬಾರದು. ಪುರುಷನಾಗಿರಬೇಕು, ಪ್ರಾಯ ಪೂರ್ತಿಯಾಗಿರಬೇಕು. ಸ್ವತಂತ್ರನಾಗಿರಬೇಕು, ಕಾರ್ಯಕ್ಷಮತೆ ಇರಬೇಕು, ಮುಸ್ಲಿಮನಾಗಿರಬೇಕು ಇವು ವಲೀ ಆಗಲು ಇರಬೇಕಾದ ಅರ್ಹತೆ. ಇಬ್ಬರು ಸಾಕ್ಷಿಗಳಲ್ಲಿ ಓರ್ವರು ವಲೀಯ್ ಆಗುವಂತಿಲ್ಲ.
ವಿವಾಹ ಸಿಂಧುವಾಗಲು ನಾಲ್ಕು ಮದ್‌ಹಬ್ ಗಳಲ್ಲಿ ಬಂದ ನಿಬಂಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದೆವು. ನಿಬಂಧನೆಗಳು ಎಲ್ಲವೂ ಸಮಾನವಾಗಿದೆ. ಪರಸ್ಪರ ತಪ್ಪಿದರೂ ಪುನಃ ತಿಳಿದುಕೊಳ್ಳುವಂತೆ ಹೋಲಿಕೆ ಇದೆ. ವಲೀಯ್ ಇಲ್ಲದಿದ್ದರೂ ವಿವಾಹ ಆಗಬಹುದು ಎಂಬ ಹನಫೀ ಕರ್ಮಶಾಸ್ತ್ರದ ಅಭಿಪ್ರಾಯ ಮಾತ್ರ ಭಿನ್ನವಾಗಿದೆ. ವಿವಾಹದ ಪ್ರತಿಯೊಂದು ಹಂತದಲ್ಲೂ ಸುವ್ಯಕ್ತವಾದ ದೇವಾದೇಶಗಳು ಇವೆ ಎಂಬುದೇ ಈ ವಿಷಯದಲ್ಲಿ ಮದ್‌ಹಬ್‌ಗಳೆಲ್ಲವೂ ಈ ರೀತಿ ಹೋಲಿಕೆ ಇರಲು ಸಾಧ್ಯವಾಗಿದೆ.
ಅದೇ ವೇಳೆ ಈ ಲೇಖನದ ಆರಂಭದಲ್ಲಿರುವ ಪ್ರಶ್ನೆಯಿಂದ ಸ್ಪಷ್ಟವಾಗುವಂತೆ, ಕೆಲವುರ ಮೇರೆಗಳು, ನಿಷೇಧಗಳನ್ನು ಪಾಲಿಸದಂತಹ ಸಂಬಂಧಗಳು ವ್ಯಾಪಕವಾಗುತ್ತಿದೆ. ಹೆಚ್ಚಿನವರಿಗೆ ಇದರ ಕುರಿತು ಜ್ಞಾನವಿಲ್ಲ. ಹೆಚ್ಚಾಗಿ ಮದ್‌ಹಬ್‌ನ ಒಳಗೋ ಹೊರಗೆಯೋ ಇಂತಹ ಸಮಸ್ಯೆಗಳಿಗೆ ಇಸ್ಲಾಮೀ ಪರಿಹಾರ ಸಾಧ್ಯವಿದೆ. ಮದ್‌ಹಬ್ ಬೇಕು ಎಂದು ಇರುವವರಿಗೆ ಕೆಲವು ಸಂಕೀರ್ಣ ಸಂದರ್ಭದಲ್ಲಿ ಸ್ವಂತ ಮದ್‌ಹಬ್‌ನಲ್ಲಿ ಪರಿಹಾರ ದೊರೆಯದಿದ್ದರೆ, ಇನ್ನೊಂದು ಮದ್‌ಹಬ್‌ನಲ್ಲಿ ಪರಿಹಾರವಿದ್ದರೆ ಅದನ್ನು ಸ್ವೀಕರಿಸಬಹುದು. ಇದನ್ನು ಸಾಂಕೇತಿಕ ಭಾಷೆಯಲ್ಲಿ ತಲ್‌ಫೀಕ್ ಎಂದು ಹೇಳಲಾಗುತ್ತದೆ. ಜೋಡಿಸುವುದು (ಹೊಲಿದು ಸೇರಿಸುವುದು) ಎಂದು ಇದರ ಭಾಷಾರ್ಥ. ಈಗಿನ ಕಾಲದಲ್ಲಿ ಸಾರ್ವಜನಿಕ ಅಂಗೀಕಾರವುಳ್ಳ ಮುಫ್ತಿಗಳು ಸಮಸ್ಯೆ ಬಂದಾಗ ಮೊದಲು ಮದ್‌ಹಬ್‌ನಲ್ಲಿ ಏನು ಹೇಳುತ್ತದೆ ಎಂದು ನೋಡುತ್ತಾರೆ. ಬಳಿಕ ಈ ಕಾಲಕ್ಕೆ ಸೂಕ್ತವಾದ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಮದ್‌ಹಬ್‌ನ ಅಭಿಪ್ರಾಯಗಳು ಆ ಸಂದರ್ಭಕ್ಕೆ ಸೂಕ್ತವಾಗಿಲ್ಲ ಎಂದು ಅನಿಸಿದರೆ ಪವಿತ್ರ ಕುರ್‌ಆನ್ ಮತ್ತು ಹದೀಸ್‌ನ ಆಧಾರದಲ್ಲಿ ತಮ್ಮದೇ ಅಭಿಪ್ರಾಯಕ್ಕೆ ತಲುಪುತ್ತಾರೆ. ಇಂತಹ ಸಂಕೀರ್ಣ ಸಮಸ್ಯೆಗಳು ಧಾರಾಳವಾಗಿ ಗೋಚರಿಸುವ ಒಂದು ರಂಗವು ವಿವಾಹ ಎಂಬುದರಲ್ಲಿ ಸಂಶಯವಿಲ್ಲ. ಹೊಸ ಪೀಳಿಗೆಗೆ ಮನವರಿಕೆ ಮಾಡುವ ಮತ್ತು ತೃಪ್ತಿಪಡಿಸುವ ಉತ್ತರವೂ ಬರುತ್ತಿದೆ. ಸ್ತ್ರೀ-ಪುರುಷ ಸಂಬಂಧಗಳ ಲಿಬರಲ್ ದೃಷ್ಟಿಕೋನವನ್ನು ತಡೆಯಲು ಜಾಗೃತಿ ಅಗತ್ಯ.